ಕೊಪ್ಪಳ: ಕೈ-ಕಮಲ ಪಾಳೆಯದಲ್ಲಿ ಟಿಕೆಟ್‌ ಗೆ ಪೈಪೋಟಿ ….!

ಕೊಪ್ಪಳ:

   ಲೋಕಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೆಅಖಾಡ ರಂಗೇರುತ್ತಿದ್ದು, ಕಾಂಗ್ರೆಸ್‌-ಬಿಜೆಪಿಯಲ್ಲಿ ಟಿಕೆಟ್‌ ಪಡೆಯುವ ಆಕಾಂಕ್ಷಿಗಳ ಪ್ರಯತ್ನ ಚುರುಕುಗೊಂಡಿದೆ.

ಕೈನಿಂದ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್‌, ಮಾಜಿ ಸಚಿವ ಅಮರೇಗೌಡ ಪಾಟೀಲ್‌ ಬಯ್ಯಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೆಸರಿದ್ದು, ಕಮಲದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ, ವೈದ್ಯ ಬಸವರಾಜ ಕ್ಯಾವಟರ್‌ ಹೆಸರಿದೆ. ಈ ಐವರಲ್ಲಿ ಯಾರಿಗೆ ಜಾಕ್‌ ಪಾಟ್‌ ಹೊಡೆಯಲಿದೆ ಎಂಬ ಕಾತರ ಮನೆ ಮಾಡಿದೆ.

ಎರಡು ಪಕ್ಷದಲ್ಲಿಯೂ ಮೊದಲ ಹಂತದಲ್ಲಿಅಭ್ಯರ್ಥಿಗಳ ಘೋಷಣೆಗೆ ಸಿದ್ಧತೆ ನಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಮಂಕಾಗಿದ್ದ ಬಿಜೆಪಿಯಲ್ಲಿ ಕೊನೆಗೂ ಪಕ್ಷದ ರಾಜ್ಯಾಧ್ಯಕ್ಷರು, ಪ್ರತಿಪಕ್ಷದ ನಾಯಕನ ಆಯ್ಕೆ ನಡೆದಿದೆ.

ಇತ್ತ ಹ್ಯಾಟ್ರಿಕ್‌ ಬಾರಿಸಿರುವ ಬಿಜೆಪಿಯಲ್ಲಿ ಹಾಲಿ ಸಂಸದರಿದ್ದರೂ ಮತ್ತೊಮ್ಮೆ ಟಿಕೆಟ್‌ ಸಂಗಣ್ಣ ಕರಡಿಯವರಿಗೆ ಎಂಬುದರ ಕುರಿತು ಸ್ಪಷ್ಟತೆಯಿಲ್ಲ. ಆದರೆ, ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವುದು, ಕರಡಿ ಕುಟುಂಬಕ್ಕೆ ಪ್ಲಸ್‌ ಆಗಿದೆ ಎನ್ನಲಾಗುತ್ತಿದೆ. ಇದರ ನಡುವೆ ವೈದ್ಯ ಬಸವರಾಜ ಕ್ಯಾವಟರ್‌, ವಾರದಲ್ಲಿಎರಡ್ಮೂರು ಬಾರಿ ಬೆಂಗಳೂರಿನಲ್ಲಿ ಬಿಡು ಬಿಟ್ಟು, ತಮ್ಮದೇ ಮೂಲ ಬಳಸಿ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಕಮಲ ಪಡೆ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್‌ನಲ್ಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯೊಬ್ಬರು ಸದ್ದಿಲ್ಲದೇ ಬಿಜೆಪಿ ಟಿಕೆಟ್‌ ಗಿಟ್ಟಿಸಲು ತಮ್ಮ ಸಮುದಾಯದ ಕೆಲವರನ್ನು ಕರೆದುಕೊಂಡು ಹೊಸದಿಲ್ಲಿಗೆ ತೆರಳಿ ಬಂದಿರುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವೊಂದಕ್ಕೆ ಸೂಕ್ತ ಅಭ್ಯರ್ಥಿ ಹುಡುಕುತ್ತಿದ್ದ ಬಿಜೆಪಿ, ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿಇವರಿಗೆ ಟಿಕೆಟ್‌ ಕೊಡಲು ಮುಂದಾಗಿತ್ತು.

ಕಾಂಗ್ರೆಸ್‌ನಿಂದ ಹೊರ ಬಂದು ಸ್ಪರ್ಧೆ ಮಾಡಿ ಎನ್ನುವ ಆಹ್ವಾನವಿತ್ತು. ಅಂದು ಕೈ ಪಡೆಯಿಂದಲೇ ಟಿಕೆಟ್‌ ಪಡೆಯುವ ಪ್ರಯತ್ನದಲ್ಲಿದ್ದ ಈ ರಾಜಕಾರಣಿ, ಬಿಜೆಪಿಯ ಆಫರ್‌ ತಿರಸ್ಕರಿಸಿದ್ದರು. ಬಳಿಕ ಅತ್ತ ಕಾಂಗ್ರೆಸ್‌ನಲ್ಲಿಯೂ ಟಿಕೆಟ್‌ ಸಿಗಲಿಲ್ಲ. ಆದರೀಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದರೂ ಸ್ಪರ್ಧೆ ಜೋರು ಇರುವುದರಿಂದ ಬಿಜೆಪಿ ಟಿಕೆಟ್‌ ಕೇಳಿ ನೋಡೋಣ ಎಂದುಕೊಂಡು ಹೊಸದಿಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.

ಆದರೆ, ಕಮಲದ ವರಿಷ್ಠರು, ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡಲು ಹಿಂದೇಟು ಹಾಕಿದ ಬಳಿಕ ಮರಳಿ ಸುಂಕವಿಲ್ಲದಂತೆ ಕಾಂಗ್ರೆಸ್‌ಟಿಕೆಟ್‌ಗೆ ಈ ಮುಖಂಡರು ಮತ್ತೆ ಪ್ರಯತ್ನ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ವಿಧಾನಸಭಾ ಚುನಾವಣೆಯಲ್ಲಿಎರಡನೇ ಬಾರಿ ಬಿಜೆಪಿ ಟಿಕೆಟ್‌ ಕೈ ತಪ್ಪಿದ ಬಳಿಕ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಸೇರಿ 46 ಸಾವಿರ ಮತ ಪಡೆದು ಗಮನ ಸೆಳೆದಿದ್ದ ಸಿ.ವಿ.ಚಂದ್ರಶೇಖರ್‌, ಮರಳಿ ಮಾತೃಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿ ಜೋರಾಗಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿರುವುದರಿಂದ ಕೊಪ್ಪಳ ಲೋಕಸಭಾ ಮೈತ್ರಿ ಟಿಕೆಟ್‌ ತಮಗೆ ಕೊಡಿಸಿ ಎಂದು ಎಚ್‌.ಡಿ ಕುಮಾರಸ್ವಾಮಿ ಅವರನ್ನು ಕೇಳಿದ್ದ ಅವರು, ಇದೀಗ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್‌ ಖಾತ್ರಿಯೊಂದಿಗೆ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತಿದೆ.ಬಿಜೆಪಿಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕರೆ ಕಮಲ ಮುಡಿಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾದ್ದು,ಕರಡಿ ಕುಟುಂಬ ಇದನ್ನು ಯಾವ ರೀತಿ ಸ್ವೀಕರಿಸಲಿದೆ ಎಂಬ ಕಾತರ ಹೆಚ್ಚಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap