ಮುಂಗಾರು ವಿಪತ್ತು ಎದುರಿಸಲು ಸಿದ್ಧರಾಗಿ :ಡಿಸಿ

ಹಾವೇರಿ
     ಜೂನ್‍ನಿಂದ ಮುಂಗಾರು ಮಳೆ ಆರಂಭಗೊಳ್ಳಲಿದೆ. ಅತಿವೃಷ್ಟಿಯಿಂದ ಉಂಟಾಗುವ ಸಂಭವನೀಯ ಅವಘಡಗಳ ನಿರ್ವಹಣೆ ಹಾಗೂ ಮಳೆಗಾಲದಲ್ಲಿ ಜನ, ಜಾನುವಾರು, ಆಸ್ತಿಗಳ ರಕ್ಷಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತಂತೆ ತಾಲೂಕಾವಾರು ವಿಪತ್ತು ನಿರ್ವಹಣಾ  ಕ್ರಿಯಾ ಯೋಜನೆ ಸಿದ್ಧಮಾಡಿಕೊಳ್ಳಿ. ಮುಂಗಾರು ಅನಿರೀಕ್ಷಿತ ಅವಘಡಗಳ ಎದುರಿಸಲು ಸನ್ನದ್ಧರಾಗುವಂತೆ ತಹಶೀಲ್ದಾರಗಳಿಗೆ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಸೂಚನೆ ನೀಡಿದ್ದಾರೆ.
     ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿದ ಅವರು ವಿವಿಧ ತಾಲೂಕಾ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕಳೆದ ಅತಿವೃಷ್ಟಿಯಿಂದ ಉಂಟಾದ ಹಾನಿ ತಡೆಯಲು ಸಾಧ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಲು ಕ್ರಮವಹಿಸಿ ಈ ಕುರಿತಂತೆ ಇಂಜನೀಯರುಗಳಿಂದ ಸರ್ವೇ ನಡೆಸಿ ಮೂರು ದಿನದೊಳಗಾಗಿ ಕ್ರಿಯಾಯೋಜನೆ  ಸಲ್ಲಿಸಿ ಎಂದು ಸೂಚನೆ ನೀಡಿದರು.
    ಕಳೆದಬಾರಿ ಮಳೆಯಿಂದ ಉಂಟಾದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಾಣ, ಚರಂಡಿಗಳ ಸ್ವಚ್ಛತೆಯ ಮೂಲಕ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು, ಶಿಥಿಲಗೊಂಡ ವಿದ್ಯುತ್ ಕಂಬಳ ಬದಲಾವಣೆ, ಹರಿದುಹೋದ ತಂತಿಗಳ ಬಲಪಡಿಸುವುದು, ವಿಪತ್ತು ಎದುರಿಸಲು ತಂಡಗಳ ರಚನೆ, ಸಹಾಯವಾಣಿ ಸ್ಥಾಪನೆ, ತುರ್ತು ಸಂದರ್ಭದಲ್ಲಿ ಜೆಸಿಬಿ ಯಂತ್ರಗಳು ದೊರೆಯುವಂತೆ ಗುರುತುಮಾಡಿಕೊಳ್ಳುವುದು, ಗ್ರಾಮಗಳ ಸಂಪರ್ಕ ಮಾರ್ಗಗಳು, ಎತ್ತರದ ಸುರಕ್ಷಿತ ಕಟ್ಟಡಗಳನ್ನ ಗುರುತಿಸಿ ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಅವಕಾಶ ಮಾಡಿಕೊಳ್ಳುವುದು, ಗಂಜಿ ಕೇಂದ್ರಗಳ ಗುರುತಿಸುವುದು ಒಳಗೊಂಡಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
 
ಮನೆ ನಿರ್ಮಾಣ ತ್ವರಿತ:
 
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಕಳೆದ ಆಗಸ್ಟ್ ಹಾಗೂ ಅಕ್ಟೋಬರ್ ಮಾಹೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಿ. ಈ ಮಳೆಗಾಲ ಮುನ್ನವೇ ಮನೆಗಳ ದುರಸ್ಥಿ, ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ಈ ಕುರಿತಂತೆ ಈಗಾಗಲೇ ವಿವರವಾದ ಮಾರ್ಗಸೂಚಿಯನ್ನು ತಮಗೆ ನೀಡಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ನೈಜ ಫಲಾನುಭವಿಗಳಿಗೆ ತ್ವರಿತವಾಗಿ ಸೂರು-ಪರಿಹಾರ ದೊರಕಬೇಕು. ಸ್ಥಳಾಂತರ, ನಿರ್ಮಾಣ, ರಿಪೇರಿ ಕಾರ್ಯ ತ್ವರಿತವಾಗಿ ಇತ್ಯರ್ಥವಾಗಬೇಕು ಎಂದು ಎಲ್ಲಾ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
    ಗ್ರಾಮೀಣ ಭಾಗದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಮದ ಪಕ್ಕದಲ್ಲಿರುವ ರಾಜಕಾಲುವೆಗಳನ್ನು ಉದ್ಯೋಗ ಖಾತ್ರಿ ಯೋಜನೆಯ ನೆರವಿನಿಂದ ಪುನಶ್ಚೇತನಗೊಳಿಸಿ  ಮಳೆನೀರು ಸರಾಗವಾಗಿ ಊರಿಂದ ಹೊರಗೆ ಹರಿದು ಹೋಗುವಂತಾಗಬೇಕು. ಯಾವುದೇ ಕಾರಣಕ್ಕೂ ಮಳೆನೀರು ಗ್ರಾಮದ  ತಗ್ಗು ಪ್ರದೇಶಕ್ಕೆ ಹರಿದು ಊರು- ಮನೆಯೊಳಗೆ ನುಗ್ಗಿ ಹಳೆಯ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು. ಈ ಕುರಿತು ತಾಲೂಕಾವಾರು ಸಭೆ ನಡೆಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಿದರು.
ಹಾನಿದಿನವೇ ವರದಿ:
 
     ಮಳೆ-ಗಾಳಿಗೆ ಹಾನಿಯಾದ ಸ್ಥಳಕ್ಕೆ  ಅವಘಡ ಸಂಭವಿಸಿದ ದಿನವೇ ಹಾಜರಾಗಬೇಕು. ಜನರು ಸಂಕಷ್ಟದ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿ  ಸರ್ಕಾರಕ್ಕೆ ವರದಿ ಮಾಡಿದರೆ ಜನರ ಸಮಸ್ಯೆಗಳು ತ್ವರಿತವಾಗಿ ಇತ್ಯರ್ಥವಾಗುತ್ತವೆ. ಪರಿಹಾರ ವಿಳಂಬವಾಗುವುದು ತಪ್ಪುತ್ತದೆ. ಈ ಕ್ರಮವನ್ನು ಎಲ್ಲ ತಹಶೀಲ್ದಾರಗಳು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
      ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಹಾಗೂ ತೋಟಗಾರಿಕೆ  ಉಪನಿರ್ದೇಶಕ ಪ್ರದೀಪ ಅವರು  ಬೆಳೆಹಾನಿ ವರದಿ ಕುರಿತಂತೆ ಮಾಹಿತಿ ನೀಡಿ ಮುಂಗಾರು ಮಳೆಗೆ ತೋಟಗಾರಿಕೆ ಹಾಗೂ ಕೃಷಿ ಫಸಲು ಹಾಳಾದರೆ ತತಕ್ಷಣವೇ ಅಂದಾಜು ಹಾನಿಯನ್ನು ಸಲ್ಲಿಸಬೇಕು. ಮಳೆ ನೀರು ಇಳಿದ ಮೇಲೆ ನಿಖರವಾದ ವರದಿಯನ್ನು ಸಲ್ಲಿಸಬೇಕು. ಬೆಳೆಹಾನಿ ವರದಿಯನ್ನು ವಿಳಂಬವಾಗಿ ಸಲ್ಲಿಸಿದರೆ ಹಲವು ಗೊಂದಲಗಳು ಉಂಟಾಗುತ್ತವೆ ಎಂದು ತಹಶೀಲ್ದಾರಗಳಿಗೆ ತಿಳಿಸಿದರು.
     ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ,  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಚೈತ್ರಾ, ಹಾವೇರಿ ತಹಶೀಲ್ದಾರ ಶಂಕರ್, ರಾಣೇಬೆನ್ನೂರು ತಹಶೀಲ್ದಾರ ಬಸವನಗೌಡ ಕೋಟೂರ,  ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವೀರೇಂದ್ರ ಕುಂದಗೋಳ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ  ಸುಧಾಕರ,  ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಪ್ರದೀಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್,  ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ,  ವಾಯವ್ಯ ರಸ್ತೆ ಸಾರಿಗೆ  ಡಿಟಿಓ ಮುಜಂದಾರ,  ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಹೆಸ್ಕಾಂ ಅಭಿಯಂತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link