ಹಾನಗಲ್ಲ :
ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ ಜನ್ಮವಾಗಿದ್ದು, ಮನಸ್ಸನ್ನು ನಿಯಂತ್ರಿಸಲಾಗದೆ ಜೀವನದಲ್ಲಿ ಸೋಲನ್ನು ಅನುಭವಿಸುವ ಜನತೆಗೆ ಡಿವೈನ್ ಪಾರ್ಕ ಅನ್ನ, ಕಾರ್ಯ, ಜ್ಞಾನ ದಾಸೋಹದ ಮೂಲಕ ಆತ್ಮ ಶಕ್ತಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಡಿವೈನ್ ಪಾರ್ಕನ ಡಿಐಓ ಅಧಿಕಾರಿ ಕೆ.ಸುಧೇಶ್ ರಾವ್ ತಿಳಿಸಿದರು.
ಹಾನಗಲ್ಲಿನಲ್ಲಿ ವಿವೇಕ ಜಾಗ್ರತ ಬಳಗ ಸ್ವಾಮಿ ವಿವೇಕಾನಂದರ 157 ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಬಳಗ ಸ್ಪುರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮನಸ್ಸಿನ ನಿಯಂತ್ರಣವೇ ಆಧ್ಯಾತ್ಮದ ಮೂಲ ಎಂಬುದನ್ನು ಅರಿಯಬೇಕು. ಕ್ರಿಕೇಟ್, ಸಿನೇಮಾ, ದಾರಾವಾಹಿಗಳನ್ನು ನೋಡಲು ಸಮಯ ಕಳೆಯುವ ನಾವು ಆಧ್ಯಾತ್ಮಿಕ ಚಿಂತನಾ ಸಭೆಗಳಿಗೆ ಹೋಗುವುದಿಲ್ಲ. ಮನುಷ್ಯ ಧರ್ಮ ದುರ್ಲಭ ಅದನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದ ಅವರು, ಮನುಷ್ಯ ಜನ್ಮ ಕ್ಷಣಿಕ ಈ ಕ್ಷಣ ಅತ್ಯಮೂಲ್ಯ ಮರುಕ್ಷಣ ಸಾವು ಎಂಬುದನ್ನು ಅರಿತು ಜೀವವಿರುವವರೆಗೂ ಛಲ ಬಲ ಹಂಬಲದೊಂದಿಗೆ ಭಗವಂತನನ್ನು ಕಾಣುವ ಸಂಕಲ್ಪ ತೊಡಬೇಕು ಎಂದರು.
ವಿವೇಕ ಜಾಗ್ರತ ಬಳಗದ ಅಧ್ಯಕ್ಷ ವಿನಾಯಕ ಪವಾರ ಮಾತನಾಡಿ, ನಾಳೆ ಎಂಬುದು ಖಾಲಿ ಹಾಳೆ ಈ ಕ್ಷಣ ಅಮೂಲ್ಯ ಎಂಬ ಧ್ಯೆಯವನ್ನಿಟ್ಟುಕೊಂಡು, ತ್ಯಾಗ ಮತ್ತು ಸೇವೆಯ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಶ್ರದ್ಧೆ, ಸಹನೆ ಹಾಗೂ ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ. ಡಿವೈನ್ ಪಾರ್ಕನ ಸ್ತರದಲ್ಲಿ ನಾವೆಲ್ಲ ನಡೆಯೋಣ ನಿಜವಾದ ಆನಂದ ಪಡೆಯೋಣ. ಮೋಕ್ಷದ ಪಥಕ್ಕೆ ಸಾಗೋಣ ಎಂದರು.
ಡಿವೈನ್ ಪಾರ್ಕನ ಯುವ ಅಧಿಕಾರಿ ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ವಿವೇಕ ಜಾಗ್ರತ ಬಳಗದ ನಿಕಟಪೂರ್ವ ಅಧ್ಯಕ್ಷ ರವಿ ಲಕ್ಷ್ಮೇಶ್ವರ ಕಾರ್ಯಕ್ರಮ ನಿರೂಪಿಸಿದರು. ಆರ್.ಬಿ.ರೆಡ್ಡರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