ದಾವಣಗೆರೆ :
ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ಸಖಿ ಒನ್ಸ್ ಸ್ಟಾಪ್ ಸೆಂಟರ್‍ನ ಕಟ್ಟಡಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಎಸ್.ಎ.ರವೀಂದ್ರನಾಥ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ 45 ಲಕ್ಷ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಸಖೀ ಒನ್ಸ್‍ಸ್ಟಾಪ್ ಸೆಂಟರ್ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಕೇಂದ್ರ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಈ ಸೆಂಟರ್‍ನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ 21 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಗೊಂಡಿದೆ. ಕೇಂದ್ರ ಸರ್ಕಾರವೇ ಕಟ್ಟಡಕ್ಕೆ ನಕ್ಷೆ ತಯಾರಿಸಿದ್ದು, ತಕ್ಷಣವೇ ಕಟ್ಟಡ ಕಾರ್ಯವನ್ನು ನಿರ್ಮಿತಿ ಕೇಂದ್ರ ಆರಂಭಿಸಿ ನಾಲ್ಕು ತಿಂಗಳಲ್ಲಿ ಮುಕ್ತಾಯಗೊಳಿಸಲಿದೆ ಎಂದರು.
ಮಹಿಳೆ ಮೇಲೆ ಅತ್ಯಾಚಾರ, ಬಾಲಕಿಯರ ಫೋಕ್ಸೋ ಕಾಯ್ದೆಗೆ ಸಂಭಂಸಿದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೇಳೆ ಸಾರ್ವಜನಿಕರಿಗೆ ಮಾಹಿತಿ ಗೊತ್ತಾಗಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ, ಈಗ ಇಂತಹ ಪ್ರಕರಣಗಳು ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ಸಖಿ ಒನ್ಸ್ ಸ್ಟಾಪ್ ಸೆಂಟರ್ ತೆರೆಯಲಾಗುತ್ತಿದೆ.
ನೊಂದ ಮಹಿಳೆ, ಬಾಲಕಿಯರಿಗೆ ಚಿಕಿತ್ಸೆ, ಕೌನ್ಸಲಿಂಗ್, ಕಾನೂನು ನೆರವು, ಆರಕ್ಷಕರು ಸೇರಿದಂತೆ ಎಲ್ಲ ಸೌಲಭ್ಯಗಳು ಒಂದೇ ಸೂರಿನಲ್ಲಿ ದೊರೆಯಲಿವೆ ಎಂದು ಅವರು ಮಾಹಿತಿ ನೀಡಿದರು.ಈಗಾಗಲೇ ವಿಶೇಷ ಫೋಕ್ಸೋ ನ್ಯಾಯಾಲಯವು ರಾಜ್ಯದ 10 ಜಿಲ್ಲೆಗಳಲ್ಲಿ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ 19-20ನೇ ಸಾಲಿನಲ್ಲಿ ಕೌಟುಂಬ ಕೋರ್ಟ್‍ನಲ್ಲಿ ವಿಡಿಯೋ ಕಾನ್ಫರೆನ್ಸ್ ಹಾಲ್ ಆಗಲಿದೆ.
ಈ ಸಖಿ ಒನ್ಸ್‍ಸ್ಟಾಪ್ ಸೆಂಟರ್‍ಗೆ ಇಬ್ಬರು ಕೌನ್ಸಿಲರ್‍ಗಳನ್ನು, ಒಬ್ಬ ವಕೀಲರು, ಇಬ್ಬರು ಸಾಮಾಜಿಕ ಕಾರ್ಯಕರ್ತೆಯರು, ಒಂದು ಸಿಬ್ಬಂದಿ, ಓರ್ವ ಪೊಲೀಸ್ ಪೇದೆ, ಓರ್ವ ಕಂಪ್ಯೂಟರ್ ಆಪರೇಟರ್ ಬೆಕಾಗಿದ್ದಾರೆ. ಈಗಾಗಲೇ ಗೆಳತಿ ಚಿಕಿತ್ಸಾ ವಿಶೇಷ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಇಲ್ಲಿಗೆ ಶಿಫ್ಟ್ ಮಾಡಿಕೊಳ್ಳಲಾಗುವುದು ಎಂದರು.
ಈ ವೇಳೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ಪ್ರಾದೇಶಿಕ ವೈದಾಧಿಕಾರಿ ಡಾ.ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೃತಿ ಮತ್ತಿತರರು ಹಾಜರಿದ್ದರು.