ರಸ್ತೆಯಿಂದ ಹೊರ ಚಾಚಿರುವ ಕಬ್ಬಿಣದ ರಾಡುಗಳು ವಾಹನ ಸವಾರರಿಗೆ ಕಿರಿಕಿರಿ, ದುರಸ್ತಿಗೆ ಆಗ್ರಹ

0
11

ದಾವಣಗೆರೆ:

        ನಗರದ ಬಹುತೇಕ ರಸ್ತೆಗಳು ಸಿಮೆಂಟ್ ಕಾಂಕ್ರಿಟ್ ರಸ್ತೆಗಳಾಗಿ ನಿರ್ಮಾಣವಾಗಿವೆ. ಆದರೆ,  ಗುತ್ತಿಗೆದಾರರು ರಸ್ತೆಗಳನ್ನು ಲಿಂಕ್ ಮಾಡದ ಕಾರಣ ರಸ್ತೆ ನಿರ್ಮಾಣಕ್ಕೆ ಉಪಯೋಗಿಸಿರುವ ಕಬ್ಬಿಣ ರಾಡುಗಳು ರಸ್ತೆಯಿಂದ ಹೊರ ಚಾಚಿಕೊಂಡಿವೆ. ಆದ್ದರಿಂದ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದು ಕಿರಿಕಿರಿಯಾಗುತ್ತಿದೆ.

         ಹೌದು… ಇದಕ್ಕೆ ತಾಜಾ ಉದಾಹರಣೆ ಎಂದರೆ, ನಗರದ ಅರಳಿಮರ ವೃತ್ತದಿಂದ ಜಗಳೂರು ರಸ್ತೆಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಕಬ್ಬಿಣ ರಾಡ್‍ಗಳು ರಸ್ತೆಯಿಂದ ಹೊರಗಡೆ ಚಾಚಿಕೊಂಡಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನಗಳನ್ನು ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

        ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಿಸಿ ರಸ್ತೆಗಳೇನೊ ನಿರ್ಮಾಣವಾಗುತ್ತಿವೆ. ಆದರೆ, ರಸ್ತೆ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ರಸ್ತೆ ನಿರ್ಮಾಣ ಮಾಡಿ, ಅವು ಎಲ್ಲಿಂದ ಎಲ್ಲಿಯ ವರೆಗೆ ಗುತ್ತಿಗೆ ಪಡೆದಿರುತ್ತಾರೋ ಅಲ್ಲಿಗೇನೆ ಕೆಲಸ ಬಿಟ್ಟು ಬಿಲ್ ಪಡೆದು ಕೈ ತೊಳೆದುಕೊಳ್ಳುತ್ತಾರೆ. ಹೀಗೆ ತುಂಡು ಗುತ್ತಿಗೆಯಲ್ಲಿ ಕೆಲಸ ಮಾಡಿಸುವ ಗುತ್ತಿಗೆದಾರರು ಮುಂದಿನ ಆ ರಸ್ತೆಗೆ ಲಿಂಕ್ ಮಾಡದೆಯೇ ಹಾಗೆಯೇ ಬಿಡುವುದರಿಂದಲೇ ಈ ಕಬ್ಬಿಣದ ರಾಡ್‍ಗಳು ಹೊರ ಚಾಚಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಬೈಕ್ ಸವಾರ ರೋಹಿತ್ ಜೈನ್.

       ಇದು ಬರೀ ಅರಳಿ ಮರ ವೃತ್ತದ ಕಥೆ ಮಾತ್ರವಲ್ಲ. ಇಂತಹ ದುಸ್ಥಿತಿ ಕೆ.ಆರ್.ರಸ್ತೆ, ಶಿವಾಲಿ ರಸ್ತೆಯಲ್ಲಿನ ರೈಲ್ವೆ ಸೇತುವೆಯ ಕೆಳಗಡೆ, ಬಿ.ಟಿ. ಲೇಔಟ್‍ನ ರಸ್ತೆ ಸೇರಿದಂತೆ ಹಲವೆಡೆ ಕಬ್ಬಿಣದ ರಾಡುಗಳು ಹೊರ ಚಾಚಿಕೊಂಡಿವೆ. ಹೀಗಾಗಿ ಎಷ್ಟೋ ವಾಹನಗಳ ಚಕ್ರಗಳಿಗೆ ಈ ರಾಡುಗಳು ತಾಗಿ ಪಂಕ್ಚರ್ ಆಗಿವೆ. ಅಲ್ಲದೆ, ಅದೆಷ್ಟೋ ಬೈಕ್ ಸವಾರರು ಇಂಥಹ ಕಡೆಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

