ಮಿಡಿಗೇಶಿ
ಕಳೆದ ಏಳೆಂಟು ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯದೆ ರೈತಾಪಿ ವರ್ಗದವರ ದನ, ಕರು, ಕುರಿ, ಮೇಕೆ, ಎತ್ತು, ಎಮ್ಮೆಗಳಿಗೆ ಕುಡಿಯಲು ನೀರು ಸಿಗದೆ, ಮೇವಿಲ್ಲದೆ, ಇರುವಂತಹ ಇಂದಿನ ಬೇಸಿಗೆ ದಿನಗಳಲ್ಲಿ ಅಲ್ಪಸ್ವಲ್ಪ ಮಳೆಯಿಂದ ಬೆಳೆದಿದ್ದಂತಹ ಹುಲ್ಲನ್ನು ರೈತರು ಕಷ್ಟಪಟ್ಟು ಸಂಗ್ರಹಿಸಿಕೊಂಡಿದ್ದಾರೆ.
ಇಂತಹ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಬೂದಿಯಾಗಿರುವ ಘಟನೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಆರ್ ಗೊಲ್ಲಹಳ್ಳಿಯಲ್ಲಿ ನಡೆದಿದೆ. ರೈತ ಮುಡುಪಣ್ಣನು ಸಂಗ್ರಹಿಸಿಟ್ಟುಕೊಂಡಿದ್ದಂತಹ ಹುಲ್ಲಿನ ಬಣವೆಗೆ ಏ.09 ರಂದು ಅರ್ಧರಾತ್ರಿಯಲ್ಲಿ ಘಟನೆ ನಡೆದಿದ್ದು, ಸುಮಾರು ನಾಲ್ಕು ಟ್ರ್ಯಾಕ್ಟರ್‍ನಷ್ಟು ಹುಲ್ಲು, ಕಡ್ಲೆ ಬಳ್ಳಿ ಇತ್ಯಾದಿ ಸುಟ್ಟು ಭಸ್ಮವಾಗಿರುತ್ತದೆ.
ಸದರಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿರುವ ಬಗ್ಗೆ ಮಧುಗಿರಿ ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಮುಂz ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಸದರಿ ರೈತನಿಗೆ ಸುಮಾರು ನಲವತ್ತು ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಬಡ ರೈತನಿಗೆ ಸರ್ಕಾರದಿಂದ ಪರಿಹಾರವನ್ನು ಸಂಬಂಧಿಸಿದ ಅಧಿಕಾರಿಗಳು ಕೊಡಿಸಿಕೊಡಬೇಕಾಗಿ ರೈತಾಪಿವರ್ಗ ಒತ್ತಾಯಿಸಿರುತ್ತಾರೆ.