ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಬಹುತೇಕ ಕೆರೆಗಳು ಹೂಳು, ಜಾಲಿ ಹಾಗೂ ಬಾರಿ ಕಂದಕ, ಜೊತೆಯಲ್ಲಿ ಒತ್ತುವರಿಯಿಂದ ಕೂಡಿದ್ದು, ಇದರಿಂದ ಜಲ ಸಂರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಜಲಸಂರಕ್ಷಣೆ ಹಾಗೂ ಕೆರೆ ಅಭಿವೃದ್ಧಿಯ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಜಿಲ್ಲೆಯ 164 ಕೆರೆಗಳ ಅಭಿವೃದ್ಧಿಗೆ ಸೂಚನೆ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧ್ಯಕ್ಷರು, ಸದಸ್ಯರು ಮತ್ತು ನೀರು ಸಂರಕ್ಷಣಾ ಸಮಿತಿ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲ್ಲೂಕಿನ ಒಟ್ಟು 5 ಕೆರೆಗಳ ಅಭಿವೃದ್ಧಿಗೆ 25 ಲಕ್ಷ ಹಣ ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕೆರೆಗಳ ದುರಸ್ಥಿತಿ ಕಾರ್ಯಕೈಗೊಳ್ಳಬೇಕಲ್ಲದೆ, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಸಂರಕ್ಷಣೆ ಹಾಗೂ ಇಂಗು ಗುಂಡಿ ಇರುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಇಲಾಖೆಯ ಯಾವುದೇ ಯೋಜನೆ ಅನುಷ್ಠಾನಗೊಳಿಸಬೇಕಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಮೀರಿ ಯಾವುದೇ ರೀತಿಯ ಕಾಮಗಾರಿ ನಡೆದಲ್ಲಿ ಇಲಾಖೆಯ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಿರೇಹಳ್ಳಿ, ಪಾಲನಾಯಕಕೋಟೆ, ಟಿ.ಎನ್.ಕೋಟೆ, ಘಟಪರ್ತಿ, ಚೌಳೂರು ಗ್ರಾಮಗಳ ಕೆರೆ ಅಭಿವೃದ್ಧಿಗೆ 25 ಲಕ್ಷ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್ ಮಾತನಾಡಿ, ಈಗಾಗಲೇ ಕೆರೆಯ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಎಲ್ಲರೂ ನಿಯವiಕ್ಕೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸಬೇಕಿದೆ. ಗ್ರಾಮೀಣ ಪ್ರದೇಶಗಳ ಕೆರೆಗಳ ಹೂಳನ್ನು ಹೊರತೆಗೆದಾಗ ಅವುಗಳನ್ನು ನಿಯಮದಾನುಸಾರ ಮಾರಾಟ ಮಾಡಲಾಗುವುದು.
ಇದಕ್ಕಾಗಿ ಸಂಬಂಧಪಟ್ಟ ಗ್ರಾಮಗಳ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಿ ಒಂದು ಲೋಡ್ ಟ್ರ್ಯಾಕ್ಟರ್ ಮಣ್ಣಿಗೆ 20 ರೂ, ಟಿಪ್ಪರ್ ಲೋಡ್‍ಗೆ 30 ರೂ ನಂತೆ ನಿಗದಿ ಪಡಿಸಿದ್ದು, ಸದರಿ ಹಣವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಸೂಚಿಸಿದರು. ಕೆರೆಯ ಅಭಿವೃದ್ಧಿ, ಸ್ವಚ್ಚತೆ, ಗುಂಡಿಗಳನ್ನು ಮುಚ್ಚುವುದು ಮತ್ತು ಕೆರೆಗಳ ಬದುವನ್ನು ಸಮಪಡಿಸುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಕೆರೆ ಸ್ವಚ್ಚತೆ ಮುಂದಾಗದಲ್ಲಿ ಅವಕಾಶ ನೀಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
