ತುಮಕೂರು : ಬರಿದಾಗುತ್ತಿರುವ ಜಲಮೂಲಗಳು ಮುಂದೇನು???

ತುಮಕೂರು

ವಿಶೇಷ ವರದಿ: ಆರ್.ಎಸ್.ಅಯ್ಯರ್

      ತುಮಕೂರು ನಗರದಲ್ಲಿ ಸಾರ್ವಜನಿಕರಿಗೆ ಪ್ರಸ್ತುತ ಬೇಡಿಕೆಗಿಂತ ಅತಿ ಕಡಿಮೆ ಪ್ರಮಾಣದ ನೀರು ಸರಬರಾಜಾಗುತ್ತಿದೆ. ವಾಸ್ತವವಾಗಿ ಮೂರೂವರೆ ಲಕ್ಷಕ್ಕೂ ಅಧಿಕ ಪ್ರಮಾಣದ ಜನಸಂಖ್ಯೆಯುಳ್ಳ ನಗರದಲ್ಲಿ ಪ್ರತಿನಿತ್ಯ 57 ಎಂ.ಎಲ್.ಡಿ.ಯಷ್ಟು ನೀರಿನ ಬೇಡಿಕೆ ಇದೆ. ಆದರೆ ಈಗ ತುಮಕೂರು ಮಹಾನಗರ ಪಾಲಿಕೆಯು ನಗರದ ಜನತೆಗೆ ಕೇವಲ 31 ಎಂ.ಎಲ್.ಡಿ. ಯಷ್ಟು ನೀರನ್ನು ಮಾತ್ರ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಮೇಲ್ನೋಟಕ್ಕೇ 26 ಎಂ.ಎಲ್.ಡಿ.ಯಷ್ಟು ನೀರಿನ ಕೊರತೆ ಇರುವುದು ಎದ್ದುಕಾಣುತ್ತಿದೆ. ಸಹಜವಾಗಿಯೇ ಇದು “ಮುಂದೇನು?” ಎಂಬ ಪ್ರಶ್ನೆಯೊಂದಿಗೆ ಆತಂಕವನ್ನು ಮೂಡಿಸಿದೆ.

    ತುಮಕೂರು ನಗರದ ಕುಡಿಯುವ ನೀರಿನ ಏಕೈಕ ಆಸರೆಯಾಗಿರುವ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ” ಈಗ ಬಹುತೇಕ ಬರಿದಾಗಿದೆ. ಅಲ್ಲಿರುವ ಹೇಮಾವತಿ ನೀರನ್ನು ಕಡಿಮೆ ಪ್ರಮಾಣದಲ್ಲಾದರೂ ಸರಿ, ಸಾಧ್ಯವಾದಷ್ಟೂ ಹೆಚ್ಚು ದಿನಗಳ ಕಾಲ ಉಪಯೋಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮಹಾನಗರ ಪಾಲಿಕೆಯು ಕೈಗೊಂಡ ಮುಂದಾಲೋಚನೆಯ ಕ್ರಮದಿಂದ ಜಲಸಂಗ್ರಹಾಗಾರದಲ್ಲಿ ಅಲ್ಪಸ್ವಲ್ಪ ನೀರು ಇನ್ನೂ ಉಳಿದುಕೊಂಡಿದೆ. ಇದನ್ನು ಹೇಗಾದರೂ ಮಾಡಿ ಆಗಸ್ಟ್ ಮಾಹೆಯ ಮೊದಲನೇ ಅಥವಾ ಎರಡನೇ ವಾರದವರೆಗೂ ಬಳಸಿಕೊಳ್ಳುವ ಲೆಕ್ಕಾಚಾರ ಪಾಲಿಕೆಯದು.

ಹೇಮಾವತಿ-ಮೈದಾಳ-ಬೋರ್

      ಜನಸಂಖ್ಯೆಯ ಅನುಸಾರ ಪ್ರತಿನಿತ್ಯ 57 ಎಂ.ಎಲ್.ಡಿ.ಯಷ್ಟು ನೀರು ತುಮಕೂರು ನಗರಕ್ಕೆ ಅಗತ್ಯವಿದೆ. ಆದರೆ ಪರಿಸ್ಥಿತಿ ಅಷ್ಟು ಅನುಕೂಲಕರವಾಗಿಲ್ಲ. ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ದಿಂದ ಪ್ರಸ್ತುತ 15 ಎಂ.ಎಲ್.ಡಿ.ಯಷ್ಟು ಮಾತ್ರ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಮೈದಾಳ ಕೆರೆಯಿಂದ ಪ್ರತಿನಿತ್ಯ 8 ಎಂ.ಎಲ್.ಡಿ.ಯಷ್ಟು ನೀರನ್ನು ಸರಬರಾಜು ಮಾಡಿಕೊಳ್ಳಲಾ ಗುತ್ತಿದೆ. ಪಾಲಿಕೆ ಸುಪರ್ದಿನ ಚಾಲನೆಯಲ್ಲಿರುವ 433 ಕೊಳವೆ ಬಾವಿಗಳಿಂದ 8 ಎಂ.ಎಲ್.ಡಿ.ಯಷ್ಟು ನೀರನ್ನು ಪೂರೈಸಲಾಗುತ್ತಿದೆ.

