ಶಿರಾ
ಕೋವಿಡ್-19 ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದ್ದು ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿನ ಬರಗೂರು ಗ್ರಾಮದ ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಿಕೊಂಡು ಕೊರೋನಾ ಎದುರಿಸಲು ಸಜ್ಜಾದ ಪ್ರಸಂಗ ನಡೆದಿದೆ.
ರಾಜ್ಯದಲ್ಲಿ ಸರ್ಕಾರವು ಬೆಂಗಳೂರಿನ ಕೆಲ ಭಾಗಗಳನ್ನು ಸೀಲ್ಡೌನ್ ಮಾಡಿದೆ ನಿಜ ಆದರೆ ಮಹಾಮಾರಿ ಕೊರೋನಾ ಸೋಂಕನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದೆಂಬ ದೃಷ್ಠಿಯಿಂದ ಬರಗೂರಿನ ಗ್ರಾಮಸ್ಥರು ಏ:18 ರಿಂದ ಮೂರು ದಿನಗಳವರೆಗೆ ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಿಕೊಂಡಿದ್ದಾರೆ.
ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಮಾಸ್ಕ್ಗಳನ್ನು ಸರಿಯಾಗಿ ಧರಿಸಿಕೊಳ್ಳದೆ ವಸ್ತುಗಳನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನೆರೆಯ ಆಂದ್ರ ಪ್ರದೇಶದ ಗಡಿಯಲ್ಲಿನ ಗ್ರಾಮದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಮೂರು ದಿನಗಳ ಸ್ವಯಂ ಘೋಷಿತ ಬಂದ್ಗೆ ಮುಂದಾಗಿದ್ದರು.
ಅಂಗಡಿ-ಮುಗ್ಗಟ್ಟುಗಳ ಬಾಗಿಲು ತೆರೆಯದಂತೆ ಸೀಲ್ಡೌನ್ಗೆ ಎಲ್ಲರೂ ಸಹಕಾರ ನೀಡುವಂತೆ ಗ್ರಾಮಸ್ಥರು ದ್ವನಿ ವರ್ಧಕದಿಂದ ಪ್ರಚಾರ ಕೂಡಾ ಮಾಡಿದ್ದರು.ಏ:18 ರಿಂದ ಮೂರು ದಿನಗಳವರೆಗೆ ಮನೆಯಿಂದ ಯಾರೂ ಹೊರಬಾರದು, ಯಾವುದೇ ಅಂಗಡಿ-ಮುಗ್ಗಟ್ಟುಗಳನ್ನು ತೆರೆಯಬಾರದು, ಗ್ರಾಮದಿಂದ ಯಾರೂ ಹೊರ ಹೋಗುವಂತಿಲ್ಲ, ಯಾರೂ ಒಳ ಬರುವಂತಿಲ್ಲ ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಂಡ ಬರಗೂರು ಗ್ರಾಮಸ್ಥರು ಇಡೀ ಗ್ರಾಮವನ್ನು ಸೀಲ್ಡೌನ್ ಮಾಡಿಕೊಂಡಿದ್ದು ಸಾರ್ವಜನಿಕ ಪ್ರಶಂಸೆಗೂ ಕಾರಣವಾಗಿದೆ.
ಔಷಧಿ ಅಂಗಡಿ, ಸರ್ಕಾರಿ ಆಸ್ಪತ್ರೆ, ಒಂದೆರಡು ಸರ್ಕಾರಿ ಕಛೇರಿಗಳ ಬಾಗಿಲು ತೆರೆದಿದ್ದನ್ನು ಬಿಟ್ಟರೆ ಇಡೀ ಬರಗೂರು ಗ್ರಾಮ ಸಾರ್ವಜನಿಕರ ಓಡಾಟವೂ ಇಲ್ಲದೆ ಬಣಗುಟ್ಟಿತಲ್ಲದೆ ಗ್ರಾಮಸ್ಥರು ತೆಗೆದುಕೊಂಡ ಮೂರು ದಿನಗಳ ಸೀಲ್ಡೌನ್ನ ಮೊದಲ ದಿನ ಕೊನೆಗೂ ಯಶ ಕಂಡಿದೆ. ಈ ನಡುವೆ ಆಂದ್ರದ ಗಡಿಭಾಗದಲ್ಲಿ ಆರಕ್ಷಕ ಸಿಬ್ಬಂಧಿ ಕೈಗೊಂಡ ಬಂದೋಬಸ್ತಿನ ಕ್ರಮ ಕೂಡಾ ಸ್ವಯಂ ಘೋಷಿತ ಸೀಲ್ಡೌನ್ಗೆ ಸಹಕಾರಿಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








