ತುಮಕೂರು
ಲೋಕಸಭಾ ಚುನಾವಣೆಗೆ ಬಿಜೆಪಿ ಸರ್ವ ಸಜ್ಜಾಗುತ್ತಿದೆ. ಮಂಗಳವಾರ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಚಿವ, ಪಕ್ಷದ ಜಿಲ್ಲಾ ಉಸ್ತುವಾರಿ ವಿ ಸೋಮಣ್ಣ ಅವರ ನೇತೃತ್ವದಲ್ಲಿ ಭಾನುವಾರ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ನಾಯಕರ ಸಭೆ ನಡೆಸಿ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಶಾಸಕರಾದ ಜೆ ಸಿ ಮಾಧೂಸ್ವಾಮಿ, ಬಿ ಸಿ ನಾಗೇಶ್, ಜಿ ಬಿ ಜ್ಯೋತಿಗಣೇಶ್, ಮಸಾಲೆ ಜಯರಾಮ್, ಮಾಜಿ ಶಾಸಕರಾದ ಡಾ. ಹುಲಿನಾಯ್ಕರ್, ಸುರೇಶ್ ಗೌಡ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು.
ಮಂಗಳವಾರ ಮಧ್ಯಾಹ್ನ 12.05ರಿಂದ 12.45ರೊಳಗೆ ಜಿ ಎಸ್ ಬಸವರಾಜು ನಾಮಪತ್ರ ಸಲ್ಲಿಸುವರು. ಇದಕ್ಕೂ ಮೊದಲು ಸಾವಿರಾರು ಕಾರ್ಯಕರ್ತರು ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಸಮಾವೇಶಗೊಂಡು ನಂತರ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ವಿ ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಐದು ವರ್ಷದಲ್ಲಿ ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಟ್ಟಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಕಾರಣಕ್ಕೆ ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸುವರು ಎಂದರು.
ಕ್ಷೇತ್ರದ ಎಲ್ಲಾ ನಾಯಕರು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಲು ಉತ್ಸಾಹ ತೋರಿದ್ದಾರೆ, ಎಲ್ಲಾ ಕಡೆ ಬಿಜೆಪಿ ಪರವಾದ ಒಲವು ವ್ಯಕ್ತವಾಗಿದೆ ಎಂದು ಸೋಮಣ್ಣ ಹೇಳಿದರು.
ಶಾಸಕ ಜೆ ಸಿ ಮಾಧುಸ್ವಾಮಿ ಮಾತನಾಡಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಶಕ್ತಿ ನಮ್ಮಲ್ಲಿದೆ. ಎದುರಾಳಿ ಅಭ್ಯರ್ಥಿ ಬಗ್ಗೆ ಮಹತ್ವ ಕೊಡುವ ಅಗತ್ಯವಿಲ್ಲ. ನಮ್ಮ ಗೆಲುವಿಗೆ ಏನು ಮಾಡಬೇಕೊ ಅದನ್ನು ನಾವು ಮಾಡುತ್ತೇವೆ ಎಂದರು.ಹೊರಗಿನವರು ಅಭ್ಯರ್ಥಿಯಾಗಿ ಬರುತ್ತಿರುವುದು ಈ ಜಿಲ್ಲೆಯ ದುರಾದೃಷ್ಟ. ಹೊರಗಿನವರಿಗೆ ಯಜಮಾನಿಕೆ ನೀಡುವಂತಹ ದುಸ್ಥಿತಿ ಆ ಪಕ್ಷಗಳಿಗೆ ಬರಬಾರದಿತ್ತು ಎಂದು ದೇವೇಗೌಡರ ಸ್ಪರ್ಧೆಯನ್ನು ಟೀಕಿಸಿದರು.
ತುಮಕೂರು ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು ಎಂಬುದನ್ನು ಜೆಡಿಎಸ್‍ನವರೇ ಹೇಳಲಿ. ಎಸ್ ಆರ್ ಶ್ರೀನಿವಾಸ್ ಮಂತ್ರಿಯಾಗಿ ತಮ್ಮ ಕ್ಷೇತ್ರಕ್ಕೇ ಹೇಮಾವತಿ ನೀರು ಬಿಡಿಸಿಕೊಳ್ಳಲಾಗಲಿಲ್ಲ, ದೇವೇಗೌಡರನ್ನು ರಾಕ್ಷಸ ಕುಟುಂಬ ಎಂದು ಮಂತ್ರಿ ಶ್ರೀನಿವಾಸ್ ತಮ್ಮ ಮನದಾಳದ ಮಾತು ಹೇಳುವ ಮೂಲಕ ದೇವೇಗೌಡರ ವ್ಯಕ್ತಿತ್ವ ಬಿಚ್ಚಿಟ್ಟಿದ್ದಾರೆ ಎಂದು ಮಾಧೂಸ್ವಾಮಿ ವ್ಯಂಗ್ಯವಾಡಿದರು.
