ತುಮಕೂರು:
ವರದಿ -ಸಾ.ಚಿ.ರಾಜಕುಮಾರ
ಲೋಕಸಭಾ ಚುನಾವಣೆಯ ಸಂದರ್ಭ ಈ ಬಾರಿ ಹೆಚ್ಚು ಚರ್ಚೆಗೆ ಬಂದದ್ದು ನೀರಿನ ವಿಷಯ. ಕಳೆದ ಮೂರು ವರ್ಷಗಳಿಂದ ಸತತ ಬರಗಾಲ ಎದುರಾಗಿದ್ದು, ಜಿಲ್ಲೆ ನೀರಿನ ಸಂಕಷ್ಟ ಎದುರಿಸುತ್ತಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೇ ಹೋದರೆ ಈ ವರ್ಷವೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ತುಮಕೂರು ಜಿಲ್ಲೆ ಹೇಮಾವತಿ ನೀರನ್ನು ಹೆಚ್ಚು ಆಶ್ರಯಿಸಿದೆ. ಗೊರೂರು ಜಲಾಶಯದಲ್ಲಿ ನೀರು ಸಂಗ್ರಹವಾದ ಕಾಲದಲ್ಲೂ ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ನೀರು ಇಲ್ಲಿಗೆ ಹರಿಯುತ್ತಿಲ್ಲ ಎಂಬ ಅಪವಾದ ಮತ್ತು ಆರೋಪಗಳು ಕೇಳಿಬರುತ್ತಲೇ ಇವೆ. ಚುನಾವಣೆಯ ಸಂದರ್ಭದಲ್ಲಿ ಈ ವಿಷಯವೇ ಹೆಚ್ಚು ಮುನ್ನಲೆಗೆ ಬಂದಿತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾದವು. ನದಿ ಮೂಲದ ನೀರನ್ನೇ ನಂಬಿಕೊಂಡಿರುವ ಈ ಭಾಗದಲ್ಲಿ ಹೇಮಾವತಿ ನೀರು ಇಲ್ಲದೆ ಹೋದರೆ ಏನೆಲ್ಲಾ ಸಂಕಷ್ಟಗಳು ಎದುರಾಗಬಹುದು ಎಂಬುದನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಜನತೆ ಹತ್ತಿರದಿಂದ ನೋಡಿದೆ.
ನದಿ ಮೂಲದ ನೀರು ಹೊರತುಪಡಿಸಿ ಇತರೆ ಮೂಲಗಳ ಬಗ್ಗೆಯೂ ಚರ್ಚೆಯಾಗಬೇಕು. ಸಮರ್ಪಕವಾಗಿ ಮಳೆ ಬಾರದೇ ಹೋದಾಗ, ಸತತವಾಗಿ ವರುಣನ ಅವಕೃಪೆಗೆ ಒಳಗಾದಾಗ ಏನು ಮಾಡಬೇಕೆಂಬ ದೂರದೃಷ್ಟಿಯ ಚಿಂತನೆಗಳು ರಾಜಕಾರಣಿಗಳಿಂದ ಹಿಡಿದು ಅಧಿಕಾರಿಗಳವರೆಗೆ ಮೂಡಬೇಕು ಎಂಬುದು ಪರಿಸರಾಸಕ್ತರು ಮತ್ತು ರೈತ ಹೋರಾಟಗಾರರಲ್ಲಿ ಕೇಳಿಬರುವ ಮಾತು. ಈಗಾಗಲೇ ಸರ್ಕಾರದ ಮಟ್ಟದಲ್ಲಿ ಇಂತಹ ಹಲವು ಯೋಜನೆಗಳು ರೂಪುಗೊಂಡಿವೆ. ಕೆರೆಕಟ್ಟೆಗಳನ್ನು ಸಂರಕ್ಷಿಸುವ, ಅಂತರ್ಜಲ ವೃದ್ಧಿಸುವ ಯೋಜನೆಗಳಿಗೆ ನಮ್ಮಲ್ಲಿ ಬರವಿಲ್ಲ. ಸಾಕಷ್ಟು ಯೋಜನೆಗಳು ರೂಪುಗೊಳ್ಳುತ್ತಾ ಬಂದಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ರಾಜಕಾರಣಿಗಳ ನಿರಾಸಕ್ತಿಯಿಂದಾಗಿ ಇಂತಹ ಯೋಜನೆಗಳೆಲ್ಲಾ ಹಳ್ಳ ಹಿಡಿಯುತ್ತಿವೆ.
