ಚಿಕ್ಕಮಗಳೂರು:
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರತಿಷ್ಠೆಗೆ ಮಸಿ ಬಳಿಯಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ಪಿತೂರಿ” ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯಆರೋಪಿಸಿದ್ದಾರೆ.
ಶನಿವಾರ ಚಿಕ್ಕಮಗಳೂರಿನಲ್ಲಿ ನಡೆದ ವೀರಶೈವ-ಲಿಂಗಾಯತ ಮಹಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರ ರಾಜಕೀಯ ಏಳಿಗೆಯನ್ನು ಯತ್ನಾಳ್ ಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಅವರ ಕೊಡುಗೆಗಳು ಅಪಾರವಾಗಿವೆ ಎಂದು ಹೇಳಿದರು.
ಯಡಿಯೂರಪ್ಪ ಕುಟುಂಬದ ಮೇಲೆ ವಿಷ ಕಾರಿದ್ದಾರೆ ಎಂದು ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡರು. “ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಇಡೀ ಲಿಂಗಾಯತ ಸಮುದಾಯದ ಬೆಂಬಲವಿರುವುದರಿಂದ ಯತ್ನಾಳ್ ಯಶಸ್ವಿಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಯತ್ನಾಳ್ ಬೇರೆಯವರ ತಾಳಕ್ಕೆ ತಕ್ಕಂತೆ ಕುಣಿಯಿುತ್ತಿದ್ದಾರೆ, ಸಮುದಾಯದ ಸ್ವಾಮೀಜಿಗಳನ್ನು “ಪೇಯ್ಡ್ ಸ್ವಾಮೀಜಿಗಳು” ಎಂದು ಕರೆದಿದ್ದಕ್ಕೆ ನಾಚಿಕೆಯಾಗಬೇಕು ಅವರಿಗೆ, ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವೀರಶೈವ ಸಮುದಾಯಕ್ಕೆ ಸರಿಯಾದ ಪಾಲು ಸಿಕ್ಕಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ವಿಷಾದಿಸಿದರು. ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವುದರಿಂದ ಯತ್ನಾಳ್ ಅವರ ಟೀಕೆಗೆ ವಿಜಯೇಂದ್ರ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು.
ವಿಜಯೇಂದ್ರ ಹೊಸ ಸಂಘಟನಾ ಚತುರ, ಅವರು ಬಹಳ ಎತ್ತರಕ್ಕೆ ಏರುತ್ತಾರೆ. ಯಾವುದೇ ಶಕ್ತಿ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ; ನಾವು, ಒಗ್ಗಟ್ಟಿನಿಂದ ಅವರನ್ನು ಬೆಂಬಲಿಸುತ್ತೇವೆ. ಭವಿಷ್ಯದಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಚುನಾವಣೆಗಳು ನಡೆಯಲಿವೆ ಮತ್ತು ನಾವು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಪಾಟೀಲ್ ಹೇಳಿದರು.
