ಬರ ಪೀಡಿತ ತಾಲ್ಲೂಕುಗಳಲ್ಲಿ ತೀವ್ರ ಮೇವಿನ ಸಮಸ್ಯೆ : ಜೆ.ಸಿ.ಮಾಧುಸ್ವಾಮಿ

ತುಮಕೂರು

         ರಾಜ್ಯದ 126 ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು ಅಡ್ಡಿಯಾಗುತ್ತಿರುವ ಚುನಾವಣಾ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕು ಎಂದು ಚಿಕ್ಕನಾಯಕನಹಳ್ಳಿ ಶಾಸಕ. ಜೆ.ಸಿ.ಮಾಧುಸ್ವಾಮಿ ಒತ್ತಾಯಿಸಿದರು.

       ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಮುಗಿದಿದೆ ಆದರೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ಆಗುತ್ತಿಲ್ಲ. ಶಾಸಕರೆಲ್ಲರೂ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಇನ್ನೂ ಮೇ.23ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದು, ನಮ್ಮ ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿಲ್ಲ, ಇದರಿಂದ ಜನಸಾಮಾನ್ಯರು ಶಾಸಕರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ.

      ನೀರಿನ ಸಮಸ್ಯೆ ನೀಗಿಸಲು ಬೋರ್‍ವೆಲ್ ಕೊರೆಯಲು ಪೀಸ್ ವರ್ಕ್ ನಡೆಯುತ್ತಿತ್ತು. ಇದೀಗ ಅದು ನಡೆಯದಂತೆ ಪ್ರತಿಯೊಂದಕ್ಕೂ ಟೆಂಡರ್ ಮೂಲಕವೇ ಕೆಲಸ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ಅದು ಕೂಡ ಮೇ.23ರ ನಂತರ. ಇದರಿಂದ ಯಾವೊಬ್ಬ ಕಂಟ್ರಾಕ್ಟರ್ ಕೂಡ ಬೋರ್ ಕೊರೆಯಲು ಮುಂದಾಗುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದ ಶಾಸಕರು ಎಂದರೆ ಒಂದು ರೀತಿಯಲ್ಲಿ ಆರೋಪಿಗಳಂತೆ ಕಾಣುವ ಸ್ಥಿತಿ ಬಂದಿದೆ.

       ಯಾವೊಬ್ಬ ಅಧಿಕಾರಿಯೂ ನಮ್ಮ ಮಾತಿಗ ಬೆಲೆ ಕೊಡುತ್ತಿಲ್ಲ. ನಮ್ಮ ಕರೆಗಳಿಗೆ ಉತ್ತರಿಸುವುದಿಲ್ಲ. ಮಾತನಾಡಲು ಕರೆದರೆ ನೀತಿ ಸಂಹಿತೆ ಇದೆ ಎಂದು ಜಾರಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ಕುಡಿಯಲು ನೀರು ಹಾಗೂ ಜಾನುವಾರುಗಳಿಗೆ ಮೇವು ಸಿಗದಂತೆ ಮಾಡಿದರೆ ಹೇಗೆ. ಮುಂದೆ ಜೂನ್ ತಿಂಗಳಲ್ಲಿ ಮಳೆ ಬಂದಾಗ ಜನ ನೀರು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.

        ಚುನಾವಣೆಯ ನೀತಿ ಸಂಹಿತಿಯ ಉದ್ದೇಶವೇನು? ಹೊಸ ಯೋಜನೆಗಳನ್ನು ತೋರುವಂತಿಲ್ಲ. ಅವುಗಳಿಂದ ಮತ ನೀಡುವಂತೆ ಕೇಳುವಂತಿಲ್ಲ. ಇಂತಹ ಕೆಲಸ ಕಾರ್ಯಗಳು ಮಾಡಿದರೆ ಅದಕ್ಕೆ ಖಡಿವಾಣ ಹಾಕಲಿ ಅದರ ಬದಲಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚಿನಾಹಳ್ಳಿಗೆ 200 ಟನ್ ಮೇವಿನ ಅವಶ್ಯಕತೆ ಇತ್ತು. ಆದರೆ ಬಂದಿರುವುದು ಕೇವಲ 40 ಟನ್ ಮಾತ್ರ. ಇದರಿಂದ ಯಾರಿಗೆ ಎಷ್ಟು ನೀಡಲು ಸಾಧ್ಯವಾಗುತ್ತದೆ ಎಂದರು.

