ಬಳ್ಳಾರಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಸುಧಾರಣಾ ಸಂಸ್ಥೆಯಾದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಈ ಹಿಂದೆ ವ್ಯಾಸಂಗ ಮಾಡಿ ಪುನರ್‍ವಸತಿಗೊಂಡಿರುವ ವಿಶೇಷ ಮಕ್ಕಳು ಸುಮಾರು 25 ವರ್ಷಗಳ ಹಳೆಯ ಮಾಜಿ ನಿವಾಸಿಗಳೆಲ್ಲರು ಒಂದೇಡೆ ಸೇರಿದ್ದರು.
ಈ ಮಕ್ಕಳಿಗೆ ಪಾಲನೆ ಮತ್ತು ಪೋಷಣೆ ಮಾಡಿ ವಿದ್ಯಾರ್ಜನೆ ನೀಡಿದ 30 ವರ್ಷಗಳ ಹಿಂದೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 25 ಜನ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಇದೇ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇತಿಹಾಸದಲ್ಲಿ ಪ್ರಥಮವಾಗಿದ್ದು, ಈ ಮಕ್ಕಳು ಅನಾಥ, ನಿರ್ಗತಿಕ, ಏಕಪೋಷಕ ಹಾಗೂ ಪಾಲಕರಿಂದ ಪೋಷಣೆ-ರಕ್ಷಣೆ ವಂಚಿತರಾಗಿ ಸಂಸ್ಥೆಯಲ್ಲಿ ಆಶ್ರಯಪಡೆದಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿ ಉತ್ತಮವಾದ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಾಲಮಂದಿರದ ಅಧೀಕ್ಷಕ ಎಸ್.ರಾಜಾನಾಯಕ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಹಳೆ ವಿದ್ಯಾರ್ಥಿಗಳಲ್ಲಿ ಹಲವಾರು ಜನ ಸರ್ಕಾರಿ ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು, ವಿದ್ಯುತ್ ಇಲಾಖೆಯಲ್ಲಿ, ಖಾಸಗಿ ಕಂಪನಿಯಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಹಾಗೂ ಇತರೆ ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಂಡು ಆರ್ಥಿಕ ಸದೃಢತೆಯಲ್ಲಿ ಹೊಂದಿದ್ದಾರೆ ಎಂದರು.
ಈ ಸಂಸ್ಥೆಯಲ್ಲಿ ಬೆಳೆಯುವ ಮಕ್ಕಳು ಗ್ರಾಮೀಣ ಪ್ರದೇಶ ಮತ್ತು ಬಡತನದಲ್ಲಿ ಬಂದಿದ್ದು, ಸರಿಯಾದ ಮಾರ್ಗದರ್ಶನ ಗುರಿಯಿಲ್ಲದೇ ದಾಖಲಾಗಿರುತ್ತಾರೆ. ಇವರೆಲ್ಲರ ಸಾಧನೆ ಕಂಡು ಇಲಾಖೆಯಲ್ಲಿ ಬೆಳೆಯುತ್ತಿರುವ ಮಕ್ಕಳು ಸಮಾಜಕ್ಕೆ ಮಾದರಿಯಲ್ಲ ಎನ್ನುವ ಅಪವಾದಕ್ಕೆ ಇದು ತಪ್ಪು ಎಂಬ ಕಲ್ಪನೆಯನ್ನು ಇವರ ಸಾಧನೆಯಿಂದ ಅಭಿವ್ಯಕ್ತವಾಗಿರುತ್ತದೆ ಎಂದರು.
ಈ ಸಂಸ್ಥೆ 1924ರಿಂದ ಪ್ರಾರಂಭವಾಗಿರುವುದರಿಂದ ಸಾವಿರಾರು ವಿದ್ರ್ಯಾರ್ಥಿಗಳು ಈ ವಿಶೇಷ ಶಾಲೆಯಲ್ಲಿ ಆಶ್ರಯಪಡೆದು ಅಧಿಕಾರಿಗಳು, ಇಂಜಿನೀಯರ್ಸ್ ಮತ್ತು ಇನ್ನು ಬೇರೆ ಬೇರೆ ಉದ್ಯೋಗಗಳಲ್ಲಿ ರಾಜ್ಯ, ದೇಶದಲ್ಲಿ ಸೇವೆ ಸಲ್ಲಿಸುತ್ತಿರುವವರು ಆಗಿದ್ದಾರೆ ಎಂದರು.ಬಾಲಮಂದಿರ ಸಿಬ್ಬಂದಿಗಳು ಮತ್ತು ಮಾಜಿ ಹಳೆಯ ವಿದ್ಯಾರ್ಥಿಗಳಾದ ತಿರುಮಲೇಶ, ಮಂಜುನಾಥ, ದೇವೇಂದ್ರಪ್ಪ, ಹನುಮಂತ ಹಾಗೂ ಇನ್ನಿತರ ವಿದ್ಯಾರ್ಥಿಗಳು ಇದ್ದರು.