ಕುಣಿಗಲ್
ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿರುವ ಬೃಹತ್ ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್‍ನಲ್ಲಿ ಹೆಜ್ಜೇನು ಗೂಡುಕಟ್ಟಿದ್ದು ಆಗಿಂದ್ದಾಗ್ಗೆ ಮೇಲೇಳುವ ಜೇನುಹುಳುಗಳು ನಾಲ್ಕೈದು ಜನರಿಗೆ ಕಚ್ಚಿಗಾಸಿಗೊಳಿಸಿದ್ದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳದೆ ಮೀನಾಮೇಷ ಎಣಿಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ.
ಈ ಸ್ಥಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಿಆರ್‍ಸಿ ಕಚೇರಿ ಸೇರಿದಂತೆ ಉರ್ದು ಸ್ಕೂಲ್, ಮತ್ತು ಜಿಕೆಬಿಎಂಎಸ್ ಶಾಲೆಯ ಮಕ್ಕಳು ಸೇರಿದಂತೆ ಸಾವಿರಾರು ಜನರು, ಮಕ್ಕಳು ನಿತ್ಯ ಸಂಚರಿಸುವ ಸ್ಥಳವಾಗಿದೆ. ಸುಮಾರು ವರ್ಷಗಳಿಂದ ಹಳೆಯ ಮತ್ತು ಹೊಸ ಟ್ಯಾಂಕ್ ಇದ್ದು ಇದೇ ಮೊದಲ ಬಾರಿಗೆ ಹೊಸ ಟ್ಯಾಂಕ್‍ನಲ್ಲಿ ಹೆಜ್ಜೇನು ಗೂಡುಕಟ್ಟಿದ್ದು ಮೊನ್ನೆ ಸಂಜೆ ತಮ್ಮ ಕೆಲಸದ ನಿಮಿತ್ಯ ಬಿಇಒ ಕಚೇರಿಗೆ ಶಿಕ್ಷಕರೊಬ್ಬರು ಬಂದಿದ್ದಾರೆ.
ದಿಢೀರ್ ದಾಳಿನಡೆಸಿದ ನಾಲ್ಕೈದು ಜೇನು ಹುಳುಗಳು ತಲೆ ಹಾಗೂ ಕತ್ತಿನ ಭಾಗಕ್ಕೆ ಕಚ್ಚಿವೆ, ಶಿಕ್ಷಕರಿಗೆ ತಕ್ಷಣ ಲೋ ಬಿಪಿ ಆಗಿದ್ದು ಅವರನ್ನ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಅದೇ ರೀತಿ ಬಿಆರ್‍ಸಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರಿಗೆ ಎರಡು ಜೇನುಹುಳುಗಳು ಕಚ್ಚಿ ಗಾಸಿಗೊಳಿಸಿದೆ. ಇದೇ ರೀತಿ ನಾಲ್ಕೈದು ಮಂದಿಗೆ ಹೆಜ್ಜೇನುಹುಳುಗಳು ಬೈಕ್‍ಸವಾರರು ಸೇರಿದಂತೆ ಅಲ್ಲಿ ಸಂಚರಿಸುವ ಮಕ್ಕಳು ನಾಗರೀಕರ ಮೇಲೆ ದಾಳಿ ಮಾಡುತ್ತ ಕಚ್ಚಿ ಗಾಸಿಗೊಳಿಸುತ್ತಲೆ ಇವೆ.
ಈ ಬಗ್ಗೆ ಸಂಬಂಧಪಟ್ಟ ಪುರಸಭಾ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಳೆದ ಒಂದು ವಾರದಿಂದಲೇ ಸಾರ್ವಜನಿಕರು ಸುದ್ದಿ ಮುಟ್ಟಿಸಿ ವಿಚಾರ ತಿಳಿಸಿದರೂ ಸಮಬಂಧಪಟ್ಟವರು ಈ ಬಗ್ಗೆ ಗಮನಹರಿಸದೆ ತಾತ್ಸಾರ ಮನೋಭಾವ ತಾಳಿರುವುದು ಆ ಭಾಗದ ಜನರಲ್ಲಿ ಆಕ್ರೋಶ ಮೂಡಿಸಿದ್ದು ಈ ಜೇನುಗೂಡನ್ನು ಶೀಘ್ರದಲ್ಲಿ ತೆರವುಗೊಳಿಸುವ ಕೆಲಸವನ್ನ ಮಾಡದಿದ್ದರೆ, ಅಲ್ಲಿ ಆಗುವ ಅನಾಹುತಕ್ಕೆ ಪುರಸಭೆಯವರೆ ನೇರ ಕಾರಣರಾಗುತ್ತಾರೆ ಎಂದು ಹಿರಿಯ ನಾಗರೀಕರು ಸೇರಿದಂತೆ ಲಂಚಮುಕ್ತ ವೇದಿಕೆಯ ಅಧ್ಯಕ್ಷರು ಎಚ್ಚರಿಕೆ ನೀಡಿದ್ದು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
