ಭಕ್ತರ ಸೋಗಿನಲ್ಲಿ ಕದಿಯುತ್ತಿದ್ದವರ ಬಂಧನ..!!

ಬೆಂಗಳೂರು

   ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿನ ಹಣ ಅಂದಾಜು ಮಾಡಿ ಕಳವು ಮಾಡುತ್ತಿದ್ದ ಆರು ಮಂದಿ ಅಲೆಮಾರಿಗಳ ಗ್ಯಾಂಗ್‍ನ್ನು ಬಂಧಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮೈಸೂರು ಮೂಲದ ಕಬ್ಬಾಳು ಅಲಿಯಾಸ್ ಚಂದು (26), ಕುಮಾರ್ ಅಲಿಯಾಸ್ ಬಜಾಕ್ (26), ಮಂಜ (27), ವಿಜಯ್ ಕುಮಾರ್ ಅಲಿಯಾಸ್ ಜೋಗಿ (25), ಬಸವ ಅಲಿಯಾಸ್ ಹರೀಶ್ (37), ಪಿಚ್ಚಗುನ್ನ (25) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಗ್ಯಾಂಗ್‍ನಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.50 ಲಕ್ಷ ರೂ. ನಗದು, 3 ಬೈಕ್, 1 ಲಗೇಜ್ ಆಟೋ ಸೇರಿದಂತೆ, 9.50 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

     ಆರೋಪಿಗಳು ನಗರದ ಹೊರವಲಯದ ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದು,ಬೆಳಗಿನ ವೇಳೆ ದೇವಾಲಯಕ್ಕೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿ ಹಣ ಬೀಳುವುದನ್ನು ಅಂದಾಜು ಮಾಡಿ ರಾತ್ರಿ ವೇಳೆ ದೇವಾಲಯಕ್ಕೆ ನುಗ್ಗಿ ಕಳವು ಮಾಡುತ್ತಿದ್ದರು.
ಒಂದೆಡೆ ನೆಲೆಯೂರದ ಈ ಗ್ಯಾಂಗ್, ಒಂದೂರಿನಿಂದ ಮತ್ತೊಂದೂರಿಗೆ ಲಗೇಜ್ ಆಟೋದಲ್ಲಿ ಸಾಮಾನುಗಳನ್ನು ಹಾಕಿಕೊಂಡು ಹೋಗಿ ಟೆಂಟ್ ಹಾಕಿಕೊಂಡು ಊರೊಳಗೆ ಅಲೆಮಾರಿಗಳಂತೆ ಓಡಾಡುತ್ತ ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಹೋಗುತ್ತಿದ್ದರು.

     ಅನುಮಾನ ಬರದಂತೆ, ಓಡಾಡುತ್ತಿದ್ದ ಆರೋಪಿಗಳು ಕಳೆದ ಏಪ್ರಿಲ್ 18 ರಂದು ರಾತ್ರಿ ಅಮೃತಹಳ್ಳಿಯ ಮಾರಮ್ಮನ ದೇವಾಲಯಕ್ಕೆ ನುಗ್ಗಿ ಹುಂಡಿ ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿದ ಅಮೃತಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಅರುಣ್ ಕುಮಾರ್, ಮತ್ತವರ ಸಿಬ್ಬಂದಿ, ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

      ಆರೋಪಿಗಳ ಬಂಧನದಿಂದ ದೇವನಹಳ್ಳಿಯ 3, ಚಿಕ್ಕಮಗಳೂರು ಜಿಲ್ಲೆಯ 2, ದಾವಣಗೆರೆಯ 1, ದೇವಾಲಯದ ಹುಂಡಿ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಲ್ಲಿ ಮೂವರು ಹಿಂದೆ ದೇವಾಲಯಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link