       ಅಂದರೆ ಒಟ್ಟಾರೆ ಈಗ ಈ ಮೂರು ಜಲಮೂಲಗಳಿಂದ ದೈನಿಕ 31 ಎಂ.ಎಲ್.ಡಿ.ಯಷ್ಟು ನೀರನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿದೆ. ಇನ್ನು 26 ಎಂ.ಎಲ್.ಡಿ.ಯಷ್ಟು ನೀರಿನ ಕೊರತೆ ಎದುರಿಸುವಂತಾಗಿದೆಯೆಂಬುದು ಕಳವಳ ಉಂಟುಮಾಡಿದೆ.
ಮೈದಾಳ ಕೆರೆಯಿಂದ ದೈನಿಕ ಲಭ್ಯವಾಗುತ್ತಿರುವ 8 ಎಂ.ಎಲ್.ಡಿ. ನೀರನ್ನು ತುಮಕೂರಿನ ವಿದ್ಯಾನಗರ ವಾಟರ್‍ವಕ್ರ್ಸ್ ಮೂಲಕ ನಗರದ 12 ವಾರ್ಡ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಷ್ಟರಮಟ್ಟಿಗೆ ಹೇಮಾವತಿ ನೀರಿನ ಮೇಲಿದ್ದ ಒತ್ತಡ ಕಡಿಮೆಯಾಗಿದೆ. ಹೇಮಾವತಿಯ ಅಲ್ಪಸ್ವಲ್ಪ ನೀರನ್ನು ಉಳಿದ ವಾರ್ಡ್‍ಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ಎಲ್ಲೆಡೆ ಕೊಳವೆ ಬಾವಿಗಳ ನೀರನ್ನು ಪೂರೈಸಲಾಗುತ್ತಿದೆ. ಈ ರೀತಿ ಈ ಮೂರು ಜಲಮೂಲಗಳ ನೀರನ್ನು ಮಹಾನಗರ ಪಾಲಿಕೆಯು ಹಂಚಿಕೆ ಮಾಡುತ್ತಿದೆ.

ಟ್ಯಾಂಕರ್‍ಗಳ ಬಳಕೆ

      ಇದರೊಡನೆ ಪಾಲಿಕೆಯು ತೀರಾ ಅನಿವಾರ್ಯವೆನಿಸುವ ಸ್ಥಳಗಳಿಗೆ ಪಾಲಿಕೆಗೆ ಸೇರಿರುವ 7 ಟ್ಯಾಂಕರ್‍ಗಳ ಮೂಲಕವೂ ನೀರನ್ನು ಸರಬರಾಜು ಮಾಡುತ್ತಿದೆ. ಹೇಮಾವತಿ ಅಥವಾ ಮೈದಾಳ ಕೆರೆಯ ನೀರನ್ನು ಈ ಟ್ಯಾಂಕರ್‍ಗಳು ಪೂರೈಸುತ್ತಿವೆ. ಪ್ರತಿ ಟ್ಯಾಂಕರ್ ದಿನವೊಂದಕ್ಕೆ 7 ರಿಂದ 8 ಟ್ರಿಪ್ ನೀರು ಸರಬರಾಜು ಮಾಡುತ್ತಿದ್ದು, ಈ 7 ಟ್ಯಾಂಕರ್‍ಗಳಿಂದಲೇ ದೈನಿಕ ಎರಡೂವರೆ ಲಕ್ಷ ಲೀಟರ್‍ಗಳಷ್ಟು ನೀರು ವಿತರಣೆಗೊಳ್ಳುತ್ತಿದೆಯೆಂದು ಲೆಕ್ಕಾಚಾರ ಮಾಡಲಾಗಿದೆ.

    “ತೀರಾ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿದರೆ, ಟ್ಯಾಂಕರ್‍ಗಳಿಗಿಂತಲೂ ನಲ್ಲಿ ಮೂಲಕ ನೀರಿನ ವಿತರಣೆ ಮಾಡುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಟ್ಯಾಂಕರ್‍ಗಳಲ್ಲಿ ನೀರನ್ನು ಹಿಡಿಯುವುದಕ್ಕಿಂತ, ಸ್ವಲ್ಪ ಕಡಿಮೆ ಪ್ರಮಾಣದಲ್ಲಾದರೂ ನಲ್ಲಿ ಮೂಲಕ ನೀರು ಸರಬರಾಜಾಗುವುದನ್ನೇ ಜನರೂ ಬಯಸುತ್ತಾರೆ. ನಲ್ಲಿ ಮೂಲಕವಾದರೆ ನೀರೂ ವ್ಯರ್ಥವಾಗುವುದಿಲ್ಲ” ಎಂಬ ಅಭಿಪ್ರಾಯವೂ ಪಾಲಿಕೆಯಲ್ಲಿ ವ್ಯಕ್ತವಾಗುತ್ತಿದೆ.

