ಜ.23ರಂದು ಬೆಂಗಳೂರು ಚಲೋ..!

ತುಮಕೂರು

   ನಿವೃತ್ತಿಯಾಗಿರುವ ಹಾಗೂ ಮುಂದಿನ ದಿನಗಳಲ್ಲಿ ನಿವೃತ್ತಿ ಆಗಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಂಚಣಿ ಸೌಲಭ್ಯಕ್ಕಾಗಿ ಹಾಗೂ ಸೇವಾ ಹಿರಿತನದ ಆಧಾರದಲ್ಲಿ ಸಂಬಳ ನಿಗಧಿ ಪಡಿಸುವಂತೆ ಮತ್ತು ಎಲ್‍ಕೆಜಿ, ಯುಕೆಜಿಯನ್ನು ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಜ.23-24ರಂದು ಬೆಂಗಳೂರು ಚಲೋ ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‍ನ ಕಾರ್ಯದರ್ಶಿ ಎನ್.ಶಿವಣ್ಣ ಕರೆ ನೀಡಿದರು.

     ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿ ಬಂದು ಸುಮಾರು 44 ವರ್ಷಗಳು ಪೂರ್ಣವಾಗಿದೆ. ಈ ಯೋಜನೆಯು ನಿರೀಕ್ಷತ ಮಟ್ಟದಲ್ಲಿ ಜಾರಿಯಾಗದಿದ್ದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಉತ್ತಮವಾಗಿದೆ. ಆದರೂ ನಮ್ಮ ರಾಜ್ಯದಲ್ಲಿ ಫಲಾನುಭವಿ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಅಪೌಷ್ಠಿಕತೆಯಿಂದ, ರಕ್ತಹೀನತೆಯಿಂದ ಮರಣಗಳು ಸಂಭವಿಸುತ್ತಲೇ ಇವೆ. ಇತ್ತೀಚಿನ ವರದಿಯ ಪ್ರಕಾರ ರಾಜ್ಯದಲ್ಲಿ ಒಂದರಿಂದ 5 ವರ್ಷದೊಳಗಿನ ಶೇ.60.9ರಷ್ಟು ಮಕ್ಕಳು, 42.4ರಷ್ಟು ಮಹಿಳೆಯರು, 18.2 ರಷ್ಟು ಪುರುಷರು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಅವಶ್ಯಕತೆ ಹೆಚ್ಚಾಗಿದೆ ಎಂದರು.

    ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳು, 3331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, 1.3 ಲಕ್ಷ ಮಂದಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಜಾರಿತರಲು ಹೊರಟಿರುವ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವನಾಂಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜ.23ರಂದು ಬೆಳಗ್ಗೆ 11.00ಗಂಟೆಗೆ ಬೃಹತ್ ಪ್ರತಿಭಟನಾ ರ್ಯಾಲಿಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿ ಪ್ರತಿಭಟನಾ ಧರಣ ನಡೆಸಲಾಗುವುದು. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಮಾಸಿಕ ರೂ. 21000ಗಳ ಕನಿಷ್ಠ ವೇತನ ಜಾರಿಗೊಳಿಸಬೇಕು. ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಕೈ ಬಿಡಬೇಕು. ಶಾಲಾ ಪೂರ್ವ ಶಿಕ್ಷಣದ ಅಂಗವಾಗಿ ಎಲ್‍ಕೆಜಿ ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕು. ಈ ಫಲಾನುಭವಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಬೇಕು,. ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗಲು ಅಂಗನವಾಡಿ ಕೇಂದ್ರದಿಂದಲೇ ವರ್ಗಾವಣೆ ಪತ್ರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

     ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕನಿಷ್ಠ ಮಾಸಿಕ ಪಿಂಚಣಿ 10 ಸಾವಿರ ರೂಗಳನ್ನು ನೀಡಲು ಯೋಜನೆ ಜಾರಿ ಮಾಡಬೇಕು. ಎನ್‍ಪಿಎಸ್ ಯೋಜನೆ ಕೈಬಿಡಬೇಕು. ಹಾಲಿ ನಿವೃತ್ತರಾಗಿರುವ ಕಾರ್ಯಕರ್ತೆಯರಿಗೆ ತಲಾ 2 ಲಕ್ಷ ರೂ ಹಾಗೂ ಸಹಾಯಕಿಯರಿಗೆ 1 ಲಕ್ಷ ಇಡಿಗಂಟು ನೀಡಬೇಕು. ಎನ್‍ಪಿಎಸ್ ಯೋಜನೆಗೆ ಒಳಪಟ್ಟು ವಂತಿಗೆ ಕಡಿತ ಮಾಡಿದ್ದು, ಪ್ರಸಕ್ತ 2-3ವರ್ಷಗಳಿಂದ ನಿವೃತ್ತಿಯಾಗಿರುವ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

    ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವಾ ಹಿರಿತನ ಪರಿಗಣಿಸಿ ವರ್ಷಕ್ಕೆ 200 ರೂ ನಂತೆ ಸೇವಾ ಭಡ್ತಿ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಕಾರ್ಯಕರ್ತೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದಂತೆ ಗೌರವಧನ ನೀಡಬೇಕು ಮತ್ತು ಸಹಾಯಕಿಯರನ್ನು ನೇಮಿಸಬೇಕು. ಈ ಕಾರ್ಯಕರ್ತೆಯರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಚಿಕಿತ್ಸೆ ಕಲ್ಪಿಸುವುದು.

    ಸಂಬಳ ಸಹಿತ ವೈದ್ಯಕೀಯ ರಜೆ ನೀಡುವುದು. ತೀವ್ರತರವಾದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ, ಕಿಡ್ನಿ ವೈಫಲ್ಯ, ಪ್ಯಾರಾಲಿಸಿಸ್ ಮುಂತಾದವುಗಳಿಂದ ನರಳುತ್ತಿರುವ ಹಾಗೂ ದೀರ್ಘಸೇವೆಯ ಪರಿಣಾಮವಾಗಿ ದೃಷ್ಠಿದೋಷ ಹಾಗೂ ನಿಶ್ಯಕ್ತರಾದ ಕಾರ್ಯಕರ್ತೆ/ ಸಹಾಯಕಿಯರ ಸೇವೆ ಮುಂದುವರೆಸಲು ಕಷ್ಠಸಾಧ್ಯ. ಆದ್ದರಿಂದ ಅಂತಹವರಿಗೆ ಸ್ವಯಂನಿವೃತ್ತಿ ಮಾದರಿ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

   ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವತಿ, ರಾಜ್ಯ ಸಮಿತಿ ಸದಸ್ಯೆ ವನಜಾಕ್ಷಿ, ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಜಿಲ್ಲಾ ಖಜಾಂಚಿ ಮೀನಾಕ್ಷಿ, ಜಿಲ್ಲಾ ಸಮಿತಿ ಸದಸ್ಯೆ ನೇತ್ರಾವತಿ, ಕಂಬೇಗೌಡ, ಶಶಿಕಾಂತ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link