ಬಿಬಿಎಂಪಿ ವೈದ್ಯೆ ಆತ್ಮಹತ್ಯೆ

ಬೆಂಗಳೂರು

    ಸಂಸಾರಿಕ ಕಲಹದ ಹಿನ್ನಲೆಯಲ್ಲಿ ಪತಿಯನ್ನು ಬಿಟ್ಟು ತವರಿಗೆ ಬಂದಿದ್ದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     ನಂದಿನಿ ಲೇಔಟ್‍ನ ಸಾಕಮ್ಮ ಬಡಾವಣೆಯ ಅಶ್ವಿನಿ (32)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ನಂದಿನಿ ಲೇಔಟ್‍ನ ಕೃಷ್ಣಾನಂದ ನಗರದ ಬಿಬಿಎಂಪಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನಂದಿನಿ ಲೇಔಟ್‍ನ ಸಾಕಮ್ಮ ಬಡಾವಣೆಯ ತವರು ಮನೆಗೆ ಬಂದು ವಾಸವಾಗಿದ್ದರು.

    ಎಂದಿನಂತೆ ಸೋಮವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅವರು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಬಹಳ ಸಮಯ ಕಳೆದರೂ ಅಶ್ವಿನಿ ಅವರು ಬಾಗಿಲು ತೆಗೆಯದಿದ್ದರಿಂದ ಕೊಠಡಿಯ ಬಾಗಿಲು ಹೊಡೆದು ನೋಡಿದಾಗ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಮೂರು ವರ್ಷದ ಹಿಂದೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಲೋಹಿತ್ ಜೊತೆ ಅಶ್ವಿನಿ ಮದುವೆ ನಡೆದಿತ್ತು.ಕೌಟುಂಬಿಕ ಕಲಹ ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆಶ್ವಿನಿ ಅವರು ತಾಯಿ ಮನೆಗೆ ವಾಪಸಾಗಿ ಅಲ್ಲೇ ಉಳಿದುಕೊಂಡಿದ್ದರು.ಪತಿಯ ಕಿರುಕುಳದಿಂದಲೇ ಆಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಲೋಹಿತ್ ಮೇಲೆ ಆರೋಪ ಮಾಡಿದ್ದಾರೆ.

     ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link