 ಹೇಮಾವತಿಯತ್ತ ಚಿತ್ತ

      ಕಳೆದ ಎರಡು ದಶಕಗಳಿಂದ ತುಮಕೂರು ನಗರದ ಜನತೆಯ ನೀರನ ದಾಹವನ್ನು ನೀಗಿಸುತ್ತಿರುವುದು ಹೇಮಾವತಿ ನೀರೊಂದೇ. ಅದೇ ಕಾರಣದಿಂದ ಎಲ್ಲರ ಚಿತ್ತ ಹೇಮಾವತಿ ನೀರಿನತ್ತಲೇ ಕೇಂದ್ರೀಕೃತವಾಗಿದೆ.

    “ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ (ಜುಲೈ 15 ರ ಮಾಹಿತಿಯ ಪ್ರಕಾರ) `ಡೆಡ್ ಸ್ಟೋರೇಜ್’ ಒಳಗೊಂಡು ಒಟ್ಟು 12.37 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ `ಡೆಡ್ ಸ್ಟೋರೇಜ್’ ಎಂದು 4.37 ಟಿ.ಎಂ.ಸಿ.ಯಷ್ಟು ನೀರು ಇರಲೇಬೇಕು. ಅದನ್ನು ಬಿಟ್ಟು 8 ಟಿ.ಎಂ.ಸಿ.ಯಷ್ಟು ನೀರು (`ಲೈವ್’) ಈಗ ಸಂಗ್ರಹವಾಗಿದೆ. ನಾಲೆಗೆ ನೀರನ್ನು ಬಿಡುಗಡೆಗೊಳಿಸಬೇಕೆಂದರೆ ತಾಂತ್ರಿಕವಾಗಿ ಜಲಾಶಯದಲ್ಲಿ 14 ಟಿ.ಎಂ.ಸಿ.ಯಷ್ಟು ನೀರು ಇರಬೇಕು. ಆದರೆ ಈ ಕ್ಷಣದಲ್ಲಿ ಅಷ್ಟು ನೀರು ಅಲ್ಲಿಲ್ಲ.

      ಆಗಸ್ಟ್ ಮಾಸಾಂತ್ಯದ ಹೊತ್ತಿಗೆ -ಅಷ್ಟರಲ್ಲಿ ಇನ್ನಷ್ಟು ಮಳೆ ಆಗಿ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವುದೆಂಬ ಆಶಯವೂ ಇರುವುದರಿಂದ- ತುಮಕೂರಿಗೆ ಹೇಮಾವತಿ ಹರಿದುಬರಬಹುದೆಂಬ ನಿರೀಕ್ಷೆ ಇದೆ” ಎಂದು ಮೂಲಗಳು ಹೇಳುತ್ತಿವೆ.ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಯ ಮೂಲಕ ತುಮಕೂರು ಜಿಲ್ಲೆಯತ್ತ ನೀರು ಹರಿದು ಬರಬೇಕು. ಬಲದಂಡೆ ನಾಲೆಯಿಂದ ರಾಮನಾಥಪುರ, ಕೆ.ಆರ್.ನಗರ ಕಡೆಗೆ ಹಾಗೂ ಇನ್ನೊಂದು ನಾಲೆಯಿಂದ ಹಾಸನಕ್ಕೆ ನೀರು ಹರಿಯುತ್ತದೆ.

      ತುಮಕೂರು ಜಿಲ್ಲೆಗೆ ನೀರು ಹರಿದುಬರಬೇಕಾದರೆ ಶಾಸಕರ ಸಭೆ ನಡೆದು ನಿರ್ಧಾರ ಕೈಗೊಳ್ಳಬೇಕು. ಐ.ಸಿ.ಸಿ. ಸಭೆ ನಡೆದು ತೀರ್ಮಾನವಾಗಬೇಕು. ಜೊತೆಗೆ ಈಗ ಕಾವೇರಿ ಪ್ರಾಧಿಕಾರದ ನಿರ್ಣಯವೂ ಆಗಬೇಕು. ಅದೇನೇ ಇದ್ದರೂ ತುಮಕೂರು ಜಿಲ್ಲೆಯ ಜನರು ಈಗ ಹೇಮಾವತಿ ಜಲಾಶಯದತ್ತ ನೋಟ ಹರಿಸುತ್ತಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link