ಪಾಲಿಕೆ ತೆರಿಗೆ ಪದ್ಧತಿ ಅಧ್ಯಯನಕ್ಕೆ ಬಿ.ಬಿ.ಎಂ.ಪಿ. ತಂಡ

ತುಮಕೂರು

    ತುಮಕೂರು ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹ ಪದ್ಧತಿಯಲ್ಲಿ ಮೌನವಾಗಿ ನಡೆಸಿರುವ ಹಲವು ಉಪಕ್ರಮಗಳು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯತೊಡಗಿದ್ದು, ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.) ಇದರತ್ತ ನೋಟ ಬೀರಿದೆ.

    ತುಮಕೂರು ಪಾಲಿಕೆಯ ಮಹತ್ವದ ಹೆಜ್ಜೆಗಳನ್ನು ಗಮನಿಸಿರುವ ಬಿ.ಬಿ.ಎಂ.ಪಿ.ಯು ಇದನ್ನು ಕುತೂಹಲದಿಂದ ಅಧ್ಯಯನ ಮಾಡಲು ಮುಂದಾಗಿದ್ದು, ಬುಧವಾರ ಬೆಳಗ್ಗೆ ಬಿ.ಬಿ.ಎಂ.ಪಿ.ಯ ಉನ್ನತಾಧಿಕಾರಿಗಳ ತಂಡವೊಂದು ತುಮಕೂರು ಪಾಲಿಕೆಗೆ ಆಗಮಿಸಿ ಸಮಗ್ರ ಮಾಹಿತಿ ಪಡೆದುಕೊಂಡಿತು.

    ಬಿ.ಬಿ.ಎಂ.ಪಿ.ಯ ಹೆಚ್ಚುವರಿ ಆಯುಕ್ತರೂ ಆಗಿರುವ ಹಿರಿಯ ಐ.ಎ.ಎಸ್. ಅಧಿಕಾರಿ ಡಾ. ಬಸವರಾಜು ಅವರ ನೇತೃತ್ವದಲ್ಲಿ ಬಿ.ಬಿ.ಎಂ.ಪಿ.ಯ ಉಪ –ಆಯುಕ್ತ (ಕಂದಾಯ)ರು ಸೇರಿದಂತೆ ಕಂದಾಯ ಶಾಖೆಯ ಪ್ರಮುಖ ಅಧಿಕಾರಿಗಳು-ಸಿಬ್ಬಂದಿ ಆಗಮಿಸಿದ್ದರು.

ಹಿಂದೆ ಎಲ್ಲವೂ ಗೊಂದಲಮಯ

    ಪಾಲಿಕೆಯ ಸಭಾಂಗಣದಲ್ಲಿ ಇವರಿಗೆ ಮಾಹಿತಿ ನೀಡಲು ಪ್ರಾತ್ಯಕ್ಷಿತೆ ವ್ಯವಸ್ಥೆ ಮಾಡಲಾಗಿತ್ತು. ತುಮಕೂರು ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಸ್ವತಃ ಸವಿವರ ಮಾಹಿತಿ ನೀಡಿದರು. ಪಾಲಿಕೆಯಲ್ಲಿ ಈ ಮೊದಲು ಇ-ಆಡಳಿತ ಇರಲಿಲ್ಲ. ಆಗ ಕಂದಾಯ ಸಂಗ್ರಹ ಕಡಿಮೆಯಿತ್ತು. ಪಾಲಿಕೆಯ ವಿವಿಧ ವಿಭಾಗಗಳ ನಡುವೆ ಸಮನ್ವಯತೆಯೇ ಇರಲಿಲ್ಲ. ಇದರಿಂದ ಕಂದಾಯಕ್ಕೆ ಸಂಬಂಧಿಸಿದ ಸ್ಪಷ್ಟ -ಸಮರ್ಪಕ ಮಾಹಿತಿ ಅಲಭ್ಯವಾಗಿತ್ತು. ಕಂದಾಯ ಸೋರಿಕೆಯೂ ಆಗುತ್ತಿತ್ತು. ದಂಡ ವಿಧಿಸುವುದೂ ಕ್ಷೀಣಿಸಿತ್ತು. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿತ್ತು. ಒಟ್ಟಾರೆ ಗೊಂದಲಮಯವಾಗಿತ್ತು ಎಂದು ಹಿಂದಿನ ಪರಿಸ್ಥಿತಿಯನ್ನು ಬಿಡಿಸಿಟ್ಟರು.

ಬದಲಾಗಿರುವ ಪರಿಸ್ಥಿತಿ

   ಆದರೆ ಈಗ ಇಲ್ಲಿ ಇ-ಆಡಳಿತವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ನಗರದ ಆಸ್ತಿ ಹಾಗೂ ಅವುಗಳ ತೆರಿಗೆ ಬಗ್ಗೆ ಅಂಕಿಅಂಶಗಳ ಮಾಹಿತಿ (ಡೇಟಾ) ಕಲೆಹಾಕಲಾಗಿದೆ. ಮೊಬೈಲ್ ಅಪ್ಲಿಕೇಷನ್ ಅಳವಡಿಸಲಾಗಿದೆ. ಇಂಟಿಗ್ರೇಟೆಡ್ ಉಪಕರಣ (ಇಡಿಎಸ್ ಮಿಷನ್)ವನ್ನು ಕಂದಾಯ/ಶುಲ್ಕ ಸಂಗ್ರಹಕ್ಕೆ ಬಳಸಲಾಗುತ್ತಿದೆ. ಈ ಉಪಕರಣ ಖರೀದಿಯ ಹೊರೆಯೂ ಪಾಲಿಕೆಗೆ ಬಿದ್ದಿಲ್ಲ. ತುಮಕೂರು ನಗರದಲ್ಲಿ 35 ವಾರ್ಡ್‍ಗಳಿದ್ದು, ಪ್ರತಿ ವಾರ್ಡ್‍ಗೆ ಒಂದರಂತೆ ಒಟ್ಟು 35 ಉಪಕರಣಗಳಿದ್ದು, ಅಷ್ಟನ್ನೂ ಎಚ್.ಡಿ.ಎಫ್.ಸಿ. ಬ್ಯಾಂಕ್ ಕೊಡುಗೆಯಾಗಿ ಕೊಟ್ಟಿದೆ. ಈ ಉಪಕರಣದ ಮೂಲಕ ತೆರಿಗೆಗೆ ಸಂಬಂಧಿಸಿದಂತೆ ಹಣವನ್ನು ನಗದು, ಚೆಕ್, ಡಿ.ಡಿ. -ಹೀಗೆ ಯಾವುದೇ ರೂಪದಲ್ಲಿ ಆಸ್ತಿದಾರರಿಂದ ಸ್ಥಳದಲ್ಲೇ ಸಂಗ್ರಹಿಸಿ, ಸ್ಥಳದಲ್ಲೇ ರಶೀದಿ ನೀಡಬಹುದಾಗಿದೆ. ಆಸ್ತಿ ತೆರಿಗೆ, ನೀರಿನ ಶುಲ್ಕ, ಯುಜಿಡಿ ಶುಲ್ಕ, ಜಾಹಿರಾತು ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ಕಟ್ಟಡ/ಅಂಗಡಿ ಬಾಡಿಗೆ, ಸ್ಥಳದಲ್ಲೇ ದಂಡ ವಿಧಿಸುವುದಕ್ಕೆ ಇದನ್ನು ಬಳಸಬಹುದಾಗಿದೆ. ಈ ಉಪಕರಣದ ಪರಿಣಾಮ ಈಗಾಗಲೇ ಕಂಡುಬರಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಪಾಲಿಕೆಗೆ ವರದಾನವಾಗಲಿದೆ ಎಂದು ಭೂಬಾಲನ್ ಎಳೆಎಳೆಯಾಗಿ ವಿವರಿಸಿದರು.

