ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು

   ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಶಾಸಕರನ್ನು ಖರೀದಿಸಿದ ಬಿಜೆಪಿ ನಾಯಕರು ಹಿಂದಿದ್ದ ಅಪವಿತ್ರ ಸರ್ಕಾರವನ್ನು ಉರುಳಿಸಿ ಪವಿತ್ರ ಸರ್ಕಾರವನ್ನು ತಂದಿದ್ದಾರೆ.ಈ ಪವಿತ್ರ ಸರ್ಕಾರವನ್ನು ಮತ್ತಷ್ಟು ಬಲಿಷ್ಟಪಡಿಸಿ ಕೊಳ್ಳಲು ಪುನ: ಜೆಡಿಎಸ್ ಶಾಸಕರನ್ನು ಕರೆದೊಯ್ಯಬೇಕೆನ್ನಿಸಿದರೆ ಕರೆದೊಯ್ಯಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

   ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ನನ್ನ ನೇತೃತ್ವದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಪವಿತ್ರ ಸರ್ಕಾರ.ಹಾಗಂತ ಪಾಪ ಎಸ್.ಎಂ.ಕೃಷ್ಣ ಅವರಂತಹ ನಾಯಕರು ಹೇಳಿದ್ದಾರೆ.ಹೀಗಾಗಿ ಈಗಿರುವುದು ಪವಿತ್ರ ಸರ್ಕಾರ ಎಂದರು.

   ಉಪಚುನಾವಣೆಗಳಲ್ಲಿ ಮತದಾರರು ಕೂಡಾ ಪವಿತ್ರ ಸರ್ಕಾರವನ್ನು ಸುಭದ್ರಗೊಳಿಸುವ ಕೆಲಸ ಮಾಡಿದ್ದಾರೆ .ಹೇಗಿದ್ದರೂ ಯಡಿಯೂರಪ್ಪ ಅವರೀಗ ಸ್ಥಿರ ಸರ್ಕಾರ ನಡೆಸುತ್ತಿದ್ದಾರೆ.ರಾಜ್ಯವನ್ನು ಅವರು ಅಭಿವೃದ್ಧಿಪಥದತ್ತ ಕೊಂಡೊಯ್ಯಲಿ ಎಂದರು.ಆಪರೇಷನ್ ಕಮಲ ಎಂಬುದು ಬಿಜೆಪಿಯ ಮೂಲ ಮಂತ್ರ.ಆ ಮಂತ್ರದಿಂದಲೇ ಅವರು ಅಪವಿತ್ರ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದಾರೆ ಎಂದ ಅವರು,ಹಾಗಂತ ಇಷ್ಟ ಬಂದಂತೆ ಸರ್ಕಾರ ನಡೆಸಲು ಹೋಗಬೇಡಿ ಎಂದು ಯಡಿಯೂರಪ್ಪ ಅವರನ್ನು ಕುಟುಕಿದರು.

   ಈ ಹಿಂದೆ ನಮ್ಮ ಸರ್ಕಾರ ಯಾವ್ಯಾವ ಕ್ಷೇತ್ರಗಳಿಗೆ ಅನುದಾನ ನೀಡಿತ್ತೋ?ಆ ಕ್ಷೇತ್ರಗಳಿಗೆ ನೀಡಿದ ಅನುದಾನವನ್ನು ಯಡಿಯೂರಪ್ಪ ಸರ್ಕಾರ ರದ್ದುಗೊಳಿಸಿದೆ.ಇಂತಹ ದ್ವೇಷದ ರಾಜಕಾರಣ ಬೇಡ.ಯಾಕೆಂದರೆ ರಾಜ್ಯದ ಆರೂವರೆ ಕೋಟಿ ಜನರ ತೆರಿಗೆ ದುಡ್ಡಿನಲ್ಲಿ ಒಂದು ಸರ್ಕಾರ ನಡೆಯುತ್ತದೆಯೇ ಹೊರತು ಕೆಲವರು ಹಿತಾಸಕ್ತಿಗಾಗಿಯಲ್ಲ ಎಂದೆರು.

   ಉಪಚುನಾವಣೆಯಲ್ಲಿನ ಸೋಲನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ.ಜನ ನಮ್ಮನ್ನು ತಿರಸ್ಕರಿಸಿದ್ದಾರೆ.ಅವರ ತೀರ್ಪನ್ನು ಗೌರವಿಸಿ ಓದಿನ ಕಡೆ,ಪಕ್ಷದ ಸಂಘಟನೆಯ ಕಡೆ ಗಮನ ಹರಿಸಿದ್ದೇನೆ ಎಂದು ಹೇಳಿದರು.ಯಾವುದೇ ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ.ಕೆ.ಆರ್.ಪೇಟೆಯಲ್ಲಿ ಸೋತಿವಿ ಎಂದ ಮಾತ್ರಕ್ಕೆ ಜೆಡಿಎಸ್ ಭದ್ರಕೋಟೆ ವಿನಾಶವಾಯಿತು ಎಂದಲ್ಲ.ಅಲ್ಲಿ ಕಾಂಗ್ರೆಸ್ ಪಕ್ಷ ಕೂಡಾ ಈ ಹಿಂದೆ ಗೆದ್ದಿದೆ.ನಾವು ಮಾತ್ರ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.

   ಅಧಿಕಾರ ಯಾರಿಗೂ ಶಾಶ್ವತವಲ್ಲ,ಈ ಹಿಂದೆ ಯಡಿಯೂರಪ್ಪನವರೇ ನಾನೇ ಹತ್ತು ವರ್ಷ ಸಿಎಂ ಎಂದಿದ್ದರು .ಸಿದ್ಧರಾಮಯ್ಯ ಕೂಡಾ ನಾನೇ ಹತ್ತು ವರ್ಷ ಸಿಎಂ ಎಂದಿದ್ದರು.ಆದರೆ ಏನಾಯಿತು?ಅಂತ ಪ್ರಶ್ನಿಸಿದರು.ಅಧಿಕಾರ ಶಾಶ್ವತ ಅಂತ ಯಾರಾದರೂ ಬಾವಿಸಿದರೆ ಅವರಿಗಿಂತ ಮುಠ್ಠಾಳರು ಬೇರೆ ಇಲ್ಲ ಎಂದ ಅವರು,ಇವರೀಗ ರಾಜಧಾನಿಯ ಚಿತ್ರಣವನ್ನು ಮೂರೇ ತಿಂಗಳಲ್ಲಿ ಬದಲಿಸಿಬಿಡುತ್ತಾರಂತೆ.ಬದಲಿಸಲಿ,ಉತ್ತರ ಕರ್ನಾಕದ ಅಭಿವೃದ್ಧಿ,ಮಹದಾಯಿ ವಿವಾದ ಎಲ್ಲವಕ್ಕೂ ಬಿಜೆಪಿಯ ಬಳಿ ಪರಿಹಾರವಿದೆ ಎಂದು ಹೇಳಿದರು.

    ಜೆಡಿಎಸ್ ಪಕ್ಷದಿಂದ ಮತ್ತಷ್ಟು ಶಾಸಕರು ಬಿಜೆಪಿ ಕಡೆ ಹೋಗುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು ,ನಾನು ಕೂಡಾ ಪತ್ರಿಕೆಗಳಲ್ಲಿ ನೋಡಿದೆ.ಅದ್ಯಾರೋ ಇಪ್ಪತ್ತು ಶಾಸಕರು ಜೆಡಿಎಸ್ ತೊರೆದು ಬಿಜೆಪಿ ಕಡೆ ಹೋಗಲು ತಯಾರಾಗಿದ್ದಾರಂತೆ.ನನ್ನ ಷಷ್ಟ್ಯಬ್ದಿಯ ದಿನ ಜಿ.ಟಿ.ದೇವೇಗೌಡರನ್ನು ಹೊರತು ಪಡಿಸಿ ಪಕ್ಷದ ಉಳಿದೆಲ್ಲ ಶಾಸಕರು ಬಂದಿದ್ದರು.ಹಾರೈಸಿ ಜತೆಗೇ ಊಟ ಮಾಡಿ ಹೋದರು.ಇದು ಮಾತ್ರ ನನಗೆ ಗೊತ್ತು.ಬಿಜೆಪಿ ಕಡೆ ಯಾರು ಹೋಗುತ್ತಾರೆ ಎಂಬುದು ಗೊತ್ತಿಲ್ಲ ಎಂದರು.

    ಮಧುಬಂಗಾರಪ್ಪ ಬಾಂಬೆಗೆ ಹೋಗಿದ್ದಾರಂತೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು,ಯಾವ ಪಕ್ಷದ ನಾಯಕರು ಈಗ ಎಲ್ಲೆಲ್ಲಿಗೆ ಹೋಗುತ್ತಾರೋ?ಗೊತ್ತಿರುವುದಿಲ್ಲ.ಒಬ್ಬೊಬ್ಬರು ಒಂದೊಂದು ಕಡೆ ಹೋಗುತ್ತಾರೆ.ಅದನ್ನು ನೋಡುತ್ತಾ ಕೂರಲು ನಮಗೆ ಸಾಧ್ಯವೇ?ಎಂದು ಪ್ರಶ್ನಿಸಿದರು.

   ಈಗ ಯಾರು ಯಾವ ರೀತಿ ವರ್ತಿಸುತ್ತಾರೆ?ಎಂಬುದೇ ನಮಗೆ ಗೊತ್ತಿಲ್ಲ.ಮೊನ್ನೆ ಗೆದ್ದ ಶಾಸಕರ ಪೈಕಿ ಬಹುತೇಕರು ಈ ಹಿಂದೆ ಯಾರನ್ನು ತೊರೆದು ಓಡಿ ಹೋಗಿದ್ದರೋ?ಅವರನ್ನೇ ಆಸ್ಪತ್ರೆಯಲ್ಲಿ ಭೇಟಿ ಮಾಡಿ,ನೀವೇ ನಮ್ಮ ಗುರುಗಳು ಎಂದಿದ್ದಾರೆ.ವಸ್ತುಸ್ಥಿತಿ ಹೀಗಿರುವಾಗ ಯಾರ ನಡವಳಿಕೆ ಹೇಗಿರುತ್ತದೆ?ಅಂತ ತಿಳಿದುಕೊಳ್ಳುವುದು ಹೇಗೆ?ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap