ಹೂವಿನಹಡಗಲಿ :
ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ತ್ರಿವಿಧ ದಾಸೋಹಿ ಶತಾಯುಷಿ ಕರ್ನಾಟಕ ರತ್ನ ಪದ್ಮಭೂಷಣ ಸಿದ್ಧಗಂಗಾಮಠದ ಹಿರಿಯ ಶ್ರೀಗಳಾದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಆಂದೋಲನವನ್ನು ಆರಂಭಿಸಿರುವುದಾಗಿ ಜಾದೂ ಮೋಹನಕುಮಾರರವರು ಹೇಳಿದರು.
ಅವರು ಪಟ್ಟಣದ ಗವಿಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಆಂದೋಲನದ ಗೌರವಾಧ್ಯಕ್ಷ ರೇವಣ್ಣ ಬಳ್ಳಾರಿಯವರು ಮಾತನಾಡಿ ಶ್ರೀಗಳು ತಮಿಳುನಾಡು ಅಥವಾ ಆಂಧ್ರ ಪ್ರದೇಶದಲ್ಲಿ ಮಠ ಸ್ಥಾಪಿಸಿದ್ದರೆ ಈ ಹೊತ್ತಿಗಾಗಲೇ ಭಾರತರತ್ನ ಪ್ರಶಸ್ತಿ ಬಂದಿರುತ್ತಿತ್ತು. ಕನ್ನಡಿಗರಾದ ನಮ್ಮ ದೌಭಾಗ್ಯವೆಂದರೆ ಇಂತಹ ಒಬ್ಬ ಮಹಾನ್ ಶ್ರೀಗಳಿಗೆ ಪ್ರಶಸ್ತಿಯನ್ನು ನೀಡಿ ಎಂದು ಒತ್ತಾಯಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆಶೀರ್ವಚನ ನೀಡಿ ಮಾತನಾಡಿದ ಗವಿಮಠದ ಡಾ. ಹಿರಿಶಾಂತವೀರ ಶ್ರೀಗಳು ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ, ಭಾರತರತ್ನ ಪ್ರಶಸ್ತಿಯನ್ನು ನೀಡುವುದು ಅತ್ಯಂತ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸ್ವಾಮೀಜಿಗಳಿಗೆ ಪ್ರಶಸ್ತಿ ಪುರಸ್ಕಾರಗಳ ಅಗತ್ಯವಿರುವುದಿಲ್ಲ, ಆದರೆ ಭಕ್ತರ ಆಪೇಕ್ಷೆಯನ್ನು ನಿರಾಕರಿಸುವಂತಿಲ್ಲ ಎಂದ ಅವರು, ಸರ್ವಧರ್ಮವೇದಿಕೆ ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ, ವೀರಶೈವ ಧರ್ಮ ಎಂದರೆ ಸರ್ವಧರ್ಮಗಳ ಸಂಗಮವಾಗಿದ್ದು, ಶ್ರೀಗಳು ಅಂತಹ ಕಾಯಕದಲ್ಲಿ ತೊಡಗಿಕೊಂಡಿರುವುದರಿಂದ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಸರ್ವಧರ್ಮ ವೇದಿಕೆಯ ಜಿಲ್ಲಾಧ್ಯಕ್ಷರನ್ನಾಗಿ ಹೊಸದಿಗಂತ ಪತ್ರಿಕೆಯ ಹೊಳಲು ವರದಿಗಾರರಾದ ಸುಭಾಶ್ಚಂದ್ರ ಹಾವೇರಿ ಇವರನ್ನು ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಹಡಗಲಿ ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಎಂ.ನಿಂಗಪ್ಪ ಇವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದರು.
ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಶಂಕ್ರಪ್ಪ ಪುಟ್ಟಪ್ಪ ತಂಬೂರಿ, ಸಹಕಾರ್ಯದರ್ಶಿ ಆಸ್ಲಾಂಭಾಷ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
