ಹಾವೇರಿ
ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ದೊರೆಯಬೇಕು. ರೈತರು ಬೀಜ ಗೊಬ್ಬರಕ್ಕಾಗಿ ತೊಂದರೆ ಅನುಭವಿಸಬಾರದು ಹಾಗೂ ಕೃಷಿ ಪರಿಕರುಗಳು ರೈತರ ಅಗತ್ಯಕ್ಕನುಗುಣವಾಗಿ ತಲುಪುವಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಜರುಗಿದ 2019-20 ನೇ ಸಾಲಿನ ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ. ಅವರು ಮಾತನಾಡಿ, ಸಾಮಾನ್ಯ ವರ್ಗದ ರೈತರಿಗೆ ಶೇ-50 ರ ರಿಯಾಯಿತಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಶೇ-75 ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ.
ಎಲ್ಲಾ ವರ್ಗದ ರೈತರಿಗೆ ಐದು ಎಕರೆ ಮೀರದಂತೆ ಬಿತ್ತನೆ ಬೀಜವನ್ನು ವಿತರಿಸಲಾಗುವುದು ಎಂದು ಹೇಳಿದರು.ಹಾವೇರಿ ಹೋಬಳಿಯಲ್ಲಿ ಒಟ್ಟು ಏಳು ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅದರಲ್ಲಿ ಒಂದು ಹಾವೇರಿಯ ರೈತ ಸಂಪರ್ಕ ಕೇಂದ್ರ, ಇನ್ನೂಳಿದ ಆರು ಉಪ ಬೀಜ ವಿತರಣಾ ಕೇಂದ್ರ (ಕುರುಬಗೊಂಡ, ಕಬ್ಬೂರು, ಆಲದಕಟ್ಟಿ, ಸಂಗೂರು, ದೇವಿಹೊಸೂರು, ದೇವಗಿರಿ) ಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ನೀಲಪ್ಪ ಶಿವಣ್ಣನವರ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾದಿಮನಿ, ಕೃಷಿಕ ಸಮಾಜದ ನಿರ್ದೇಶಕರುಗಳಾದ ಪ್ರಕಾಶ ಹಂದ್ರಾಳ, ಬಸವರಾಜ ಡೊಂಕಣ್ಣನವರ, ಮುತ್ತು, ನಾಗರಾಜ ವಿಭೂತಿ ಕೃಷಿ ಅಧಿಕಾರಿ ಮೊಹಮದ್ ರಿಜ್ವಾನ್ ಹಾರಿಸ್, ಇಲಾಖೆ ಅಧಿಕಾರಿಗಳಾದ ಆರ್ ಟಿ ಕರಲಿಂಗಪ್ಪನವರ, ಆತ್ಮ ಅಧಿಕಾರಿ ವಿಶ್ವನಾಥ ರೆಡ್ಡೇರ ಮತ್ತು ಹಾಗೂ ಕೆ.ಸಿ.ಕೋರಿ, ಶಿವಬಸಪ್ಪ ಗೋವಿ, ದೀಪಕ ಗಂಟಿಸಿದ್ದಪ್ಪನವರ, ರೈತ ಅನುವುಗಾರರು, ರೈತ ಬಾಂಧವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








