ಹಾವೇರಿ
ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್‍ಡೌನ್ ಪಾಲನೆ, ಕರೋನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಅಗತ್ಯ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬುವ ಸಂದೇಶವನ್ನು ಸಾರ್ವಜನಿಕರಿಗೆ ಸಾರಲು ಪೊಲೀಸ್ ಇಲಾಖೆ ಇಂದು ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ಹಾಗೂ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.ಹೊಸಮನಿ ಸಿದ್ದಪ್ಪ ವೃತ್ತದಿಂದ ಗುತ್ತಲ ರಸ್ತೆ ಮಾರ್ಗವಾಗಿ ಹೊರಟ ರ್ಯಾಲಿ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. 100 ಬೈಕ್‍ಗಳು, 20 ವಾಹನಗಳು ಹಾಗೂ ಪೊಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ 250ಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಅವರು ಮಾತನಾಡಿ, ಕರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಅವರಿಗೆ ಆತ್ಮವಿಶ್ವಾಸ ತುಂಬಲು ಜನರೊಂದಿಗೆ ಪೊಲೀಸ್ ಇಲಾಖೆಯ ನೆರವು ಇದೆ ಎಂಬ ಸಂದೇಶ ರವಾನಿಸಲು ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ರೂಟ್ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಗಾಗಲೇ ಸವಣೂರು, ಶಿಗ್ಗಾಂವ, ತೆಗ್ಗಿಹಳ್ಳಿ, ಬಂಕಾಪುರಗಳಲ್ಲಿ ರ್ಯಾಲಿ ನಡೆಸಲಾಗಿದೆ.
ಶುಕ್ರವಾರ ಹಾವೇರಿ, ಬ್ಯಾಡಗಿ, ಕಾಗಿನೆಲೆಯಲ್ಲಿ ರ್ಯಾಲಿ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ ನಗರಳಲ್ಲಿ ರೂಟ್ ಮಾರ್ಚ್ ನಡೆಸಿ ಜನರಿಗೆ ಆತ್ಮವಿಶ್ವಾಸದೊಂದಿಗೆ ಲಾಕ್‍ಡೌನ್ ನಿಯಮಗಳ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಗ್ರಿಗಳ ಖರೀದಿ, ಅನಗತ್ಯವಾಗಿ ಓಡಾಡದಂತೆ ತಿಳುವಳಿಕೆ ಮೂಡಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ಇಂದಿನ ಪೊಲೀಸ್ ರೂಟ್ ಮಾರ್ಚ್ ಹಾಗೂ ಬೈಕ್ ರ್ಯಾಲಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈ.ಎಸ್.ಪಿ. ವಿಜಯಕುಮಾರ ಸಂತೋಷ್ ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪೇದೆಗಳು, ಹೋಂಗಾಡ್ರ್ಸ್‍ಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