ದಾವಣಗೆರೆ:
ಪ್ರಬುದ್ಧ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ದೇಶದ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ದೇಶದ ಬೆನ್ನೆಲುಬಾದರೆ, ಬಾಲಕಾರ್ಮಿಕತೆ ದೇಶಕ್ಕೆ ಅಂಟಿರುವ ಪಿಡುಗು ಆಗಿದೆ. ಈ ಪಿಡುಗು ನಿರ್ಮೂಲನೆ ಯಾಗಬೇಕಾದರೆ, ಪ್ರಬುದ್ಧ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಬುದ್ಧರಾಗಿ, ಮಕ್ಕಳ ದುಡಿಮೆಯನ್ನು ಕೊನೆಗಾಣಿಸಿ, ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅಪಾಯಕಾರಿ ಉದ್ಯೋಗದಲ್ಲಿ ನೇಮಕ ಮಾಡುವುದು ಕಾನೂನು ಬಾಹೀರವಾಗಿದ್ದರು. ಇಂದು ಆರ್ಥಿಕ, ಸಾಮಾಜಿಕ ಕಾರಣಗಳಿಂದಾಗಿ ಮಕ್ಕಳು ಕಾರ್ಖಾನೆಗಳಲ್ಲಿ, ಮಂಡಕ್ಕಿ ಭಟ್ಟಿ, ಇಟ್ಟಿಗೆ ಭಟ್ಟಿ, ಹೋಟೆಲ್, ಗ್ಯಾರೆಜ್ ಸೇರಿದಂತೆ ಹಲವೆಡೆ ದುಡಿಯುತ್ತಿದ್ದಾರೆ. ಮಕ್ಕಳು ದುಡಿಮೆಯಲ್ಲಿ ತೊಡಗಿರುವುದು ಕಂಡು ಬಂದಾಗ, ಅವರನ್ನು ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸುವುದು ಪ್ರತಿಯೊಬ್ಬೆ ಆದ್ಯ ಕರ್ತವ್ಯವಾಗಬೇಕೆಂದು ಹೇಳಿದರು.
ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳನ್ನು ದುಡಿಮೆಯಿಂದ ಹೊರ ತರುವ ಮೂಲಕ ಶಾಲೆಗಳಿಗೆ ಕರೆದೊಯ್ದು ಶಿಕ್ಷಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು.
ಎಆರ್‍ಜಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, ಒಂದು ದೇಶದ ಜನತೆ ಮತ್ತು ಅವರ ಜೀವನದ ಗುಣಮಟ್ಟದ ಮೇಲೆ ದೇಶದ ವ್ಯಕ್ತಿತ್ವ ಅವಲಂಬಿಸಲಿದೆ. ಆರ್ಥಿಕವಾಗಿ ಸಶಕ್ತರಾಗಿರುವವರು ಬಾಲಕಾರ್ಮಿಕತೆಯಂತಹ ಪದ್ದತಿ ನಿವಾರಣೆಗೆ, ಆತ್ಮಸಾಕ್ಷಿಯಾಗಿ ಕೈಜೋಡಿಸದಿದ್ದರೆ ಈ ಪಿಡುಗಿಗೆ ಅಂತ್ಯವಿಲ್ಲ. ಕಾನೂನುಗಳ ಕೈಲಿ ಸಂಪೂರ್ಣವಾಗಿ ಈ ಪಿಡುಗಗಳನ್ನು ಕಿತ್ತೊಗೆಯಲು ಆಗಿಲ್ಲವಾದರೂ ನ್ಯಾಯಾಂಗವೆಂಬ ದೇಶದ ಆಶಾಕಿರಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಭಾರತದಂತಹ ದೇಶದಲ್ಲಿ ಕೇವಲ ಆರ್ಥಿಕ ಸಮಸ್ಯೆ ಬಾಲಕಾರ್ಮಿಕತೆ, ಜೀತ ಪದ್ದತಿಯಂತಹ ಪಿಡುಗಿಗೆ ಕಾರಣವಲ್ಲ. ಬದಲಾಗಿ ಇದಕ್ಕೆ ವ್ಯವಸ್ಥಿತ ಬಂಡವಾಳಶಾಹಿ ವ್ಯವಸ್ಥೆಯ ಸಂಚಿದ್ದು, ಇದರಿಂದ ಪರಿಹಾರ ದೊರಕಬೇಕಿದೆ. ಆರ್ಥಿಕ ಮತ್ತು ಭೌದ್ಧಿಕ ಬಡತನ ಕೊನೆಗಾಣಬೇಕಿದೆ. ಆಗ ಮಾತ್ರ ಇಂತಹ ಪಿಡುಗಿನ ನಿರ್ಮೂಲನೆ ಸಾಧ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಸುಮಾರು 75 ವರ್ಷಗಳ ಹಿಂದೆಯೇ ನಮ್ಮ ಸಂವಿಧಾನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನೀಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ವಕೀಲ ಎಲ್.ಹೆಚ್.ಅರುಣ್ ಕುಮಾರ್ ಬಾಲ ಕಾರ್ಮಿಕ ಪದ್ದತಿ ವಿರುದ್ಧದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಇಂದಿಗೂ ನಾವು ಭಿಕ್ಷೆ ಬೇಡುವ ಮಕ್ಕಳನ್ನು ಕಾಣುತ್ತಿರುವುದು ಶೋಚನೀಯವಾಗಿದೆ. ಉತ್ಪಾದನಾ ವೆಚ್ಚ ಕಡಿತಗೊಳಿಸಲು ಮಕ್ಕಳನ್ನು ಉದ್ಯಮದಲ್ಲಿ ದುಡಿಯಲು ಬಳಸಿಕೊಳ್ಳಲಾಗುತ್ತಿದ್ದು, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲಾ ಶ್ರಮಿಸಬೇಕಿದೆ. 2019ರ ‘ಮಕ್ಕಳ ದುಡಿಮೆ ಕನಸುಗಳ ಮೇಲೆ… ಆದರೆ ಕೆಲಸದಲ್ಲಿ ಅಲ್ಲ’ ಎಂಬುದನ್ನು ಸಾಕಾರಗೊಳಿಸುವಲ್ಲಿ ನಮ್ಮೆಲ್ಲರ ಪಾತ್ರವಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್ ಜಹೀರ್ ಬಾಷಾ, ಬಾಲಕಾರ್ಮಿಕ ಪದ್ಧತಿ ವಿರೋಧದ ಕುರಿತ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಡಂಬಡಿಕೆಯನ್ವಯ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬಾಲಕಾರ್ಮಿಕ ಪದ್ದತಿ ಕುರಿತಾದ ಕಾಯ್ದೆಯು 1986ರಲ್ಲಿ ಜಾರಿಗೆ ಬಂದಿದ್ದು, 2016 ರಲ್ಲಿ ತಿದ್ದುಪಡಿಯಾಗಿದೆ. ಈ ಕಾಯ್ದೆಯ ಸೆಕ್ಷನ್ 17 ರ ಪ್ರಕಾರ ಕಾರ್ಮಿಕ ಇಲಾಖೆ ಸೇರಿದಂತೆ ಇತರೆ 11 ಇಲಾಖೆಗಳ ಅಧಿಕಾರಿಗಳು ಇದರ ನಿರ್ಮೂಲನೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಬಾಲಕಾರ್ಮಿಕತೆಗೆ ಕಾರಣ ಹಲವಿದ್ದು, ಸಮಾಜದ ಎಲ್ಲಾ ಭಾಗೀದಾರರ ಸಹಭಾಗಿತ್ವವಿದ್ದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಅನೇಕ ಅರಿವು ಕಾರ್ಯಕ್ರಮ, ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2016 ಕ್ಕೆ ಬಾಲಕಾರ್ಮಿಕತೆ ನಿರ್ಮೂಲನೆ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ ಇದು ಸಾಧ್ಯವಾಗಿಲ್ಲ. ಆದ್ದರಿಂದ ಈ ಪಿಡುಗಿನ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯವಿದ್ದು, ಅಲ್ಲಿಯವರೆಗೆ ಈ ಪ್ರಯತ್ನ ನಿರಂತರವಾಗಿ ಸಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಕೊಡಿಸುವುದು ಪೋಷಕರು ಸೇರಿದಂತೆ ನಮ್ಮೆಲ್ಲರ ಹೊಣೆಯಾಗಿದೆ. 14 ವರ್ಷದ ನಂತರದ ಮಕ್ಕಳು ದುಡಿಯಬಹುದಾದರೂ ಅಪಾಯಕಾರಿ ಉದ್ಯೋಗದಲ್ಲಿ ಅವರನ್ನು ಬಳಸುವಂತಿಲ್ಲ. ಶಿಕ್ಷಣದಿಂದ ಮಾತ್ರ ಬಾಲಕಾರ್ಮಿಕತೆಗೆ ಮುಕ್ತಿ ಹಾಡಬಹುದಾಗಿದ್ದು, ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿ. ಅದನ್ನು ಜತನದಿಂದ ಕಾಪಾಡಬೇಕು. ಹಾಗೂ ದೇಶದ ಅಭಿವೃದ್ಧಿ ಹೊಂದಬೇಕಾದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಬಹು ಮುಖ್ಯವಾಗುತ್ತದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಹೆಚ್‍ಓ ಡಾ.ತ್ರಿಪುಲಾಂಭ, ಜಿಲ್ಲಾ ವಿಕಲಚೇತನರು ಹಾಗು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಅಧಿಕಾರಿ ಶಶಿಧರ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆಟೋ ಚಾಲಕರ ಸಂಘದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಪ್ತಗಿರಿ ಶಾಲಾ ಮಕ್ಕಳು ನಾಡಗೀತೆ ಹಾಡಿದರು.