ಬಳ್ಳಾರಿ
ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗಾಗಿ ನಡೆದ ಮತದಾನ ಪ್ರಕ್ರಿಯೆಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ದಿಗ್ಗಜರು ತಮ್ಮ ತಮ್ಮ ಕ್ಷೇತ್ರದಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ದಂಪತಿ ಸಮೇತ ದೇವಿನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಕಟ್ಟಡ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮುಜರಾಯಿ ಸಚಿವ ಪಿಟಿ ಪರಮೇಶ್ವರ ನಾಯಕ್ ತಮ್ಮ ಪತ್ನಿಯೊಂದಿಗೆ ಹೂವಿನ ಹಡಗಲಿ ಪಟ್ಟಣದ ಎಸ್ಕೆಜಿಜಿ ಪದವಿಪೂರ್ವ ಕಾಲೇಜಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ್ ಸಂಡೂರಿನಲ್ಲಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪನವರು ಪತ್ನಿ ಸಮೇತ ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿ ಮತದಾನ ಮಾಡಿದರು. ಶಾಸಕ ಜಿ.ಸೋಮಶೇಖರ್ ರೆಡ್ಡಿ, ಹರಪನಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ ಮತ್ತು ಜನಾರ್ಧನರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಪುತ್ರ ಕಿರೀಟಿ, ಪುತ್ರಿ ಬ್ರಹ್ಮಿಣಿ ಅವಂಬಾವಿಯ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 5 ರಲ್ಲಿ ಮತದಾನ ಮಾಡಿದರು.
ಮಾಜಿ ಸಚಿವ ದಿವಾಕರ್ ಬಾಬು, ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಅವರು ಸಹ ಮತ ಚಲಾಯಿಸಿದರು. ಶಾಸಕ ಬಿ.ನಾಗೇಂದ್ರ ಬಾಲಭಾರತಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರೆ ಕಂಪ್ಲಿ ಮಾಜಿ ಶಾಸಕ ಟಿಎಚ್ ಸುರೇಶ್ ಬಾಬು ಕೂಡ 1ನೇ ವಾರ್ಡಿನಲ್ಲಿ ಬರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಉಳಿದಂತೆ ಶಾಸಕರಾದ ಭೀಮಾ ನಾಯ್ಕ, ಎಂಎಸ್ ಸೋಮಲಿಂಗಪ್ಪ, ವಿಜಯನಗರ ಕ್ಷೇತ್ರದ ಬಿಎಸ್ ಆನಂದ್ ಸಿಂಗ್ ಮತದಾನ ಮಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀನಾ ಮಂಜುನಾಥ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ತಮ್ಮ ಪತ್ನಿ ದಿವ್ಯಪ್ರಭು ಅವರೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಕೂಡ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ 1ನೇ ವಾರ್ಡ್‍ನಲ್ಲಿ ಬರುವ ಮತಗಟ್ಟೆ ಸಂಖ್ಯೆ 5 ರಲ್ಲಿ ತಮ್ಮ ಪತ್ನಿ, ಜಿಪಂ ಸದಸ್ಯೆ ವೈ.ಸುಶೀಲಮ್ಮ ಅವರೊಂದಿಗೆ ತೆರಳಿ ಮತ ಹಾಕಿದರು.
ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಕೆಪಿಸಿಸಿ ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಮತ್ತಿತರೆ ಗಣ್ಯರು ಮತಗಟ್ಟೆಗೆ ತೆರಳಿ ಮತ ಹಾಕಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್ ಅವರೂ ಸಹ ಮತ ಹಾಕಿದರು.