ಫೆ26ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ..!

ಬೆಂಗಳೂರು

    ಬಹು ನಿರೀಕ್ಷಿತ ಹನ್ನೆರಡನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವು ಇದೇ ತಿಂಗಳ 26ರಿಂದ ಮಾ.4ರ ವರೆಗೆ ಒಂದು ವಾರಗಳ ಕಾಲ ನಗರದಲ್ಲಿ ನಡೆಯಲಿದೆ

    ಫೆ.26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉದ್ಘಾಟನೆಯೊಂದಿಗೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭಗೊಳ್ಳಲಿದ್ದು ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಉತ್ಸವದ ವಿವಿಧ ವಿಭಾಗಗಳಲ್ಲಿ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಚಲನಚಿತ್ರ ನಿರ್ಮಾಪಕರ ಅಂತಾರಾಷ್ಟ್ರೀಯ ಮಹಾ ಒಕ್ಕೂಟದ ಪ್ರತಿನಿಧಿ, ನಿರ್ದೇಶಕಿ ಫ್ರಾನ್ಸಿಸ್ ಫೊಲೀರೆನ್ಸ್ ಗಿರೋಟ್, ಎಸ್ಸೋನಿಯಾದ ಚಿತ್ರ ನಿರ್ದೇಶಕ ತಾನೆಲ್ ಟೂಲ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಿತ್ರಕಥಾ ಸಲಹಗಾರ್ತಿ ಕ್ಲೇರ್ ಡೋಬಿನ್ ಸೇರಿದಂತೆ ಫಿಲಿಪ್ಪೈನ್ಸ್, ಸಿಂಗಾಪುರ, ಹಾಂಕಾಂಗ್, ಇಂಡೋನೇಷ್ಯಾ, ಶ್ರೀಲಂಕಾ, ಬಾಂಗ್ಲಾ, ದಕ್ಷಿಣ ಕೊರಿಯಾದ ನಿರ್ಮಾಪಕರು, ನಿರ್ದೇಶಕರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಚಿತ್ರೋತ್ಸವದಲ್ಲಿ ಪ್ರಮುಖವಾಗಿ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ದೇಶಕೇಂದ್ರಿತ ಚಿತ್ರಗಳು, ಪುನರಾವಲೋಕನಕ್ಕೆ ಅವಕಾಶ ಕಲ್ಪಿಸಲಾಗಿದೆ.ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ತುಳು, ಬಂಜಾರ, ಕೊಡವ, ಕೊಂಕಣಿ, ಕೇರಳದ ಬನಿಯಾ, ತಮಿಳುನಾಡಿನ ಇರುಳ, ಅಸ್ಸೋಂನ ಕಾಸಿ ಪಂಗ್ವಾನ ಭಾಷೆಗಳ ಚಿತ್ರಗಳಿಗೆ ವಿಶೇಷ ವಿಭಾಗವನ್ನು ಪರಿಚಯಿಸಲಾಗಿದೆ.

    ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾದ ವಿಷಯಾಧಾರಿತವಾದ ವಿಭಾಗಗಳಲ್ಲಿ ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ಥಾನ್ಸೇನ್, ಮೀರಾ ಸೇರಿದಂತೆ ಇನ್ನಿತರ ಸಂಗೀತ ಪ್ರಭಾವಿ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.ವಿಶ್ವ ಸಿನಿಮಾ ವಿಭಾಗಗಳಲ್ಲಿ ಗೋವಾ, ಮುಂಬೈ, ಬರ್ಲಿನ್, ಟೊರೆಂಟೋ ಸೇರಿದಂತೆ ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು.

    ಇದಲ್ಲದೆ, ಆತ್ಮಕಥೆ, ವ್ಯಕ್ತಿಚಿತ್ರಗಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕಾದಂಬರಿಕಾರರ ವ್ಯಕ್ತಿಚಿತ್ರಗಳು ಪ್ರದರ್ಶನಗೊಳ್ಳಲಿವೆ.ಪ್ರಮುಖವಾಗಿ ಸಿನಿಮಾ ಕುರಿತ ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸ ನಡೆಯುತ್ತಿದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ.ವಿ.ಕೆ.ಮೂರ್ತಿ ಅವರ ಸ್ಮಾರಕ ಉಪನ್ಯಾಸ, ಎರಡು ದಿನಗಳ ಚಿತ್ರಕಥೆ ರಚನಾ ಕಾರ್ಯಾಗಾರ, ಚಿತ್ರ ನಿರ್ಮಾಣದಲ್ಲಿ ಉದ್ಯಮಶೀಲ ವಿಧಾನ, ನಿರ್ಮಾಪಕರಿಗೆ ಕಾನೂನು ನೆರವು, ಪೈರಸಿ ತಡೆ ಮತ್ತು ಕೃತಿಸ್ವಾಮ್ಯ ರಕ್ಷಣೆ ಕುರಿತ ಮಾಹಿತಿ, ಅಂತಾರಾಷ್ಟ್ರೀಯ ಸಹ ನಿರ್ಮಾಣ-ನಿರ್ಮಾಪಕರ ಯಶೋಪಥ, ಸಿನಿಮಾ ನಿರ್ಮಾಣದಲ್ಲಿ ತಾಂತ್ರಿಕ ಸಮಸ್ಯೆಗಳ ಕುರಿತ ಸಂವಾದ, ಕಥಾಚಿತ್ರಗಳಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯಂತಹ ಪ್ರಮುಖ ವಿಷಯಗಳು ಚರ್ಚೆಗೆ ಒಳಪಡಲಿವೆ.

    ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್‌ನ ಟಿವಿಆರ್ ಸಿನಿಮಾದ 11 ಪರದೆಗಳು, ರಾಜ್‌ಕುಮಾರ್ ರಸ್ತೆಯ ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿರುವ ರಾಜಭವನ, ಬನಶಂಕರಿ 2ನೆ ಹಂತದ ಸುಚಿತ್ರ ಫಿಲಂಸ್ ಸೊಸೈಟಿಯಲ್ಲಿ ಪ್ರತಿನಿಧಿಗಳಿಗೆ ಫೆ.27 ರಿಂದ ಪ್ರದರ್ಶನ ಆರಂಭವಾಗಲಿದೆ.

    ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಪಾಲ್ಗೊಂಡು ಏಷಿಯನ್ ಮತ್ತು ಭಾರತೀಯ ಚಿತ್ರಗಳಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಈಗಾಗಲೇ ಚಿತ್ರೋತ್ಸವ ಜಾಲತಾಣದಲ್ಲಿ ನೋಂದಣಿ ಕಾರ್ಯ ಆರಂಭವಾಗಿದ್ದು, ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ.

    27ರ ನಂತರ ಪ್ರತಿನಿಧಿಗಳು ತಮ್ಮ ಕಾರ್ಡ್‌ಗಳನ್ನು ನಂದಿನಿ ಬಡಾವಣೆಯ ಚಲನಚಿತ್ರ ಅಕಾಡೆಮಿ ಕಾರ್ಯಾಲಯ, ಇನ್‌ಫೆಂಟ್ರಿ ರಸ್ತೆಯ ವಾರ್ತಾ ಇಲಾಖೆ, ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪಡೆಯಬಹುದು.ಸಾರ್ವಜನಿಕರಿಗೆ 800ರೂ., ಚಿತ್ರೋದ್ಯಮ, ಸದಸ್ಯರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ 400ರೂ. ನೋಂದಣಿ ಶುಲ್ಕವಿದ್ದು, ಹೆಚ್ಚಿನ ಮಾಹಿತಿಗೆ 02261445050 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap