ಹಾವೇರಿ:
ಹಾವೇರಿ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಖಚಿತವೆಂದು ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
ನಗರದ ಖಾಸಗಿ ಹೊಟೆಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿರುವ ಗದಗ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತಲೂ ಹೆಚ್ಚಿನ ಮತ ಪಡೆಯಲಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಈಗಾಗಲೇ ಭಯ ಸುರುವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ವ್ಯಯಕ್ತಿಕ ಟೀಕೆಯನ್ನು ಮಾಡುತ್ತಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ರಾಜಕಾರಣವಾಗಿದೆ. ದೇಶದಲ್ಲಿ ಮತ್ತೊಂದು ಬಾರಿ ಮೋದಿ ನೇತೃತ್ವದ ಸರಕಾರ ಬರುವುದನ್ನು ಅರಿತುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಈ ಥರ ಹೇಳಿಕೆ ಕೊಡುತ್ತಿದ್ದಾರೆಂದರೆಂದರು.
ನಮ್ಮ ಪಕ್ಷದ ಅಭ್ಯರ್ಥಿಗಳ ಮುಖಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಖ ಕಾಣುತ್ತಲಿದೆ. ಹೀಗಾಗಿ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್‍ನವರು ತಮ್ಮ ಪಕ್ಷದ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಹೆಸರನ್ನು ಹೇಳಿ ಮತ ಕೇಳಲಿ, ರಾಹುಲ್‍ಗಾಂಧಿ ಹೆಸರಲ್ಲಿ ಮತ ಕೇಳಿದರೇ ಜನರು ಮತ ಹಾಕಬೇಕಲ್ಲವೆಂದು ವ್ಯಂಗವಾಡಿದರು.
ಯುವಕರು ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಪಕ್ಷವನ್ನು ಹೆಚ್ಚು ಬೆಂಬಲಿಸಲಿದ್ದಾರೆ, ಕ್ಷೇತ್ರದಾದ್ಯಂತ ಮತದಾರರು ಈಗಾಗಲೇ ಬಿಜೆಪಿ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗಿನಂತಾಗಿದೆ. ಆದ್ದರಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೇ ಬಿಜೆಪಿಯ ಶಿವಕುಮಾರ ಉದಾಸಿಯವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೋದಡೆಯಲ್ಲೆಡೆ ಹೇಳುತ್ತಾ ಸಾಗುತ್ತಿದ್ದಾರೆ. ಇದನ್ನು ನೋಡಿದರೇ ಅವರ ಪಕ್ಷದ ಆಂತರಿಕ ಸ್ಥಿತಿ ಚಿಂತಾಜನಕವಾಗಿದೆ. ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಕಲಬೆರಕೆ ಸರಕಾರವಾಗಿದೆ. ಎಣ್ಣೆ ಶೀಗೆಕಾಯಿ ತರ ಸರಕಾರ ನಡೆಯುತ್ತಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದ ತಕ್ಷಣವೇ ಮೈತ್ರಿ ಸರಕಾರ ಉರುಳಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಿಲಿದೆ ಎಂದು ತಮ್ಮ ಭರವಸೆಯನ್ನು ವ್ಯಕ್ತ ಪಡಿಸಿದರು.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಸರಕಾರವೇ ಅಸ್ತಿತ್ವದಲ್ಲಿಲ್ಲದಂತ ವಾತವರಣ ಸೃಷ್ಟಿಯಾಗಿದೆ. ರಾಜ್ಯದ ಜನತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷದ ಸರಕಾರದಿಂದ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯದ ಜನರು ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಆರ್ಶಿವಚನ ಮಾಡಲಿದ್ದಾರೆಂದರಲ್ಲದೇ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಮತದಾರರು ಶಿವಕುಮಾರ ಉದಾಸಿ ಅವರಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಮತ್ತೊಂದು ಬಾರಿ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಲು ಅನುಕೂಲ ಮಾಡಿಕೊಡುವಂತೆ ಜನತೆಯಲ್ಲಿ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಸಜ್ಜನರ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಯು.ಬಿ.ಬಣಕಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ,ವೀರುಪಾಕ್ಷಪ್ಪ ಕಡ್ಲಿ ಇದ್ದರು.