ತೆರಿಗೆ ಸಂಗ್ರಹ ದುಪ್ಪಟ್ಟು

    ಈ ಉಪಕರಣ ಬಳಕೆಯಿಂದ ಕಳೆದ 10 ತಿಂಗಳ ಅವಧಿಯಲ್ಲಿ ಮಹತ್ತರ ಫಲಿತಾಂಶ ಕಂಡುಬಂದಿದೆ. ಆಸ್ತಿತೆರಿಗೆ ಸಂಗ್ರಹವು 10.31 ಕೋಟಿ ಇದ್ದುದು, 19.02 ಕೋಟಿಗೆ (ಸುಮಾರು 2 ಪಟ್ಟು) ಏರಿದೆ. ನೀರಿನ ತೆರಿಗೆಯು 2.65 ಕೋಟಿ ಇದ್ದುದು, 8.01 ಕೋಟಿಗೆ (ಸುಮಾರು 3 ಪಟ್ಟು) ಅಧಿಕವಾಗಿದೆ. ಒಳಚರಂಡಿ ಶುಲ್ಕವು 24 ಲಕ್ಷ ರೂ. ಇದ್ದುದು, 1.23 ಕೋಟಿಗೆ (ಸುಮಾರು 5 ಪಟ್ಟು) ಏರಿದೆ. ವಿವಿಧ ರೀತಿಯ ದಂಡಗಳು (ಪೆನಾಲ್ಟಿ) ಒಂದು ಸಾವಿರ ರೂ. ಇದ್ದುದ್ದು, 22 ಲಕ್ಷ ರೂ.ಗಳಿಗೆ (ಸುಮಾರು 200 ಪಟ್ಟು) ಏರಿದೆ. ಉದ್ದಿಮೆ ಪರವಾನಗಿ ಶುಲ್ಕವು 1.10 ಕೋಟಿ ಇದ್ದುದು 1.96 (ಸುಮಾರು 2 ಪಟ್ಟು) ಅಧಿಕಗೊಂಡಿದೆ. ಬಾಡಿಗೆ ಮೊತ್ತವು 65 ಲಕ್ಷ ರೂ.ಗಳಿಂದ 1.31 ಕೋಟಿ ರೂಗಳಷ್ಟು (ಸುಮಾರು 2 ಪಟ್ಟು) ಅಧಿಕವಾಗಿದೆ ಎಂಬ ಅಂಕಿ ಅಂಶಗಳನ್ನು ಭೂಬಾಲನ್ ಹೆಮ್ಮೆಯಿಂದ ವಿವರಿಸಿದರು.

    ಪ್ರಸ್ತುತ ಹೊಸ ತಂತ್ರಜ್ಞಾನದ ಬಳಕೆಯಿಂದ ಸಂಬಂಧಿಸಿದ ಅಧಿಕಾರಿ ಯಾವ ದಿನ, ಯಾವ ವೇಳೆಯಲ್ಲಿ ಆಸ್ತಿದಾರರಿಗೆ ನೋಟೀಸ್ ನೀಡಿದ್ದಾರೆಂಬುದೂ ದೃಢಪಡುವುದರಿಂದ, ಕಂದಾಯ ವಸೂಲಿಗಾರರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಲೇಬೇಕಾಗುತ್ತದೆ. ಸ್ಥಳದಲ್ಲೇ ಎಲ್ಲ ಮಾಹಿತಿಗಳೂ ಲಭಿಸುವುದರಿಂದ ಆಸ್ತಿದಾರರಿಗೂ ಅನುಕೂಲವಾಗುತ್ತದೆ. ಪಾಲಿಕೆಯ ವಿವಿಧ ವಿಭಾಗಗಳ ನಡುವೆ ತುಂಬ ಸುಲಭವಾಗಿ ಸಮನ್ವಯತೆ ರೂಪುಗೊಂಡಂತಾಗಿದೆ.

   ಎಲ್ಲ ಮಾಹಿತಿಗಳೂ ಬೆರಳತುದಿಯಲ್ಲಿ ದೊರೆತಂತಾಗುತ್ತಿದೆ. ಇದಲ್ಲದೆ ಪ್ರತಿನಿತ್ಯದ ಕಂದಾಯ ಸಂಗ್ರಹ ಮೊದಲಾದ ಸಮಗ್ರ ಮಾಹಿತಿಯು ಆಯುಕ್ತರಿಗೆ ಮೊಬೈಲ್‍ನಲ್ಲೇ ಡ್ಯಾಷ್‍ಬೋರ್ಡ್ ಮೂಲಕ ಲಭಿಸುತ್ತದೆ. ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತ ಭೂಬಾಲನ್ ಬಿ.ಬಿ.ಎಂ.ಪಿ. ತಂಡಕ್ಕೆ ಮಾಹಿತಿ ನೀಡಿದರು.

  ಪಾಲಿಕೆಯ ಸೀನಿಯರ್ ಪ್ರೋಗ್ರಾಮರ್ ಹನುಮಂತರಾಜು ಸಹ ಕೆಲವೊಂದು ವಿಧಾನಗಳನ್ನು ಸದರಿ ತಂಡಕ್ಕೆ ವಿವರಿಸಿದರು. ಪಾಲಿಕೆಯ ಉಪ-ಆಯುಕ್ತ (ಕಂದಾಯ) ಯೋಗಾನಂದ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಸೇರಿದಂತೆ ತುಮಕೂರು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು-ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿ.ಬಿ.ಎಂ.ಪಿ. ತಂಡವು ಸಾಕಷ್ಟು ವಿಚಾರ ವಿನಿಮಯ ಮಾಡಿಕೊಂಡಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