         ಕುಡಿಯುವ ನೀರಿನ ವಿಚಾರದಲ್ಲಿ ಟೆಂಡರ್ ಪ್ರಕ್ರಿಯೆ ವ್ಯವಸ್ಥೆ ಸರಿಹೋಗುವುದಿಲ್ಲ. ಟೆಂಡರ್ ಪಡೆದವರು ಕೇವಲ ಒಂದು ಕಡೆ ಬೋರ್ ಕೊರೆದಾಗ ಅದು ಫೇಲ್ ಆಗಿ ನೀರು ಬರದೆ ಹೋದರೆ ಇನ್ನೊಂದು ಕಡೆ ಬೋರ್ ಕೊರೆಯುವುದಿಲ್ಲ. ಅದಕ್ಕೆ ಅವಕಾಶ ಇಲ್ಲ. ಪೀಸ್ ವರ್ಕ್‍ನಲ್ಲಿ ಎಂಜಿನಿಯರ್ ಗುರುತು ಮಾಡಿದ ಕಡೆಗಳಲ್ಲಿ ಬೋರ್ ಕೊರೆದು ನೀರು ಹರಿಸಬಹುದಿತ್ತು. ಟ್ಯಾಂಕರ್‍ಗಳ ಮೂಲಕ ನೀರು ಕಳಿಸಲು ಕೂಡ ನೀತಿ ಸಂಹಿತೆ ಅಡ್ಡ ಬರುತ್ತಿದೆ. ಈಗಾಗಲೇ 65 ಬೋರ್‍ಗಳನ್ನು ಕೊರೆಯಲು ಪಟ್ಟಿ ನೀಡಿದರೆ ಅದರಲ್ಲಿ ಕೇವಲ 35 ಮಾತ್ರ ಕೊರೆಯಲು ಆದೇಶ ನೀಡಿದ್ದಾರೆ. ಇದರಿಂದ ಉಳಿದ ಹಳ್ಳಿಗಳಿಗೆ ನೀರು ಸರಬರಾಜು ಮಾಡುವುದು ಹೇಗೆ. ದೈನಂದಿನ ಕೆಲಸ ಕಾರ್ಯಗಳಿಗೂ ನೀತಿ ಸಂಹಿತೆ ಅಡ್ಡಿ ಬರುತ್ತಿದೆ ಎಂದರು.

      ನೀತಿ ಸಂಹಿತೆ ಸಡಿಲಕ್ಕಾಗಿ ಚುನಾವಣಾ ಆಯೋಗಕ್ಕೆ ದೂರವಾಣಿ ಮೂಲಕ ಮನವಿ ಮಾಡಲಾಗಿದೆ. ತುಮಕೂರು ಜಿಲ್ಲಾಧಿಕಾರಿಗಳ ಬಳ ಮನವಿ ಮಾಡಿಕೊಂಡಿದ್ದೇವೆ. ಆದರೆ ನೀತಿ ಸಂಹಿತೆ ಹೆಸರಿನಲ್ಲಿ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ ಎಂದು ಆರೋಪಿಸಿದರಲ್ಲದೆ, ಚಿ.ನಾ.ಹಳ್ಳಿ, ತಿಪಟೂರು, ಗುಬ್ಬಿ ಭಾಗದಲ್ಲಿ ಹರಿಯುವ ಭದ್ರಾ ಹಾಗೂ ಹೇಮಾವತಿ ನೀರಿನಿಂದ ಈ ಬಾಗದ ಕೆರೆಗಳನ್ನು ತುಂಬಿಸಬೇಕು. ಇಲ್ಲವಾದಲ್ಲಿ ನಮ್ಮದೇ ಆದ ಶೈಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.

      ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ನಮಗೆ ತುಂಬಾ ಅನಿವಾರ್ಯತೆ ಇದ್ದರೆ ಮಾತ್ರ ಅಧಿಕಾರಿಗಳಿಗೆ ಸಂಪರ್ಕಿಸಬೇಕು. ಇಲ್ಲವಾದಲ್ಲಿ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಬೇಕಿತ್ತು. ಜನಪರ ಕಾರ್ಯಗಳಿಗೆ ಶಾಸಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ನೀತಿ ಸಂಹಿತೆಯನ್ನು ಸಡಿಲಗೊಳಿಸಿ ಎಂದು ಕೇಳಬೇಕಿತ್ತು. ಆದರೆ ಯಾವ ಅಧಿಕಾರಿಯೂ ಈ ಕೆಲಸ ಮಾಡಿಲ್ಲ. ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆಯಿಂದ ರಿಲಾಕ್ಸ್ ಮಾಡಿಸಲು ಅಧಿಕಾರಿಗಳಿಗೆ ಅಧಿಕಾರವಿದೆ. ಆದರೂ ಅವರು ಇದರ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಸರ್ಕಾರದ ಅನುದಾನ ಕೊಡಿಸಲು ಅಡ್ಡಿ ಉಂಟಾಗುತ್ತಿದೆ ಎಂದರು.

      ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಮಾತನಾಡಿ 1200 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಇದರಿಂದ ಕೆಲ ಅಧಿಕಾರಿಗಳು ದುಡ್ಡು ಮಾಡಲು ನೋಡುತ್ತಿದ್ದಾರೆ. ಕಳೆದ ವಾರದಲ್ಲಿ ಸುರಿದ ಜೋರು ಗಾಳಿ ಮಳೆಗೆ 400-600 ತೆಂಗಿನ ಮರಗಳ ಸುಳಿಗಳು ಬಿದ್ದುಹೋಗಿವೆ. ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮ್‍ಗಳು ಕೆಟ್ಟಿ ಹೋಗಿವೆ. ಇವುಗಳನ್ನು ಸರಿಪಡಿಸಲು ಕೂಡ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದರು.

        ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತುಮಕೂರಿನ ಬುಗುಡನಹಳ್ಳಿ ಕೆರೆಯಲ್ಲಿ 70 ಎಂಎಸಿಎಫ್‍ಟಿ ಯಷ್ಟು ನೀರಿದೆ. ಮೈದಾಳ ಕೆರೆಯಲ್ಲಿ 80ಎಂಸಿಎಫ್‍ಟಿ ನೀರಿದೆ. ಇದನ್ನು ಜೂನ್ ತಿಂಗಳವರೆಗೂ ಬಳಸಿಕೊಳ್ಳಬಹುದು ಎಂಬುದು ಅಧಿಕಾರಿಗಳ ಮಾಹಿತಿಯಾಗಿದೆ. ಇನ್ನು ಕೆಲ ಕಡೆ ಟ್ಯಾಂಕರ್‍ಗಳಿಂದ ನೀರು ಕೊಡಬೇಕಾದ ಪರಿಸ್ಥಿತಿ ಇದೆ. ಪಾಲಿಕೆಯಲ್ಲಿರುವುದು 7 ಟ್ಯಾಂಕರ್‍ಗಳು ಮಾತ್ರ.

      7 ಟ್ಯಾಂಕರ್‍ಗಳಲ್ಲಿ ಎಷ್ಟರ ಮಟ್ಟಿಗೆ ನೀರು ಸರಬರಾಜು ಮಾಡಲು ಸಾಧ್ಯ. ಈಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಗಮನ ಹರಿಸಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಹೆಬ್ಬಾಕರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link