ಬಳ್ಳಾರಿ
ಕೊರೊನಾ ಸೊಂಕು ನಿಯಂತ್ರಣದಲ್ಲಿ ಬಳ್ಳಾರಿ ಜಿಲ್ಲಾಡಳಿತವು ಸರಕಾರದ ಆಶಯದಂತೆ ಮಾರ್ಗಸೂಚಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಜಿಲ್ಲಾಡಳಿತದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಸ್ಥಿತಿಗತಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 167 ಕೊರೊನಾ ಪ್ರಕರಣಗಳು ದಾಖಲಾಗಿದ್ದು,49 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಓರ್ವ ಸಾವನ್ನಪ್ಪಿದ್ದಾರೆ. 117 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ;ಅದರಲ್ಲಿ 3 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .ಉಳಿದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಭೆಗೆ ವಿವರಿಸಿದರು. ಇದನ್ನು ಆಲಿಸಿದ ಸಚಿವರು ಈಗ ಬಳ್ಳಾರಿ ಜಿಲ್ಲಾಡಳಿತ ಅನುಸರಿಸುತ್ತಿರುವ ಮಾರ್ಗಸೂಚಿಗಳನ್ನೇ ಇದೇ ರೀತಿ ಮುಂದುವರಿಸಿಕೊಂಡು ಹೋಗುವಂತೆ ಅವರು ಸಲಹೆ ನೀಡಿದರು.
ಬಳ್ಳಾರಿ ವಿಮ್ಸ್ ಲ್ಯಾಬ್‍ನಲ್ಲಿ ಇನ್ಮುಂದೆ ಪ್ರತಿನಿತ್ಯ 1 ಸಾವಿರ ಟೆಸ್ಟ್: ಬಳ್ಳಾರಿ ವಿಮ್ಸ್‍ನಲ್ಲಿ ಪ್ರಯೋಗಾಲಯದಲ್ಲಿ ಸದ್ಯ 250ರಿಂದ 300 ಜನರ ಸ್ವ್ಯಾಬ್ ಪರೀಕ್ಷೆ ಮಾಡಲಾಗುತ್ತಿದ್ದು,ನಮ್ಮ ಕೋರಿಕೆ ಮೇರೆಗೆ ಜಿಂದಾಲ್ ಕೂಡ 1.40 ಕೋಟಿ ರೂ.ವೆಚ್ಚದಲ್ಲಿ ಎರಡು ಟೆಸ್ಟ್ ಮಶೀನ್‍ಗಳನ್ನು ನೀಡಲು ಸಮ್ಮತಿಸಿದ್ದು,ಅವುಗಳನ್ನು ಮುಂದಿನ ವಾರ ಅಳವಡಿಸಲಾಗುವುದು. ಇದರಿಂದ ಪ್ರತಿನಿತ್ಯ 1 ಸಾವಿರ ಟೆಸ್ಟ್‍ಗಳನ್ನು ಪರೀಕ್ಷಿಸಲಾಗುತ್ತದೆ ಎಂದರು.
ಜಿಂದಾಲ್ ನೀಡುವ ಮಶೀನ್‍ಗಳಿಂದ ಜಿಂದಾಲ್‍ನಲ್ಲಿ ಕೋವಿಡ್ ಸಂಬಂಧಿತ ಲಕ್ಷಣಗಳಿರುವವರನ್ನು ಪರೀಕ್ಷಿಸುವುದರ ಜತೆಗೆ ಜಿಲ್ಲೆಯಲ್ಲಿ ಇದೇ ರೀತಿ ಲಕ್ಷಣಗಳಿರುವವರ ಸ್ವ್ಯಾಬ್ ತೆಗೆದುಕೊಂಡು ಪರೀಕ್ಷಿಸಲಾಗುತ್ತದೆ ಎಂದರು.ಜಿಂದಾಲ್ ಅಧಿಕಾರಿಗಳು ಎರಡು ಮಶೀನ್‍ಗಳನ್ನು ಒದಗಿಸುವುದಕ್ಕೆ ಸಭೆಯಲ್ಲಿ ಸಮ್ಮತಿ ವ್ಯಕ್ತಪಡಿಸಿದರು.
22781 ಜನರಿಗೆ ಜ್ವರ ತಪಾಸಣೆ: ಜಿಲ್ಲೆಯಲ್ಲಿ ಐಎಲ್‍ಐ ಹಾಗೂ ಇನ್ನೀತರ ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷದ ಮೇಲ್ಪಟ್ಟವರನ್ನು ತಕ್ಷಣ ಫೀವರ್ ಕ್ಲಿನಿಕ್‍ಗಳಿಗೆ ಬಂದು ತಪಾಸಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಸಚಿವ ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಜನರಲ್ಲಿ ಕೋವಿಡ್ ಬಗ್ಗೆ ಅನಗತ್ಯ ಭಯ ಮತ್ತು ಆತಂಕ ಹೋಗಲಾಡಿಸಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಎಂದು ಅವರು ಸಲಹೆ ನೀಡಿದರು.ಬಳ್ಳಾರಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 16 ಜ್ವರ ತಪಾಸಣೆ ಕೇಂದ್ರಗಳಲ್ಲಿ 22781 ಜನರು ತಪಾಸಣೆ ಮಾಡಿಕೊಂಡಿದ್ದು,ಅವರಲ್ಲಿ 5968 ಜನರ ಮೂಗು ಮತ್ತು ಗಂಟಲು ದ್ರವ್ಯವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಸಭೆಗೆ ಪ್ರಭಾರಿ ಡಿಎಚ್‍ಒ ಡಾ.ಅನಿಲಕುಮಾರ್ ಅವರು ಸಭೆಗೆ ವಿವರಿಸಿದರು.
