ಬಿಜೆಪಿಯಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ: ಕೆ.ಸಿ.ವೇಣುಗೋಪಾಲ್‍

ಬೆಂಗಳೂರು

    ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಸರವನ್ನು ಬಿಜೆಪಿ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದೆ ಎಂದು ಕಾಂಗ್ರೆಸ್‍ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ ಆರೋಪಿಸಿದ್ದಾರೆ.

    ಸೋಮವಾರ ಇಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಐಟಿ, ಇಡಿ, ಸಿಬಿಐಗಳನ್ನ ದುರ್ಬಳಕೆ ಮಾಡಿಕೊಂಡು ಶಾಸಕರನ್ನ ಬೆದರಿಸಿದೆ. ಬಿಜೆಪಿಗೆ ಸೇರುವಂತೆ ಶಾಸಕರನ್ನು ಬೆದರಿಸುವ ಕೆಲಸ ಮಾಡಿದೆ. ಆರು ಬಾರಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ಬಿಜೆಪಿ ನಾಯಕರು ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದರು.

     ಸಮ್ಮಿಶ್ರ ಸರ್ಕಾರ ಮುಂದುವರೆಯುವ ಬಗ್ಗೆ ತಮಗೆ ಈಗಲೂ ವಿಶ್ವಾಸ ಇದೆ. ಕೆಲ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುದೀರ್ಘ ಚರ್ಚೆ ನಡೆಸಿದ್ದೇವೆ. ಇಂದು ಕೂಡ ಸಚಿವರ ಜೊತೆ ಸಭೆ ನಡೆಸಿದ್ದೇವೆ.ಎಲ್ಲಾ ಸಚಿವರ ರಾಜೀನಾಮೆ ನಿರ್ಧಾರ ಆಗಿದೆ ಎಂದು ಅವರು ಹೇಳಿದ್ದಾರೆ.

     ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆಯೇ ಇಲ್ಲ. ಕಳೆದ ಚುನಾವಣೆಯಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಜನರು ತೀರ್ಪು ಕೊಟ್ಟಿಲ್ಲ. ಬಿಜೆಪಿಗಿಂತಲೂ ಕಾಂಗ್ರೆಸ್ ಗೆ ಹೆಚ್ಚು ಶೇಕಡಾವಾರು ಮತ ಗಳಿಸಿದೆ. ಜೆಡಿಎಸ್‍, ಪಕ್ಷೇತರರು ಸೇರಿ ಮೈತ್ರಿಕೂಟದ ಸಂಖ್ಯಾಬಲ 120 ಆಗಲಿದೆ.ಈ ಸಂಖ್ಯಾಬಲ ಬಿಜೆಪಿಗೆ ಇಲ್ಲ ಎಂದು ಅವರು ಹೇಳಿದರು.

     ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮ್ಮಿಶ್ರ ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಪದೇ ಪದೇ ಮಾಡುತ್ತಿದೆ. ರಾಜ್ಯವಷ್ಟೇ ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಬಿಜೆಪಿಯ ಎಲ್ಲ ನಾಯಕರು ಸರ್ಕಾರ ಅಸ್ಥಿರಗೊಳಿಸಲು ಬೆಂಬಲಿಸುತ್ತಿದ್ದಾರೆ. ಆದರೆ, ತಾವೇನು ಸರ್ಕಾರ ಬೀಳಿಸುತ್ತಿಲ್ಲ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಇದು ನಿಜಕ್ಕೂ ಬಿಜೆಪಿಯವರ ದೊಡ್ಡ ನಾಟಕ. ಈಗ ಕುದುರೆ ವ್ಯಾಪಾರವನ್ನು ಅದು ಆರಂಭಿಸಿದೆ. ಕಾಂಗ್ರೆಸ್ ಎಂದೂ ಈ ರೀತಿಯ ಕೆಲಸ ಮಾಡಿಲ್ಲ. 2004ರಲ್ಲಿ ಯಡಿಯೂರಪ್ಪ ಇದೇ ಕೆಲಸವನ್ನ ಮಾಡಿದ್ದರು. ಆಪರೇಷನ್‍ ಕಮಲದ ಮೂಲಕ ಕಾಂಗ್ರೆಸ್‍ ಶಾಸಕರ ರಾಜೀನಾಮೆ ಕೊಡಿಸಿದ್ದರು. ಇದೀಗ ಆರು ಬಾರಿ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಏನೂ ಸಮಸ್ಯೆ ಆಗುವುದಿಲ್ಲ.ಸರ್ಕಾರ ನಿರಾತಂಕವಾಗಿ ಮುಂದುವರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ‘ಯಾವ ಶಾಸಕರೂ ಕೂಡ ಆಮಿಷಗಳಿಗೆ ಬಲಿಯಾಗಬೇಡಿ. ಪಕ್ಷ‌ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಹೊಸದಾಗಿ‌ ಮಂತ್ರಿ ಮಂಡಲ ಪುನಾರಚನೆ ಆಗಲಿದೆ. ಅಧಿವೇಶನಕ್ಕೆ‌ ಮೊದಲೋ, ನಂತರವೋ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಸಂಬಂಧ ಈಗಾಗಲೇ ಎಲ್ಲಾ ಸಚಿವರ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದೇವೆ.’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap