ಬರಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ

ಹಾವೇರಿ

     ಜಿಲ್ಲೆಯ ಬರಪೀಡಿತ ಗ್ರಾಮಗಳಾದ ಶಿಗ್ಗಾಂವ ತಾಲೂಕಿನ ಬಿಸನಹಳ್ಳಿ, ಸವಣೂರಿನ ತವರಮೆಳ್ಳಳ್ಳಿ, ಹಾವೇರಿ ತಾಲೂಕಿನ ಆಲದಕಟ್ಟಿ ಹಾಗೂ ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹಸಿ ಮೇವಿನ ತಾಕು, ಕೆರೆ ಹೂಳೆತ್ತುವ ಕಾಮಗಾರಿ, ಕುಡಿಯುವ ನೀರಿನ ಪೂರೈಕೆ ಕುರಿತಂತೆ ಪರಿಶೀಲನೆ ನಡೆಸಿದರು.

     ಮುಂಜಾನೆ ಹುಬ್ಬಳ್ಳಿಯಿಂದ ಬಿಸನಹಳ್ಳಿಗೆ ಗ್ರಾಮಕ್ಕೆ ಆಗಮಿಸಿದ ಸಚಿವರು ಜಾನುವಾರುಗಳಿಗೆ ಮೇವು ಪೂರೈಸಲು ಮೇವು ಕಿಟ್ ವಿತರಿಸಿ ಬೆಳೆಸಲಾದ ಹಸಿ ಮೇವಿನ ತಾಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     ಉದ್ಯೋಗಖಾತ್ರಿ ಯೋಜನೆಯಡಿ ತವರಮೆಳ್ಳಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ಕೂಲಿಕಾರರೊಂದಿಗೆ ಮಾತನಾಡಿದ ಸಚಿವರು ಉದ್ಯೋಗ ಖಾತ್ರಿಯಡಿ ಬೇಡಿಕೆ ಸಲ್ಲಿಸಿದ ತಕ್ಷಣ ಕೆಲಸ ಸಿಗುತ್ತದೆಯೇ ಸಕಾಲದಲ್ಲಿ ಕೂಲಿ ಹಣ ಪಾವತಿಮಾಡುತ್ತಾರಾ ಎಂದು ಪ್ರಶ್ನಿಸಿದರು. ಕೆಲಸ ಹುಡಿಕಿ ಯಾರೂ ಗುಳೆಹೋಗದಂತೆ ತಿಳಿಸಿದರು. ಬರಪೀಡಿತ ಪ್ರದೇಶಗಳಲ್ಲಿ 100 ದಿನಗಳ ಬದಲಿಗೆ 150 ದಿನ ಕೆಲಸ ನೀಡಲಾಗುತ್ತದೆ.

     ಅಗತ್ಯಬಿದ್ದರೆ ನಿಮಗೆ ಕೇಳಿದಷ್ಟು ದಿವಸ ಕೆಲಸ ನೀಡುತ್ತೇವೆ ಎಂದು ತಿಳಿಸಿದರು.ಕೆಲಸದ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಆದ್ಯತೆ ನೀಡಿ. ನಿಮ್ಮಂತೆ ನಿಮ್ಮ ಮಕ್ಕಳು ಕೂಲಿ ಮಾಡುವುದು ಬೇಡ. ಒಳ್ಳೆ ಶಿಕ್ಷಣ ಪಡೆದು ಒಳ್ಳೆ ಉದ್ಯೋಗ ಹಿಡಿಯಲಿ. ಒಳ್ಳೆ ರೈತರಾಗಿ ಬಾಳಲಿ ಎಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ ಅವರು ಬರ ಪರಿಹಾರಕ್ಕಾಗಿ ನೀತಿ ಸಂಹಿತೆ ಜಾರಿಬರುವ ಮುನ್ನವೇ 350 ಕೋಟಿ ರೂ. ಮೀಸಲಿಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಉದ್ಯೋಗ ನೀಡಲು ಆದ್ಯತೆ ನೀಡಲಾಗಿದೆ. ಕೂಲಿ ದಿನಗಳನ್ನು 100 ರಿಂದ 150ದಿನಗಳಿಗೆ ಹೆಚ್ಚಿಸಲಾಗಿದೆ. ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ 10.47 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ.

      ರೈತರಿಗೆ ಇನ್‍ಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗುತ್ತಿದೆ. ಬರ ಪರಿಹಾರ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲು ಸರ್ಕಾರ ಕ್ರಮಕೈಗೊಂಡಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಬರಪರಿಹಾರ ಕಾರ್ಯಗಳ ವೀಕ್ಷಣೆ ನಡೆಸಲಾಗಿದೆ ಎಂದು ತಿಳಿಸಿದರು.

       ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link