ತುಮಕೂರು ಕ್ಷೇತ್ರದಲ್ಲಿ ತಮ್ಮ ಗೆಲುವು ಸುಲಭವಲ್ಲ ಎಂದು ದೇವೇಗೌಡರಿಗೂ ಗೊತ್ತು. ಮೊಮ್ಮಕ್ಕಳ ಮನವೊಲಿಸಲಾಗದೆ ಕೊನೇ ಘಳಿಗೆಯಲ್ಲಿ ತುಮಕೂರು ಆಯ್ಕೆ ಮಾಡಿಕೊಂಡಿದ್ದಾರೆ. ತಮಗೆ ತುಮಕೂರು ಸೇಫ್ ಅಲ್ಲ ಎಂಬುದು ಅವರಿಗೆ ಗೊತ್ತು, ಇಲ್ಲದಿದ್ದರೆ ಅವರು ಸ್ಪರ್ಧೆ ಮಾಡಲು ಹೀಗೆ ತಡ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ ಎಂದರು.
ಮಾಜಿ ಶಾಸಕ ಸುರೇಶ್ ಗೌಡರು ಮಾತನಾಡಿ, ದೇವೇಗೌಡರನ್ನು ಇಲ್ಲಿ ಸೋಲಿಸಬೇಕು ಎಂದು ಕಾಂಗ್ರೆಸ್‍ನವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್‍ನವರು ನೀಚ ಕೆಲಸ ಮಾಡಿದರು. ಜೊತೆಗೆ ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್‍ನವರೇ ಈಗ ತಂತ್ರ ಮಾಡುತ್ತಿದ್ದಾರೆ. ತಿಮಿಂಗಿಲ ಮೀನನ್ನು ನುಂಗಿತು ಎನ್ನುವಂತೆ ದೇವೇಗೌಡರು ಬಂದು ಮುದ್ದಹನುಮೇಗೌಡರ ಅವಕಾಶ ಕಿತ್ತುಕೊಂಡರು ಎಂದರು.
ದೇವೇಗೌಡರ ಕುಟುಂಬ ತುಮಕೂರು ಜಿಲ್ಲೆಗೆ ಬರಬೇಕಾದ ನೀರು ತಡೆಹಿಡಿದು ರಾಜಕಾರಣ ಮಾಡಿದರು. ನಮ್ಮಲ್ಲಿ ಕೆರೆಗಳೆಲ್ಲಾ ಬತ್ತಿ ಹೋಗಿವೆ ಹಾಸನ ಜಿಲ್ಲೆ ಕೆರೆಗಳು ಬೇಸಿಗೆಯಲ್ಲೂ ತುಂಬಿವೆ. ಇಂತಹ ದೇವೇಗೌಡರು ತುಮಕೂರಿನಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ. ಇದು ಮೋದಿ ವರ್ಸಸ್ ದೇವೇಗೌಡರ ನಡುವಿನ ಚುನಾವಣೆ, ಇಲ್ಲಿ ಮೋದಿಯವದೇ ಗೆಲುವು ಎಂದರು.
ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಸಚಿವ ಹೆಚ್ ಡಿ ರೇವಣ್ಣ ಅವರು, ತುಮಕೂರು ಜಿಲ್ಲೆಗೆ ಬರುವ ಹೇಮಾವತಿ ನೀರು ತಡೆಯಲು ಪದೇಪದೆ ಪ್ರಯತ್ನ ಮಾಡುತ್ತಾರೆ, ನಾಲೆಗೆ ಮಣ್ಣು ತುಂಬುವುದು, ನಾಲೆ ಒಡೆಯುವುದು ಹೀಗೆ ತೊಂದರೆ ಕೊಡುವುದೇ ಅವರ ಕೆಲಸ. ನೀರಿಗೆ ಹಾಹಾಕಾರವಿರುವ ಸಂದರ್ಭದಲ್ಲಿ ದೇವೇಗೌಡರು ಜಿಲ್ಲೆಯ ಜನರ ಬಗ್ಗೆ ಯಾವತ್ತು ಕಾಳಜಿ ವಹಿಸಿದ್ದರು ಎಂದು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ ಎಸ್ ಬಸವರಾಜು, ಶಾಸಕರಾದ ಬಿ ಸಿ ನಾಗೇಶ್, ಜಿ ಬಿ ಜ್ಯೋತಿಗಣೇಶ್, ಮಾಜಿ ಶಾಸಕ ಡಾ ಹುಲಿನಾಯ್ಕರ್, ಮುಖಂಡರಾದ ಸಿವಿ ಮಹದೇವಯ್ಯ, ವೈ ಹೆಚ್ ಹುಚ್ಚಯ್ಯ, ರಾಮಾಂಜನಯ್ಯ, ಹೆಬ್ಬಾಕ ರವಿಶಂಕರ್, ಬಿ ಎಸ್ ನಾಗೇಶ್, ಗುಳೂರು ಶಿವಕುಮಾರ್, ದೊಡ್ಡಮನೆ ಗೋಪಾಲಗೌಡ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.