ದಾವಣಗೆರೆ:
ಗ್ರಾ.ಪಂ. ನೌಕರರಿಗೆ ಸೇವಾ ನಿಯಮಾವಳಿ ರೂಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ಫೆ.21ರಂದು ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎ.ಉಮೇಶ್ ಕೈದಾಳೆ ತಿಳಿಸಿದರು.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಫ್ರೀಡಂ ಪಾರ್ಕ್‍ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವಿದ್ದು, ರಾಜ್ಯದ ನಾನಾ ಭಾಗಗಳಿಂದ ಸುಮಾರು 30 ಸಾವಿರ ಗ್ರಾಪಂ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದರು.
ಗ್ರಾಪಂ ನೌಕರರಾದ ಬಿಲ್ ಕಲೆಕ್ಟರ್, ವಾಟರ್ ಮನ್, ಜವಾನ, ಜಾಡಮಾಲಿ, ಕಂಪ್ಯೂಟರ್ ಆಪರೇಟರ್‍ಗಳಿಗೆ ಸೇವಾ ನಿಯಮಾವಳಿ ರೂಪಿಸಬೇಕು. ರಾಜ್ಯದಲ್ಲಿ 1993 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 112ರ ನಿಯಮದಂತೆ ವೇತನ ಶ್ರೇಣಿ ಡಿ-ದರ್ಜೆಗೆ 17 ಸಾವಿರದಿಂದ 28,950 ರೂ., ಸಿ-ದರ್ಜೆಗೆ 21,400 ರೂ.ಗಳಿಂದ 36,950 ರೂ.ಗಳನ್ನು ನಿಗಧಿ ಪಡಿಸಬೇಕು. ಪಿಂಚಣಿ, ವೈದ್ಯಕೀಯ ವೆಚ್ಚ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಗ್ರಾಪಂ ನೌಕರರಿಗೂ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ಇಎಫ್‍ಎಂಎಸ್‍ನಲ್ಲಿ ಅಳವಡಿಸದೇ ಬಾಕಿ ಇರುವ 18 ಸಾವಿರ ನೌಕರರ ಮಾಹಿತಿ ಅಳವಡಿಸಿ, ಎಲ್ಲರಿಗೂ ವೇತನ ನೀಡಬೇಕು. ಇಎಫ್‍ಎಂಎಸ್ ವೇತನಕ್ಕೆ ಬೇಕಾಗುವ ಪೂರ್ತಿ ಅನುದಾನ ಒದಗಿಸಬೇಕು. 1252 ಗ್ರಾಪಂಗಳು ಮೇಲ್ದರ್ಜೆಗೇರಿಸುವ ಕಡತಗಳು ವಿವಿಧ ಹಂತಗಳಲ್ಲಿ ಅನುಮೋದನೆಯಾಗದೇ ಉಳಿದಿದ್ದು, ಅವುಗಳನ್ನು ಶೀಘ್ರವೇ ಕಡತ ಅನುಮೋದನೆಗೆ ನೀಡಬೇಕು. 26 ಸಾವಿರ ಹುದ್ದೆಗಳನ್ನು ಸೃಷ್ಟಿಸಿ, ಎಲ್ಲರನ್ನೂ ಖಾಯಂ ಮಾಡಬೇಕೆಂದು ಆಗ್ರಹಿಸಿದರು.
ನಿವೃತ್ತಿ ಹೊಂದಿದ ಸಿಬ್ಬಂದಿಗೆ ಗ್ರಾಚ್ಯುಯಿಟಿ ನೀಡಲು 1995ರಲ್ಲೇ ಆದೇಶವಾಗಿದ್ದರೂ, ಪಂಚಾಯಿತಿಗಳಲ್ಲಿ ಕೊಡುತ್ತಿಲ್ಲ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ನೌಕರರು ನಿವೃತ್ತಿ ಹೊಂದಿದ್ದಾರೆ. ಅಂತಹವರಿಗೆ ಗ್ರಾಚ್ಯುಯಿಟಿ ಕೊಡಲು ಸರ್ಕಾರ ಮಧ್ಯ ಪ್ರವೇಶಿಸಬೇಕು. ಗಣಕ ಯಂತ್ರ ನಿರ್ವಾಹಕರಿಗೆ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ಜಿಲ್ಲೆಯಲ್ಲಿ ಬಾಕಿ ಇರುವ ನೀರಗಂಟಿಗಳ ಅನುಮೋದನೆ, ಜೇಷ್ಟತಾ ಪಟ್ಟಿ ತಯಾರಿಸಿದ ನೌಕರರಿಗೆ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಶ್ರೀನಿವಾಸಾಚಾರ್, ಸಿ.ಎಂ.ಚೇತನ್, ಬಸವರಾಜ, ಪವಿತ್ರಾ, ಸಂಪತ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