ಕೆಲವು ಸಂದರ್ಭಗಳಲ್ಲಿ ಉತ್ತಮ ಮಳೆಯಾಗಿ ಕೆರಕಟ್ಟೆಗಳು ಭರ್ತಿಯಾಗಿರುವ ಉದಾಹರಣೆಗಳುಂಟು. ಸಣ್ಣಪುಟ್ಟ ಕೆರೆಗಳು ಕೊಚ್ಚಿ ಹೋಗಿರುವ, ಏರಿಗಳು ಹಾಳಾಗಿರುವ ನಿದರ್ಶನಗಳು ಸಾಕಷ್ಟಿವೆ. ಮಳೆಗಾಲದ ಅವಧಿಯಲ್ಲಿ ಇಂತಹ ಪ್ರಸಂಗಗಳು ಎದುರಾಗುತ್ತವೆ. ಬೇಸಿಗೆ ಕಾಲದ ಅವಧಿಯಲ್ಲಿ ಕೆರೆಕಟ್ಟೆಗಳು ಒಣಗಿದಾಗ ಅದರ ಹೂಳು ಎತ್ತುವ ಕಾಮಗಾರಿಗಳು ನಡೆದರೆ ಮಳೆ ನೀರನ್ನು ಯಥೇಚ್ಛವಾಗಿ ಸಂಗ್ರಹಿಸಬಹುದು ಎಂಬ ಸಲಹೆಗಳಿಗೆ ಪೂರಕವಾಗಿ ಈ ಯೋಜನೆಗಳನ್ನು ಸರ್ಕಾರ ರೂಪಿಸಿದೆ.
ಜಲಮೂಲ ಭದ್ರಪಡಿಸುವ, ನೀರಿನ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ ಸಂಜೀವಿನಿ ಯೋಜನೆ, ಚೆಕ್ ಡ್ಯಾಂ ಮೊದಲಾದ ಯೋಜನೆಗಳಿವೆ. ಜಲಾನಯನ ಇಲಾಖೆ ಮೂಲಕ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುತ್ತದೆ. ನರೇಗಾ ಯೋಜನೆಯಡಿ ಇದಕ್ಕಾಗಿ ಅನುದಾನ ಬಳಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ವರ್ಷ ನೂತನ ಜಲಾಮೃತ ಯೋಜನೆಯೂ ಸೇರಿಕೊಂಡಿದೆ. ಇಷ್ಟೆಲ್ಲಾ ಯೋಜನೆಗಳಿದ್ದರೂ ಅನುಷ್ಠಾನ ಮಾತ್ರ ಸಮರ್ಪಕವಾಗಿಲ್ಲ.
ಯೋಜನೆಗಳೆಲ್ಲಾ ಹಳ್ಳ ಹಿಡಿಯುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ಇಂತಹ ಯೋಜನೆಗಳ ಹೆಸರು ಕೇಳಿದರೆ ನಮಗೆ ಗೊತ್ತೇ ಇಲ್ಲ ಎಂಬ ಉತ್ತರಗಳೇ ಸಿಗುತ್ತವೆ. ಹಾಗಾದರೆ ಈ ಯೋಜನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಇಲಾಖೆಗಳು ಮಾಡುತ್ತಿರುವುದಾದರೂ
ಏನು? ವೈಫಲ್ಯಗಳು ಆಗಿರುವುದಾದರೂ ಎಲ್ಲಿ?
ಕೆರೆ ಸಂಜೀವಿನಿ ಯೋಜನೆ: ಸತತವಾಗಿ ಎದುರಾಗುತ್ತಿರುವ ಬರಗಾಲವನ್ನು ಮನಗಂಡ ಸರ್ಕಾರ 2016ನೇ ಇಸವಿಯಲ್ಲಿ ಕೆರೆ ಸಂಜೀವಿನಿ ಯೋಜನೆ ಜಾರಿಗೆ ತಂದಿತು. ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಬೇಸಿಗೆಯ ದಿನಗಳಲ್ಲಿ ಕೆರೆಗಳಲ್ಲಿರುವ ಹೂಳು ಎತ್ತಿ ರೈತರ ಕೃಷಿ ಭೂಮಿಗೆ ಆ ಮಣ್ಣು ಅನುಕೂಲವಾಗುವಂತೆ ಈ ಯೋಜನೆ ರೂಪಿಸಲಾಗಿದೆ.
ಕೆರೆಯಿಂದ ತೆಗೆಯಲಾಗುವ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಸಾಗಿಸಿಕೊಳ್ಳಲು ಅವಕಾಶವಿದೆ. ತಾಲ್ಲೂಕುವಾರು ಇರುವ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‍ಗಳನ್ನು ಈ ಯೋಜನೆಯಡಿ ನಿಯೋಜಿಸಲಾಗಿದೆ. 2016 ರಲ್ಲಿ ಕೆರೆ ಸಂಜೀವಿನಿ ಯೋಜನೆ ಜಾರಿಗೆ ತಂದಾಗ ಸರ್ಕಾರ ಅಧಿಕಾರಿಗಳಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಅದರಂತೆ ಜೂನ್ 15ರ ಒಳಗೆ ಬರಪೀಡಿತ ಎಲ್ಲ ಪ್ರದೇಶದ ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಆದೇಶ ಅದರಲ್ಲಿದೆ.
ಯೋಜನೆ ಜಾರಿಯಾದ ನಂತರ ಮೊದಲ ವರ್ಷ ಅಲ್ಲಲ್ಲಿ ಕಾಮಗಾರಿಗಳು ಆರಂಭಗೊಂಡವಾದರೂ ಕ್ರಮೇಣ ಈ ಯೋಜನೆ ಹಳ್ಳ ಹಿಡಿಯಿತು. ಬದ್ಧತೆ ಇಲ್ಲದ ಅಧಿಕಾರಿಗಳು, ಸ್ಥಳೀಯ ಶಾಸಕರುಗಳ ನಿರಾಸಕ್ತಿ, ಜನರ ಸಹಭಾಗಿತ್ವ ಪಡೆದುಕೊಳ್ಳುವಲ್ಲಿ ಇಲಾಖೆಗಳು ಮುತುವರ್ಜಿ ತೋರದೆ ಇರುವುದು ಇದೆಲ್ಲವುಗಳ ಪರಿಣಾಮ ಈ ಯೋಜನೆ ನೆನೆಗುದಿಗೆ ಬೀಳುವಂತಾಗಿದೆ. ಅಧಿಕಾರಿಗಳು ಕಾಳಜಿ ವಹಿಸಿದ್ದರೆ, ಸ್ಥಳೀಯ ಶಾಸಕರು ಅಧಿಕಾರಿಗಳ ಹಿಂದೆ ಬಿದ್ದಿದ್ದರೆ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆ ಅರ್ಥಪೂರ್ಣವಾಗಿ ಜಾರಿಯಾಗುತ್ತಿತ್ತು. ಜಿಲ್ಲೆಯ ಪ್ರಮುಖ ಕೆರೆಕಟ್ಟೆಗಳು ನವೀಕರಣಗೊಂಡು ಹೆಚ್ಚು ನೀರು ಸಂಗ್ರಹಿಸುವ ತಾಣಗಳಾಗುತ್ತಿದ್ದವು. ಆ ಮೂಲಕ ಸುತ್ತಮುತ್ತಲ ಜಲವರ್ಗ ಹೆಚ್ಚುತ್ತಿತ್ತು. ಆದರೆ ಎಲ್ಲ ಕಡೆಯೂ ನಿರ್ಲಕ್ಷ್ಯವೇ ಕಂಡುಬಂದಿದೆ. ಕೆಲವು ಕಡೆಗಳಲ್ಲಿ ಮಾತ್ರವೇ ಈ ಯೋಜನೆ ಗುರಿ ಸಾಧಿಸಿರುವುದನ್ನು ಬಿಟ್ಟರೆ ಉಳಿದಂತೆ ಕಾಟಾಚಾರದ ಕಾಮಗಾರಿಗಳಾಗಿ ಯೋಜನೆಯ ಹಣ ಅಧಿಕಾರಿಗಳ ಜೇಬು ಸೇರಿದೆ.
-ಮುಂದುವರೆಯಲಿದೆ
ಬೇಸಿಗೆಯ ಜೊತೆ ಸತತ ಬರಗಾಲ ಎದುರಾದ ಹಿನ್ನೆಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಅನೇಕ ಹಳ್ಳಿಗಳಲ್ಲಿ ಖಾಸಗಿ ಬೋರ್‍ವೆಲ್‍ಗಳಿಗೆ ತೆರಳಿ ಕುಡಿಯುವ ನೀರು ತರಲಾಗುತ್ತಿದೆ. ಕೆಲವು ಕಡೆ ಸಾವಿರಕ್ಕೂ ಹೆಚ್ಚು ಆಳ ತೋಡಿದರೂ ಬೋರ್‍ವೆಲ್‍ಗಳಲ್ಲಿ ನೀರು ಸಿಗುತ್ತಿಲ್ಲ. ನದಿಯ ಮೂಲಗಳು ಜಿಲ್ಲೆಗಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪರ್ಯಾಯ ಯೋಜನೆಗಳ ಬಗ್ಗೆ, ಅಂತರ್ಜಲ ವೃದ್ಧಿಯ ಬಗ್ಗೆ ಒತ್ತು ನೀಡುವ ಅಗತ್ಯವಿದೆ. ಬೇಸಿಗೆಯ ದಿನಗಳಲ್ಲಿ ಕೆರೆಕಟ್ಟೆಗಳ ಹೂಳೆತ್ತಿ ಮಳೆಗಾಲದಲ್ಲಿ ನೀರು ಸಂಗ್ರಹಿಸುವ ಯೋಜನೆಗಳು ಹೆಚ್ಚು ಕ್ರಿಯಾಶೀಲವಾಗಬೇಕು. ಈಗಾಗಲೇ ಇದಕ್ಕಾಗಿರುವ ಯೋಜನೆಗಳನ್ನು ಕ್ರಿಯಾಶೀಲಗೊಳಿಸಬೇಕು. ಅಧಿಕಾರಿಗಳ ಚುರುಕು ಮುಟ್ಟಿಸುವ ಕೆಲಸ ಆಗದಿದ್ದರೆ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುವುದರಲ್ಲಿ ಅನುಮಾನವಿಲ್ಲ.