ಬ್ಯಾಡಗಿ:
ಪುಕ್ಕಟೆ ಯೋಜನೆಗಳನ್ನು ಕೊಟ್ಟು ಜನರನ್ನು ದರಿದ್ರರನ್ನಾಗಿ ಮಾಡುತ್ತಿರುವ ವಿರೋಧಿ ಪಕ್ಷ ಕಾಂಗ್ರೆಸ್ ಮುಖಂಡರ ಮಾತುಗಳಿಗೆ ಕಿವಿಗೊಡಬೇಡಿ, ಕಳೆದ 6 ದಶಕಗಳ ಆಡಳಿತಾವಧಿಯಲ್ಲಿ ಹದಗೆಟ್ಟಿದ್ದ ದೇಶದ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಣೆಯತ್ತ ಸಾಗಿದೆ, ದೇಶದ ಒಳಿತಿಗೋಸ್ಕರವಾದರೂ ಪಕ್ಷಾತೀತವಾಗಿ ನರೇಂದ್ರ ಮೋದಿ ಯವರನ್ನು ಬೆಂಬಲಿಸಬೇಕಾಗಿದೆ, ಅಭ್ಯರ್ಥಿ ಶಿವಕುಮಾರ ಉದಾಸಿಯವರಿಗೆ ಮತದಾನ ಮಾಡುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವಂತೆ ಬಿಜೆಪಿಯ ಮಾಜಿ ಶಾಸಕ ಸುರೇಶಗೌಡ ಪಾಟೀಲ ಕರೆ ನೀಡಿದರು.
ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪಟ್ಟಣದಲ್ಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಅತೀಶ್ರೇಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತಕ್ಕೆ ಕಳಂಕ ತರುವಂತವಹ ಹೇಳಿಕೆಗಳು ವರ್ತನೆಗಳು ಕಂಡು ಬರುತ್ತಿವೆ, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರಿಂದ ದೇಶದ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ವಿಚಾರಗಳನ್ನು ಮಟ್ಟ ಹಾಕಬೇಕಾಗಿದೆ, ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದರು.
ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ, ಸುಭದ್ರ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜಿಯವರ ಕೈಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಯೊಬ್ಬರೂ ತಪ್ಪದೇ ಮತ ನೀಡುವುದರ ಜೊತೆಗೆ ಎಲ್ಲರಿಗೂ ದೇಶಾಭಿವೃದ್ಧಿ ಕುರಿತು ಮನವರಿಕೆ ಮಾಡಬೇಕಿದೆ, ದೂರದೃಷ್ಠಿ ಹೊಂದಿರುವ ಪ್ರಧಾನಿಯವರ ಯೋಜಿತ ಯೋ ಜನೆಗಳಿಗೆ ಸಹಕಾರ ನೀಡಬೇಕಾಗಿದೆ, ಮೋದಿಯವರ ದಾರಿಯಲ್ಲೇ ಸಾಗುತ್ತಿರುವ ಅಭ್ಯರ್ಥಿ ಶಿವಕುಮಾರ ಉದಾಸಿಯವರಿಗೆ ಹೆಚ್ಚಿನ ಮತಗಳನ್ನು ನೀಡಬೇಕಾಗಿದೆ ಎಂದರು.
ವಿರೋಧಿಗಳಿಗೆ ಬುದ್ಧಿ ಕಲಿಸಿದ ಮೋದಿ:ಎಪಿಎಂಸಿ ಸದಸ್ಯ ಹಾಗೂ ಪಕ್ಷದ ಮುಖಂಡ ವಿಜಯ ಮಾಳಗಿ ಮಾತನಾಡಿ, ಜನಧನ್ ಯೋಜನೆ, ಗ್ಯಾಸ್ ಸಿಲೆಂಡರ್ ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಜಿಎಸ್‍ಟಿ, ಸ್ವಚ್ಚ ಭಾರತ, ಮೇಕ್ ಇನ್ ಇಂಡಿಯಾ, ನದಿ ಜೋಡಣೆ ಇನ್ನಿತರ ಯೋಜನೆಗಳನ್ನು ಅನುಷ್ಟಾನಗೊಳಿಸಿ ದೇಶಪ್ರೇಮ ಮೆರೆದಿದ್ದಷ್ಟೇ ಅಲ್ಲ, ಭದ್ರತೆ ವಿಷಯ ಬಂದಾಗ ಎದೆಗೊಟ್ಟು ನಿಂತು ಪಾಕಿಸ್ತಾನ ಹಾಗೂ ಚೀನಾದಂತಹ ಎದುರಾಳಿ ದೇಶಗಳ ವಿರುದ್ಧ ಹೋರಾಡಿ ವಿರೋಧಿಗಳಿಗೆ ಬುದ್ಧಿ ಕಲಿಸಿದ್ದಾರೆ ಮೋದಿಯವರನ್ನು ಇನ್ನೊಮ್ಮೆ ಈ ದೇಶದ ಪ್ರಧಾನಿಯನ್ನಾಗಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.
ಬದಲಾವಣೆ ಮಾಡಿದ್ದೇವೆ ಅದಕ್ಕಾಗಿ ಮತ ನೀಡಿ:ಇನ್ನೋರ್ವ ಮುಖಂಡ ಈರಣ್ಣ ಬಣಕಾರ ಮಾತನಾಡಿ, ಹೋರಾಟಗಾರರ ಫಲದಿಂದ ಪಡೆದಿದ್ದ ಸ್ವಾತಂತ್ರ್ಯವನ್ನು ಹಾಗೂ ದೇಶವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಭಾರತೀಯ ಜನತಾ ಪಕ್ಷ ಉದಯಿಸಿದೆ, ಪಕ್ಷವು ಯಾರೊಬ್ಬರ ಸೊತ್ತಲ್ಲ ಇಲ್ಲಿರುವಷ್ಟೂ ಕಾರ್ಯಕರ್ತರು ಬೇರೆ ಪಕ್ಷದಲ್ಲಿಲ್ಲ, ಕಳೆದ ನಾಲ್ಕೂವರೆ ವರ್ಷದಲ್ಲಿ ಅಮೂಲಾಗ್ರ ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ವಿ.ವಿ.ಹಿರೇಮಠ, ಯಮನೂರಪ್ಪ ಉಜನಿ, ಮಲ್ಲೇಶ ಬಣಕಾರ, ನಾಗರಾಜ ಹಾವನೂರ, ವಿಷ್ಣು ಬೆನ್ನೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.