ಜಿಲ್ಲೆಯಲ್ಲಿ 27119 ಐಎಲ್‍ಐ ಪ್ರಕರಣಗಳಿದ್ದು,ಅವರಲ್ಲಿ 2597 ಜನರನ್ನು ಪರೀಕ್ಷಿಸಲಾಗಿದ್ದು,2519 ಜನರ ವರದಿ ನೆಗೆಟಿವ್ ಬಂದಿದ್ದು,09 ಜನರಿಗೆ ಪಾಸಿಟಿವ್ ಬಂದಿದೆ;ಇನ್ನೂ 46 ಜನರ ವರದಿ ಬರಬೇಕಿದೆ.ಬಳ್ಳಾರಿ ಜಿಲ್ಲೆಯಲ್ಲಿ 331 ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವನ್ನು ಗುರುತಿಸಿ ಅವರಲ್ಲಿ 328 ಜನರಿಗೆ ಪರೀಕ್ಷಿಸಲಾಗಿತ್ತು. 320 ಜನರಿಗೆ ನೆಗೆಟಿವ್ 04 ಜನರಿಗೆ ಪಾಸಿಟಿವ್ ಮತ್ತು ಇನ್ನೂ 4 ಜನರ ವರದಿ ಬರಬೇಕಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.
ಜನರ ಜೀವನದ ಜತೆ ಚೆಲ್ಲಾಟವಾಡುವುದು ಬಿಡಿ: ಸರಕಾರದ ಮಾರ್ಗಸೂಚಿಯಂತೆ ತಮ್ಮ ಜಿಂದಾಲ್ ಕಾರ್ಯನಿರ್ವಹಿಸಲಿ ನಮಗೆ ಅಭ್ಯಂತರವಿಲ್ಲ; ಆದರೇ ಈ ಕೋವಿಡ್ ಹೊತ್ತಿನಲ್ಲಿಯೂ ಜಿಂದಾಲ್ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಜಿಲ್ಲೆಯ ಜನರು ಆರೋಪಿಸುತ್ತಿದ್ದು, ಅದನ್ನು ಮಾಡಬೇಡಿ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಜಿಂದಾಲ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದಕ್ಕುತ್ತರಿಸಿದ ಜಿಂದಾಲ್ ಅಧಿಕಾರಿಗಳು ನಮ್ಮ ಕಾರಖಾನೆಯಲ್ಲಿ ಕೋವಿಡ್ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಓರ್ವ ವ್ಯಕ್ತಿಯ ನಿರ್ಲಕ್ಷ್ಯತನದಿಂದ ಈ ಸಮಸ್ಯೆ ಉಂಟಾಗಿದ್ದು, ಈಗಲೂ ಕೂಡ ಜಿಲ್ಲಾಡಳಿತದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಮತ್ತು ಸಿಬ್ಬಂದಿಯನ್ನು ಶೇ.60ರಷ್ಟು ಕಡಿತ ಮಾಡಲಾಗಿದೆ ಎಂದು ವಿವರಿಸಿದರು.
ಜಿಂದಾಲ್‍ನಲ್ಲಿ ಇದುವರೆಗೆ 95 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅವರ ಪ್ರಥಮ ಮತ್ತು ದ್ವಿತೀಯ 420 ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರಿಸಲಾಗಿದೆ. ತೋರಣಗಲ್ಲುವಿನ ಸಂಜೀವಿನಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಜೂ.13ರಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸಿದರು.
ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಗತ್ಯಕ್ರಮಕೈಗೊಳ್ಳಿ;ಜಾಗೃತಿ ಮೂಡಿಸಿ: ಜಿಂದಾಲ್‍ನಲ್ಲಿ ದಿನೇದಿನೇ ಕೋವಿಡ್ ಸೊಂಕು ಹರಡುತ್ತಿರುವುದರಿಂದ ಈ ಕಾರಖಾನೆಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಅನೇಕರಿಗೆ ಕೊರೊನಾ ಸೊಂಕು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ತೋರಣಗಲ್ಲುವಿನ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಗತ್ಯಕ್ರಮಕೈಗೊಳ್ಳಬೇಕು ಮತ್ತು ಜನರಲ್ಲಿ ಮನೆ ಮಾಡಿರುವ ಆತಂಕ,ಭಯವನ್ನು ಹೊಗಲಾಡಿಸಬೇಕು ಮತ್ತು ಜನಜಾಗೃತಿ ಮೂಡಿಸಬೇಕು ಎಂದು ಶಾಸಕ ಈ.ತುಕಾರಾಂ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ನಕುಲ್ ಅವರು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಜನಜಾಗೃತಿ ಮೂಡಿಸಲಾಗುವುದು ಎಂದರು.ಕ್ವಾರಂಟೈನ್ ವಾಚ್ ಆ್ಯಪ್ ಮತ್ತು ಹೆಲ್ತ್ ವಾಚ್ ಆ್ಯಪ್‍ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವ ಸುಧಾಕರ್ ಅವರು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರ ರೆಡ್ಡಿ,ಸೋಮಲಿಂಗಪ್ಪ, ಈ.ತುಕಾರಾಂ, ಜಿಪಂ ಸಿಇಒ ಕೆ.ನಿತೀಶ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