ತುಮಕೂರು
ವಿಶೇಷ ವರದಿ:- ರಾಕೇಶ್.ವಿ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡುವ ಭೀಮಸಂದ್ರ ಹಳೇ ಗ್ರಾಮವು ಮಹಾನಗರ ಪಾಲಿಕೆಯ 6ನೇ ವಾರ್ಡ್‍ಗೆ ಸೇರುತ್ತದೆ. ಈ ಗ್ರಾಮವು ಒಂದು ಕಡೆ ಅಭಿವೃದ್ಧಿಯಾಗುತ್ತಿದೆಯಾದರೂ ಇನ್ನೊಂದು ಕಡೆ ಅನೇಕ ಸಮಸ್ಯೆಗಳ ಆಗರವಾಗಿ ಪರಿಣಮಿಸುತ್ತಿದೆ.
ತುಮಕೂರು ನಗರದಿಂದ 5-6 ಕಿಮೀ ದೂರದಲ್ಲಿರುವ ಈ ಗ್ರಾಮವು ಈ ಮುಂಚೆ ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ತದನಂತರ ಅದನ್ನು ತುಮಕೂರು ಮಹಾನಗರ ಪಾಲಿಕೆ ಸೇರ್ಪಡಿಸಲಾಯಿತು. ಈ ಗ್ರಾಮವು 6ನೇ ವಾರ್ಡ್‍ನ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಮತ್ತೆಂದು ಪಾಲಿಕೆ ಸದಸ್ಯರಾಗಲಿ, ಅಧಿಕಾರಿ ವರ್ಗದವರಾಗಲಿ ಇತ್ತ ಮುಖಮಾಡುವುದೇ ಇಲ್ಲ ಎಂಬಂತಾಗಿದೆ.
ಈ ಪ್ರದೇಶದಲ್ಲಿ ಕೇವಲ ಮೂಲಭೂತ ಸೌಲಭ್ಯಗಳು ಸರಿಯಿಲ್ಲ ಎಂಬ ಆರೋಪಗಳನ್ನು ಕೇಳಿದ್ದೆವು. ಆದರೆ ನಿಜವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲಿನ ಸಮಸ್ಯೆಗಳು ಏನೆಂಬುದು ಅರಿವಾಗುತ್ತದೆ. ಹೌದು, ಭೀಮಸಂದ್ರದ ಮುಖ್ಯರಸ್ತೆಯಿಂದ ಹಳೇ ಭೀಮಸಂದ್ರ ಒಳಗಡೆ ಹೋಗಬೇಕಾದರೆ ಈ ಮುಂಚೆ ರೈಲ್ವೇ ಹಳಿ ಬಳಿ, ಇದ್ದಂತಹ ರಸ್ತೆಯನ್ನೀಗ ಮುಚ್ಚಲಾಗಿ ಅಂಡರ್‍ಪಾಸ್ ನವೀಕರಣ ಮಾಡಲಾಗಿದೆ. ಈ ಮುಂಚೆ ಈ ಅಂಡರ್‍ಪಾಸ್‍ನಲ್ಲಿ ಕಸ, ಧೂಳು ತುಂಬಿಕೊಂಡು ಯಾವುದೇ ಬೆಳಕಿನ ಸೌಲಭ್ಯವಿಲ್ಲದೆ ಓಡಾಡಲು ಆಗದಂತ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ಪ್ರತಿಭಟನೆಗಳನ್ನು ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ, ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ನಡೆದ ಕೆಲವು ಕಾಮಗಾರಿಗಳು ಕಳಪೆಯಿಂದ ಕೂಡಿರುವುದು ಪ್ರಮುಖವಾಗಿ ಕಂಡು ಬರುತ್ತಿದೆ. ಈ ಮುಂಚೆ ಇದ್ದಂತಹ ಅಂಡರ್‍ಪಾಸ್‍ನಲ್ಲಿ ಮಳೆ ನೀರು ನಿಂತುಕೊಳ್ಳುತ್ತಿತ್ತು. ಮಳೆಗಾಲದಲ್ಲಿ ಜೋರಾದ ಮಳೆ ಬಂದರಂತೂ ಯಾವುದೇ ವಾಹನಗಳು ಅತ್ತ ಕಡೆಯಿಂದ ಮುಖ್ಯರಸ್ತೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ.
ಅಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಈ ಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವರಿಕೆ ಮಾಡಲಾಗಿ ಕೊನೆಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ನವೀಕರಣಗೊಂಡಿದ್ದು ಸದ್ಯ ಜನರಿಗೆ ಓಡಾಡಲು ಅನುಕೂಲವಾಗಿದೆ.
ಅಂಡರ್‍ಪಾಸ್‍ನಲ್ಲಿ ಹೆಚ್ಚಿದ ಮಣ್ಣು, ಧೂಳು
ಭೀಮಸಂದ್ರ ಹಳೆ ಗ್ರಾಮಕ್ಕೆ ಹೊರಡಲು ಇರುವ ಅಂಡರ್‍ಪಾಸ್‍ನ ಆರಂಭದಲ್ಲಿ ಉತ್ತಮವಾದ ರಸ್ತೆ ಕಂಡು ಬರುತ್ತದೆ. ಮುಂದೆ ಹೋದಂತೆ ಸಿಸಿ ರಸ್ತೆ ಇದ್ದು, ಅದರ ತುಂಬೆಲ್ಲಾ ಮಣ್ಣು ಸೇರಿಕೊಂಡಿದೆ. ಯಾವುದಾದರೂ ಟಿಟಿ ವಾಹನ, ಟೆಂಪೋ ಒಮ್ಮೆ ಚಲಿಸಿದರೆ ಅದರ ಹಿಂದೆ ಬರುವ ವಾಹನ ಸವಾರರಿಗೆ ರಸ್ತೆ ಕಾಣುವುದೇ ಇಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಉರಿದು ಉರಿಯದಂತಿರುವ ವಿದ್ಯುತ್ ದೀಪಗಳು
ರೈಲ್ವೇ ಕೆಳ ಸೇತುವೆಯ ಅಕ್ಕಪಕ್ಕದಲ್ಲಿ ಬೆಳಕಿನ ಸೌಲಭ್ಯಕ್ಕಾಗಿ ದೀಪಗಳನ್ನು ಇರಿಸಲಾಗಿದೆ. ಇವುಗಳಲ್ಲಿ ಕೆಲವು ಉರಿದರೆ ಇನ್ನೂ ಕೆಲವು ಮಂಕಾಗಿರುತ್ತವೆ. ಒಂದಕ್ಕೊಂದು ಮುನಿಸಿಕೊಂಡಂತೆ ನಾಲ್ಕೈದು ದೀಪಗಳು ಉರಿದರೆ ಉಳಿದ ಕೆಲ ದೀಪಗಳು ಉರಿಯದೇ ಪಾಳು ಬಿದ್ದಂತಿವೆ. ನೋಡುವುದಕ್ಕೆ ಮಾತ್ರ ಅಂದಚೆಂದವಾಗಿ ಕಾಣುವ ಈ ದೀಪಗಳು ಉರಿಯದಿದ್ದರೆ ಇದ್ದೂ ವ್ಯರ್ಥ ಎಂಬುದು ಸ್ಥಳೀಯರ ಮಾತುಗಳಾಗಿವೆ.
ಬೃಹತ್ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ
ಅಂಡರ್‍ಪಾಸ್‍ನಲ್ಲಿ ನಿರ್ದಿಷ್ಠ ಅಳತೆಯ ಎತ್ತರವಿದ್ದು, ಸಣ್ಣ ಪುಟ್ಟ ವಾಹನಗಳನ್ನು ಹೊರತು ಪಡಿಸಿದರೆ ಬೃಹತ್ ಗಾತ್ರದ ವಾಹನಗಳು ಬರಲು ಅವಕಾಶವಿಲ್ಲವಾಗಿದೆ. ಇರುವಂತಹ ಅಂಡರ್‍ಪಾಸ್‍ನಲ್ಲಿ ಬೃಹತ್ ವಾಹನಗಳು ಒಳ ಪ್ರವೇಶಿಸಿ ತಿರುವು ಪಡೆದುಕೊಳ್ಳಲು ಸ್ಥಳದ ಅಭಾವ ಹೆಚ್ಚಿದೆ. ಹೀಗಾಗಿ ಈ ರಸ್ತೆಯಲ್ಲಿ ಬೃಹತ್ ವಾಹನಗಳು ಓಡಾಡಲು ಆಗುತ್ತಿಲ್ಲ.
