ನಗರದಲ್ಲಿ ಮತ್ತೆ ಶುರುವಾದ ಬೈಕ್ ವ್ಹೀಲಿಂಗ್

ಕ್ರಮಕ್ಕೆ ಮುಂದಾಗಬೇಕಿದೆ ಪೋಲೀಸ್ ವರಿಷ್ಠಾಧಿಕಾರಿಗಳು

ತುಮಕೂರು

       ಕಳೆದ ಆರೇಳು ತಿಂಗಳ ಹಿಂದೆ ನಗರದಲ್ಲಿ ನಡೆಯುತ್ತಿದ್ದ ಬೈಕ್ ವ್ಹೀಲಿಂಗ್‍ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಕಡಿವಾಣ ಹಾಕಿದ್ದರು. ಆದರೆ ಮತ್ತೆ ನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಪಡ್ಡೆ ಹುಡುಗರು ಹೆಚ್ಚಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.

      ನಗರದ ಎಸ್‍ಎಸ್ ಪುರಂ ಅಂಡರ್‍ಪಾಸ್, ಶೆಟ್ಟಿಹಳ್ಳಿ ಮುಖ್ಯರಸ್ತೆ, ಬನಶಂಕರಿ, ಕುಣಿಗಲ್ ರಸ್ತೆಯಲ್ಲಿ ಈ ಹಿಂದೆ ಬೈಕ್ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ಪೋಲೀಸ್ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಪೋಲೀಸ್ ವರಿಷ್ಠಾಧಿಕಾರಿಗಳು ಬೈಕ್ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ನೀಡುವ ಮೂಲಕ ಈ ಕೃತ್ಯಕ್ಕೆ ಕಡಿವಾಣ ಹಾಕಿದ್ದರು. ಇದರಿಂದ ನೆಮ್ಮದಿಯಿಂದ ಇದ್ದ ವಾಹನ ಸವಾರರಿಗೆ ಮತ್ತೆ ಈ ಕಿರಿಕಿರಿ ಎದುರಾಗುತ್ತಿದೆ.

       ನಗರದ ಬನಶಂಕರಿಯಿಂದ ಈಚೆಗೆ ಯಾವುದೇ ಪೋಲೀಸರು ಇರುವುದಿಲ್ಲ. ಕೇವಲ ಭದ್ರಮ್ಮ ವೃತ್ತ, ಟೌನ್‍ಹಾಲ್ ವೃತ್ತ, ಕಾಲ್‍ಟೆಕ್ಸ್ ಬಳಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡಲಾಗುತ್ತದೆ. ಜೊತೆಗೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಬನಶಂಕರಿ ಭಾಗದಿಂದ ಕುಣಿಗಲ್ ವೃತ್ತದವರೆಗೆ ಎಲ್ಲಿಯೂ ಪೋಲೀಸರೂ ಕಾಣುವುದಿಲ್ಲ.

      ಇದೇ ಧೈರ್ಯದಿಂದ ಈ ಭಾಗದಲ್ಲಿ ಬೈಕ್ ವ್ಹೀಲಿಂಗ್ ಮಾಡಲು ಕೆಲ ಹುಡುಗರು ಮುಂದಾಗಿದ್ದಾರೆ. ಮಧ್ಯಾಹ್ನದ ವೇಳೆ ಕೆಲವರು ಬೈಕ್ ವ್ಹೀಲಿಂಗ್ ಮಾಡುತ್ತಾ, ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಪೋಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿ ಸ್ಥಳೀಯರು ಸೇರಿದಂತೆ ವಾಹನ ಸವಾರರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
 

      ಸೋಮವಾರ ಮಧ್ಯಾಹ್ನ 3.45ರ ಸಮಯದಲ್ಲಿ ಅಂದಾಜು 18 ವಯಸ್ಸಿನ ಯುವಕರು ಬನಶಂಕರಿ ವೃತ್ತದಿಂದ ಸದಾಶಿವನಗರ ಏರಿಯಾದ ಬ್ಯಾಂಕ್‍ವರೆಗೆ ಮತ್ತೆ ಯೂ ಟರ್ನ್ ಮಾಡಿಕೊಂಡು ಬನಶಂಕರಿವರೆಗೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಇಷ್ಟು ದಿನಗಳ ಕಾಲ ಬೈಕ್ ವ್ಹೀಲಿಂಗ್ ಹಾವಳಿ ಕಡಿಮೆಯಾಗಿತ್ತು. ಮತ್ತೆ ಬೈಕ್ ವ್ಹೀಲಿಂಗ್ ಹಾವಳಿ ಪ್ರಾರಂಭವಾಗಿದ್ದು, ಈ ಬಗ್ಗೆ ಪೋಲೀಸ್ ಅಧಿಕಾರಿಗಳು ಗಮನ ಹರಿಸಲಿ.

ಸ್ಥಳೀಯ ನಿವಾಸಿಗಳು

    ಬೈಕ್ ವ್ಹೀಲಿಂಗ್‍ಗೆ ಸಂಬಂಧಪಟ್ಟಂತೆ ಬನಶಂಕರಿ ಪ್ರದೇಶ ತಿಲಕ್‍ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿದ್ದು, ಆ ಠಾಣಾ ಮುಖ್ಯಸ್ಥರಿಗೆ ಸೂಚನೆ ನೀಡುವ ಮೂಲಕ ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಅವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. ಒಂದು ವೇಳೆ 18 ವರ್ಷದ ವಯಸ್ಸಿನೊಳಗಿನ ಮಕ್ಕಳು ಬೈಕ್ ವ್ಹೀಲಿಂಗ್ ಮಾಡಿದರೆ ಅವರ ಪೋಷಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುತ್ತದೆ.

ಡಾ.ಕೋನ.ವಂಶಿಕೃಷ್ಣ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap