ಬೆಂಗಳೂರು
ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದು, ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಲವಂತವಾಗಿ ಸಹಿ ಪಡೆದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೋತಿನಿವಾಸ್ ಕಾಲೇಜು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಸಿಎಎ ಪರ ಬಿಜೆಪಿಯವರು ಸಹಿ ಅಭಿಯಾನ ನಡೆಸುತ್ತಿದ್ದರು. ಎಲ್ಲಾ ವಿದ್ಯಾಕೇಂದ್ರಗಳಲ್ಲಿ ರಾಜಕಾರಣ ಮಾಡುತ್ತಿದ್ದು ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಬಿಜೆಪಿ ಎಡೆಮಾಡಿಕೊಟ್ಟಿದೆ. ಜೆಎನ್‍ಯು, ಜಾಮಿಯಾ ವಿಶ್ವವಿದ್ಯಾಲಯಗಳಲ್ಲಿಯೂ ಹೀಗೆಯೇ ಆಗಿದೆ ಎಂದರು.
ಕಾಲೇಜುಗಳಲ್ಲಿ ಹಲ್ಲೆಗೊಳಗಾದವರ ಮೇಲೆಯೇ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಎಬಿವಿಪಿ, ಸಂಘಪರಿವಾರಕ್ಕೆ ರಕ್ಷಣೆ ನೀಡುತ್ತಿದ್ದು, ಕಾಲೇಜುಗಳಲ್ಲಿಯೂ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಕೋಮು ಸಂಘರ್ಷ ಉಂಟುಮಾಡುತ್ತಿದ್ದಾರೆ. ಭಿತ್ತಿಪತ್ರ ಅಂಟಿಸುವುದು ಕಾನೂನು ಬಾಹಿರ. ವಿದ್ಯಾರ್ಥಿಗಳ ಮೇಲೆ ಒತ್ತಡ ಭಯ ಹೇರುತ್ತಿದ್ದಾರೆ. ಭಯ ಪಡಿಸಿದವರನ್ನೇ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ ಎಂದು ಖಂಡ್ರೆ ಕಿಡಿಕಾರಿದರು.
ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಯಾಗಿದ್ದ ಗುಡಿಸಲು ಮುಕ್ತ ಕರ್ನಾಟಕ ಯೋಜನೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಸತಿ ಯೋಜನೆಯ ಬಗ್ಗೆ ಈಗಾಗಲೇ ಪಕ್ಷ ಧ್ವನಿ ಎತ್ತಿದೆ. 16 ಲಕ್ಷ ಮನೆಗಳಿಗೆ ನಮ್ಮ ಸರ್ಕಾರ ಅನುಮತಿ ಕೊಟ್ಟಿತ್ತು. 3 ಲಕ್ಷ ಮನೆಗಳು ಇನ್ನೂ ನಿರ್ಮಾಣ ಹಂತದಲ್ಲಿಯೇ ಇವೆ. ಆದರೆ ಇಲ್ಲಿಯವರೆಗೆ ಮನೆಗಳಿಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ವಸತಿ ಸಚಿವ ಸೋಮಣ್ಣ 270 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಇನ್ನೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಬಡವರು ತಾವಿದ್ದ ಜಾಗ ಕೆಡವಿ ಮನೆ ನಿರ್ಮಿಸಲು ಬೀದಿ ಬದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ನ್ಯಾಯಯುತವಾಗಿ ಬರಬೇಕಾದ ಹಣವೂ ಅವರಿಗೆ ಸಿಕ್ಕಿಲ್ಲ. ಸಚಿವ ಸೋಮಣ್ಣ ಸೇಡಿನ ರಾಜಕೀಯ ಬಿಡಬೇಕು ಎಂದರು.
ಬಾಲ್ಕಿ ಕ್ಷೇತ್ರಕ್ಕೆ ಹತ್ತು ಅಧಿಕಾರಿಗಳನ್ನು ಪುರಸಭೆಗೆ ತನಿಖೆಗೆ ಕಳಿಸಿದ್ದಾರೆ. ಒಂದು ಕ್ಷೇತ್ರದ ತನಿಖೆಗಾದರೂ ಸಚಿವ ಸೋಮಣ್ಣ ಮುಂದಾಗಿರುವುದು ಒಳ್ಳೆಯ ಕೆಲಸ. ವಸತಿ ತನಿಖೆ ಇಲ್ಲಿಗೆ ನಿಲ್ಲಬಾರದು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆಗಬೇಕು. ಮನೆ ನಿರ್ಮಿಸಿಕೊಡದಿದ್ದರೆ ಜನರ ಶಾಪ ಬಿಜೆಪಿಯ ಸಚಿವರಿಗೆ ತಟ್ಟದೇ ಬಿಡದು ಎಂದು ಖಂಡ್ರೆ ಹೇಳಿದರು.
ಮಂಗಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಗಲಭೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಕಾರಣ. ತನಿಖೆ ಬಗ್ಗೆ ಕೇಳಿದರೆ ಗೃಹ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಮಂಗಳೂರು ಗಲಭೆ ಪ್ರಕರಣ ಸಂಬಂಧ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯೇ ಆಗಬೇಕು ಹಾಗೂ ಅಕ್ರಮ ಮನೆ ನಿರ್ಮಾಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಜೆಡಿಎಸ್‍ನ ಕುಮಾರಸ್ವಾಮಿ ಆಗ್ರಹ ಪಡಿಸಿದಂತೆ ಸದನ ಸಮಿತಿ ರಚನೆಯೇ ಸರಿ ಎಂದು ಕುಮಾರಸ್ವಾಮಿ ಒತ್ತಾಯವನ್ನು ಸ್ವಾಗತಿಸಿದರು.
ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರವಾಗಿ ಮಾತನಾಡಿ, ತಾವು ಸದ್ಯಕ್ಕೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವುದಿಲ್ಲ. ಕಳೆದ ಡಿಸೆಂಬರ್ ನಲ್ಲಿಯೇ ಅವರ ಭೇಟಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯವಷ್ಟೆ ಅಲ್ಲ,ಎಲ್ಲಾ ಸಮುದಾಯಗಳಿಂದಲೂ ಎಐಸಿಸಿಗೆ ಬೇಡಿಕೆಯಿದೆ. ಈ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