ಅಂಡರ್‍ಪಾಸ್ ಸ್ಥಳಾಂತರಕ್ಕೆ ಒತ್ತಾಯ
ಸದ್ಯ ಇರುವ ಅಂಡರ್‍ಪಾಸ್ ಮುನ್ನೂರು ಮೀಟರ್ ಉದ್ದವಿದ್ದು, ಎರಡು ಕಡೆಗಳಿಂದಲೂ ಸುತ್ತುವರೆದುಕೊಂಡು ಬರಬೇಕಾದ ಸ್ಥಿತಿ ಇದ್ದು, ಕತ್ತಲೆಯಾಗುತ್ತಿದ್ದಂತೆಯೇ ಮಹಿಳೆಯರು ಒಂಟಿಯಾಗಿ ಓಡಾಡಲು ಆಗುವುದಿಲ್ಲ. ಹಿರಿಯರು ನಡೆದುಕೊಂಡು ಓಡಾಡಬೇಕು.
ರೈಲ್ವೇ ಗೇಟ್ ಬಂದ್ ಮಾಡಲಾಗಿದ್ದು, ಅಂಡರ್‍ಪಾಸ್ ಮೂಲಕವೇ ಓಡಾಡಬೇಕು. ವಾಹನಗಳಿದ್ದವರು ಬಂದು ಬಿಡುತ್ತಾರೆ. ವಾಹನ ಇಲ್ಲದವರು ಸ್ಥಿತಿ ಏನು ಎಂಬುದು ಹಿರಿಯರ ಪ್ರಶ್ನೆಯಾಗಿದೆ. ಅಲ್ಲದೆ ಶಾಲೆಗೆ ತೆರಳುವ ಸಣ್ಣ ಮಕ್ಕಳು ಕೂಡ ಅಂಡರ್‍ಪಾಸ್‍ನ ಮೂಲಕವೇ ಬರಬೇಕಾಗಿದೆ. ಒಂದು ವೇಳೆ ರೈಲ್ವೇ ಹಳಿಗಳ ಮೇಲೆಯೇ ಹೋಗುತ್ತೇವೆ ಎಂದರೆ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಹಾಗಾಗಿ ಮೊದಲು ಇದ್ದಂತಹ ದಾರಿಯಲ್ಲಿಯೇ ಅಂಡರ್‍ಪಾಸ್ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂಬುದು ಹಲವರ ಒತ್ತಾಯವಾಗಿದೆ.
ಕೆರೆಯಿಂದ ದುರ್ವಾಸನೆ
ಭೀಮಸಂದ್ರ ಕೆರೆಯು ದುರ್ವಾಸನೆ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡಬೇಕು. ಈ ಹಿಂದೆ ತಿಳಿನೀರಿನಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸುತ್ತಿದ್ದ ಈ ಕೆರೆಯು ಇಂದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಕೆರೆಗೆ ಕುಡಿಯುವ ನೀರಿನ ಬದಲಾಗಿ ಕೊಳಚೆ ನೀರು ತುಂಬಿಕೊಳ್ಳುತ್ತಿದೆ. ತುಮಕೂರು ನಗರ ಭಾಗದಿಂದ ಬರುವ ಚರಂಡಿ ನೀರು, ತ್ಯಾಜ್ಯ ಭೀಮಸಂದ್ರ ಕೆರೆಗೆ ತುಂಬಿಕೊಳ್ಳುತ್ತಿದೆ. ಇದರಿಂದ ಕೆರೆಯ ಅಕ್ಕಪಕ್ಕದ ಜನರಿಗೆ ನಿತ್ಯ ನರಕದಲ್ಲಿ ವಾಸ ಮಾಡುತ್ತಿರುವಂತಿದೆ.
ಸ್ವಚ್ಛವಾಗದ ನೀರು
ಚರಂಡಿ ನೀರು ಸ್ವಚ್ಛ ಮಾಡಲೆಂದು ಫಿಲ್ಟರ್ ಸೌಕರ್ಯ ಮಾಡಲಾಗಿದೆ. ಇಲ್ಲಿ ನೀರನ್ನು ಶುಚಿಗೊಳಿಸಲು ಅಳವಡಿಸಲಾದ ಫ್ಯಾನುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದ್ದಂತಹ ಫ್ಯಾನುಗಳು ಅರ್ಧದಷ್ಟು ಕೆಟ್ಟು ನಿಂತಿವೆ. ಇದರಿಂದ ನೀರು ಶುಚಿಗೊಳ್ಳದೆ ಹಾಗೆಯೇ ಕೆರೆಯತ್ತ ಮುಖಮಾಡಿವೆ. ಇದರಿಂದ ಕೆರೆಯ ತುಂಬಾ ಕೊಳಚೆ ನೀರು ತುಂಬಿಕೊಂಡು ಬಳಕೆಗೆ ಅನುಕೂಲವಾಗಂದತೆ ಆಗಿದೆ.
ವಿರುಪಾಕ್ಷ, ಭೀಮಸಂದ್ರ ನಿವಾಸಿ
ಕೆರೆಗೆ ಚರಂಡಿ ನೀರು ಹರಿಯುತ್ತಿದೆ. ಅದನ್ನು ಪರಿಷ್ಕರಿಸಲೆಂದು ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿದರು. ಆದರೆ ಅಲ್ಲಿರುವ ನೀರು ಸಂಸ್ಕರಣಾ ಫ್ಯಾನುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಚರಂಡಿ ನೀರು ಕೆರೆಗೆ ಸೇರಿ ಬಳಕೆಗೆ ಬಾರದಂತಿದೆ.
ಪರಮೇಶ್, ಭೀಮಸಂದ್ರ
ಕಳೆದ 15 ವರ್ಷಗಳಿಂದಲೂ ಕೆರೆಗೆ ಚರಂಡಿ ನೀರು ಹರಿಯುತ್ತಿದೆ. ಅಲ್ಲದೆ ದುರ್ವಾಸನೆ ಬೀರುತ್ತಿದ್ದು, ಈ ಬಗ್ಗೆ ಹಲವು ಬಾರಿ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದೇ ಸ್ಥಿತಿ ಮುಂದುವರೆದರೆ ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಲು ಕೂಡ ಸಿದ್ದರಿದ್ದೇವೆ.
ಹನುಮಂತರಾಜು, ಭೀಮಸಂದ್ರ ಹಳೇ ಗ್ರಾಮ
ಅಂಡರ್‍ಪಾಸ್ ನಿರ್ಮಾಣದ ಬಗ್ಗೆ ಯಾರಿಗೂ ಮಾಹಿತಿಯಿರಲಿಲ್ಲ. ಏಕಾಏಕಿ ಅಂಡರ್‍ಪಾಸ್ ನಿರ್ಮಾಣ ಮಾಡಿ ಇದ್ದಂತಹ ರಸ್ತೆಯನ್ನು ಬಂದ್ ಮಾಡಲಾಗಿದೆ. ರಾತ್ರಿ ವೇಳೆ ಕೆಲ ದೀಪಗಳು ಉರಿಯುತ್ತವೆ. ಕೆಲವು ಉರಿಯುವುದಿಲ್ಲ. ಇದರಿಂದ ಸರಿಯಾದ ಬೆಳಕಿನ ಸೌಲಭ್ಯ ಇಲ್ಲ. ರಾತ್ರಿ ವೇಳೆ ಒಬ್ಬಂಟಿಗರಾಗಿ ಓಡಾಡಲು ಆಗುವುದೇ ಇಲ್ಲ. ರೈಲ್ವೇ ಅಧಿಕಾರಿಗಳು ಹಳೆಯ ಮಾರ್ಗವನ್ನೇ ಸರಿಮಾಡಿ ಅನುಕೂಲ ಮಾಡಿಕೊಡಲಿ.