        ನಗರವನ್ನು ಹಾದು ಹೋಗಿರುವ ಪೂಣಾ-ಬೆಂಗಳರೂ ರಸ್ತೆ ಬಿಟ್ಟರೆ, ಜಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿಯೇ ಹೆಚ್ಚು ಜನ ವಾಹನಗಳು ಓಡಾಡುತ್ತವೆ. ರಸ್ತೆಯಿಂದ ಹೊರಚಾಚಿರುವ ಕಬ್ಬಿಣದ ರಾಡ್‍ಗಳಿಂದ ಹಲವು ಬೈಕ್‍ಗಳು ಪಂಕ್ಚರ್ ಆಗುವ ಕಾರಣಕ್ಕೆ ಬೈಕ್ ಸವಾರರು, ಪಂಕ್ಚರ್ ಆಗಿರುವ ಬೈಕ್‍ಗಳನ್ನು ತಳ್ಳಿಕೊಂಡು ಪಂಕ್ಚರ್ ಅಂಗಡಿಗಳನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹುಡುಕಾಟಕ್ಕೆ ಪದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಂಕ್ಚರ್ ಅಂಗಡಿ ಸಿಗುವ ವರೆಗೂ ಗಾಡಿಗಳನ್ನು ತಳ್ಳಿಕೊಂಡು ಓಡಾಡಬೇಕಾಗಿದೆ. ಹೀಗಾಗಿ ಬೈಕ್ ಸವಾರರು ರಸ್ತೆಯ ದುಸ್ತಿಗೆ ಕಾರಣವಾಗಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

       ಕೃಷಿ ಉತ್ಪನ್ನ ಮಾರುಕಟ್ಟೆಗೆ ಈ ರಸ್ತೆಯಲ್ಲಿಯೇ ಧಾನ್ಯಗಳನ್ನು ಹೊತ್ತು ವಾಹನಗಳು ಸಂಚರಿಸಬೇಕಾಗಿದೆ. ಹೀಗಾಗಿ ಜಗಳೂರು, ಹರಪನಹಳ್ಳಿ ತಾಲೂಕುಗಳಿಂದ ಎಪಿಎಂಸಿಗೆ ಬರುವ ರೈತರು ತಾವು ಬೆಳೆದ ಉತ್ಪನ್ನಗಳನ್ನು ಲಾರಿ, ಟ್ರ್ಯಾಕ್ಟರ್ ಮೂಲಕ ಬರುತ್ತಾರೆ. ಆದರೆ, ಈ ದಾರಿಯಲ್ಲಿ ಬರುವ ವೇಳೆ ಕಬ್ಬಿಣದ ರಾಡ್‍ಗಳು ಚಕ್ರಕ್ಕೆ ಸಿಲುಕಿಕೊಂಡು ಟೈರ್ ಸ್ಫೋಟವಾಗುವ ಭೀತಿಯಲ್ಲಿದ್ದಾರೆ.

      ಇನ್ನೂ ಪಾದಚಾರಿಗಳು ನಡೆದುಕೊಂಡು ಹೋಗುವಾಗ ತಕ್ಕು ಹಿಡಿದಿರುವ ಕಬ್ಬಿಣದ ರಾಡ್‍ಗಳು ಚುಕ್ಕಿಕೊಂಡು ಗಾಯವಾಗಿ ವಿವಿಧ ಸೋಂಕು ಹರಡುವ ಭೀತಿಯಲ್ಲಿಯೂ ಇದ್ದಾರೆ. ಆದರೆ, ಸಂಬಂಧಪಟ್ಟ ಇಲಾಖೆ ಈ ರಸ್ತೆಯನ್ನು ಲಿಂಕ್ ಮಾಡಿಸುವುದು ಹೋಗಲಿ, ಒಂದು ಟ್ರಾಕ್ಟರ್ ಮಣ್ಣು ಹಾಕಿಸಲು ಸಹ ಮುಂದಾಗಿಲ್ಲ. ಆದ್ದರಿಂದ ತಕ್ಷಣವೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಕೊಂಡು ರಸ್ತೆ ಲಿಂಕ್ ಕಲ್ಪಿಸಿ, ರಾಡುಗಳನ್ನು ಮುಚ್ಚಿಸಬೇಕೆಂದು ವಾಹನಸವಾರರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here