ಚಿತ್ರದುರ್ಗ:
ದೇಶಕ್ಕೆ ಸ್ವಾತಂತ್ರ ದೊರೆತು ಎಪ್ಪತ್ತು ವರ್ಷಗಳಾಗಿದ್ದರೂ ಕೊಳಗೇರಿ ನಿವಾಸಿಗಳು ಇನ್ನು ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕುತ್ತಿರುವುದಕ್ಕೆ ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯೇ ಕಾರಣ ಎಂದು ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಆಪಾದಿಸಿದರು
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಾಸಿಸಲು ಸ್ವಂತ ಮನೆಯಿಲ್ಲ. ರಸ್ತೆ, ಬೀದಿದೀಪ, ಚರಂಡಿ, ಶೌಚಾಲಯವಂತೂ ಇಲ್ಲವೇ ಇಲ್ಲ. ಶುದ್ದ ಕುಡಿಯುವ ನೀರಂತೂ ಮರೀಚಿಕೆಯಾಗಿದೆ.
ಪ್ರತಿ ಚುನಾವಣೆಯಲ್ಲಿಯೂ ನಿಮ್ಮ ಅಮೂಲ್ಯವಾದ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳುವುದರಿಂದ ಯೋಗ್ಯರು ಚುನಾವಣೆಯಲ್ಲಿ ಗೆದ್ದು ಬರುವುದು ಕಷ್ಟವಾಗಿದೆ. ಇನ್ನು ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗ ಕನ್ನಡ ನಾಡು ನಾಲ್ಕು ಭಾಗಗಳಾಗಿದೆ. ತಮಿಳುನಾಡು, ಆಂದ್ರ, ಮಹಾರಾಷ್ಟ್ರ, ಕೇರಳದವರು ಕರ್ನಾಟಕದ ಜಾಗವನ್ನು ಕೇಳುತ್ತಿದ್ದಾರೆ. ನವೆಂಬರ್‍ಗೆ ಮಾತ್ರ ಕನ್ನಡವನ್ನು ಮೀಸಲಾಗಿಡುವ ಬದಲು ಜೀವನದ ಉಸಿರಿರುವತನ ಕನ್ನಡದ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡವನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು.
ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಚಿತ್ರದುರ್ಗದ ನಲವತ್ತು ಸ್ಲಂಗಳಲ್ಲಿ ಇನ್ನು ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿರುವ ಕೊಳಗೇರಿಗಳ ನಿಜವಾದ ನಾಯಕ ಎಂದರೆ ಗಣೇಶ್. ತಮ್ಮ ಜೀವನವನ್ನೇ ಕೊಳಗೇರಿಗಳ ಹೋರಾಟಕ್ಕಾಗಿ ಮೀಸಲಿಟ್ಟಿದ್ದಾರೆ. ಕನ್ನಡ ಭಾಷೆ ಹರಿದು ಹಂಚಿ ಹೋಗಿದೆ. ದೃಶ್ಯ ಮಾಧ್ಯಮಗಳಿಂದ ನಿಜವಾಗಿಯೂ ಕನ್ನಡ ಕಗ್ಗೊಲೆಯಾಗುತ್ತಿದೆ. ಸ್ಲಂ, ಕಾಲೋನಿ, ಆಡಿ, ಹಟ್ಟಿ, ತಾಂಡ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇನ್ನು ಕನ್ನಡ ಜೀವಂತವಾಗಿ ಗಟ್ಟಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಗಡಿಭಾಗಗಳಲ್ಲಿ ಕನ್ನಡ ಜೀವಂತವಾಗಿಲ್ಲ. ಮಧ್ಯಕರ್ನಾಟಕ, ಮೈಸೂರಿನಲ್ಲಿ ಮಾತ್ರ ಕನ್ನಡ ಇನ್ನು ಉಳಿದಿದೆ. ಕರ್ನಾಟಕದ ನೆಲದಲ್ಲಿ ಯಾರು ಖಾಯಂ ಆಗಿ ಬದುಕುತ್ತಿದ್ದಾರೋ ಅವರುಗಳೆಲ್ಲಾ ಕನ್ನಡಿಗರು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದಾಗ ಮಾತ್ರ ನಿಜಕ್ಕೂ ಕನ್ನಡ ಉಳಿಯುತ್ತದೆ ಎಂದರು.
ಜಿಲ್ಲಾ ಬಡಗಿಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ನಿರಂಜನದೇವರಮನೆ, ಕರುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಎಸ್.ವೆಂಕಟೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್ ವೇದಿಕೆಯಲ್ಲಿದ್ದರು.ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