ದೇಶದ ಜನರಲ್ಲಿ ಒಡಕು ಮೂಡಸುತ್ತಿರುವ ಕೇಂದ್ರ ಸರ್ಕಾರ : ಸಿ ಎಂ ಇಬ್ರಾಹಿಂ

ರಾಣೇಬೆನ್ನೂರು

    ದೇಶದಲ್ಲಿ ಮುಸ್ಲಿಂ, ದಲಿತ, ಲಿಂಗಾಯತರಲ್ಲಿ ಒಡಕು ತಂದು ಅಧಿಕಾರಕ್ಕಾಗಿ ಎಲ್ಲ ಜನತೆಗೆ ವಿಷ ಉಣಿಸುವ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸುತ್ತೇವೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

    ನಗರದ ಮುನ್ಸಿಫಲ್ ಹೈಸ್ಕೂಲ್ ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆ ಹಿಂಪಡೆಯುವ ಕುರಿತು ಸಂವಿಧಾನ ರಕ್ಷಿಸಿ ದೇಶ ಉಳಿಸಿ ಜನಾಂದೋಲನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ಮಾನವ ಸಮಾಜದಲ್ಲಿ ಧರ್ಮದ ಮೇಲೆ ರಾಜಕೀಯ ಮಾಡಿದರೆ ದೇಶದ ಅಭಿವೃದ್ಧಿ ಆಗದು. ಎಲ್ಲ ಜನತೆಯ ಮನಸ್ಸನ್ನು ಕ್ರೂಢಿಕರಿಸಿ ಒಮ್ಮತದ ನಿರ್ಧಾರದೊಂದಿಗೆ ಮುನ್ನಡೆಯಬೇಕು. ಇಸ್ಲಾಂ ಧರ್ಮವು ಮಾನವೀಯತೆಯ ನೆಲೆಗಟ್ಟನ್ನು ಆಧರಿಸಿದೆ ಅಂತಹವರಿಗೆ ವಿಶ್ವಾಸ ಮೂಡಿಸಲು ಮುಂದಾಗಿ ಕಪಟರಂತೆ ವರ್ತಿಸುತ್ತ ಬಾಯಿಯಲ್ಲಿ ಹೇಳುವುದು ಒಂದು ಹೃದಯದಲ್ಲಿ ಇನ್ನೊಂದು ಮಾತನ್ನಿಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

     ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಬಡ ಜನರು ಬೀದಿಗೆ ಬೀಳುವಂತಾಗಿದೆ. ಆನ್‍ಲೈನ್ ಮೂಲಕ ವ್ಯಾಪಾರ ವಹಿವಾಟು ಹೆಚ್ಚಿರುವುದರಿಂದ ಆರ್ಥಿಕ ಮುಗ್ಗಟ್ಟು ಉಲ್ಭಣಗೊಂಡು ಜಿಡಿಪಿ ಕುಸಿದಿದೆ. ಅಂಬಾನಿ-ಅದಾನಿಯಂತರಿಗೆ ಮನ್ನಣೆ ಹಾಕುತ್ತಾ ಬಡವರ ಅಭಿವೃದ್ಧಿಗೆ ಕಡೆಗಣಿಸುತ್ತಿರುವುದು ಖೇದಕರ ಸಂಗತಿ. ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಸಂಭವಿಸಿದರೂ ಇದು ವರೆಗೂ ಸಂಪೂರ್ಣವಾದ ಅನುದಾನ ಬಿಡುಗಡೆಯಾಗಿಲ್ಲ. ರೈತರ ಸಾಲ ಮನ್ನಾ ಸೇರಿದಂತೆ ಜನ ಸಾಮಾನ್ಯರು ಕಟ್ಟಿದ ಜಿಎಸ್‍ಟಿ ಹಣ ಕರ್ನಾಟಕಕ್ಕೆ ವಾಪಸ್ ಬಂದಿಲ್ಲ ಒಟ್ಟಾರೆ ದೇಶ ಅದೋಗತಿಗೆ ಸಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

    ಕರ್ನಾಟಕ ರಾಜ್ಯದಲ್ಲಿನ 6 ಕೋಟಿ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಆದರೆ ಸ್ವಾತಂತ್ರ್ಯದ ಹೋರಾಟದ ನೆನಪು ಮತ್ತೆ ಮರಕಳಿಸುತ್ತಿರುವಂತೆ ಭಾಸವಾಗುತ್ತಿದೆ. ದೇಶದ ಪರಿಸ್ಥಿತಿ ವಿಷಮ ಸ್ಥಿತಿಗೆ ಹೊಗುತ್ತಿದೆ ಆದ್ದರಿಂದ ಯಾವುದೇ ಸಂದರ್ಭದಲ್ಲಿಯೂ ಹೋರಾಟಕ್ಕೆ ಸನ್ನದ್ಧರಾಗಿರಿ. ಇದು ಕೇವಲ ಒಂದು ಜಾತಿಗೆ ಸೀಮಿತವಾದ ಹೋರಾಟವಲ್ಲ ಎಲ್ಲ ಸಮುದಾಯದ ಸ್ವಾಮಿಗಳ, ಮಠಾಧೀಶರನ್ನು ಒಗ್ಗೂಡಿಸಿರಿ ಎಂದರು.

     ದೇಶಕ್ಕೆ ಮಹಾತ್ಮರೆನಿಸಿದ ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಎರಡು ಕಣ್ಣುಗಳಿದ್ದಂತೆ. ಅಂತಹ ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಬೆಳೆಸಿಕೊಂಡು ಒಗ್ಗೂಡೋಣ. ಬಿಜೆಪಿಯವರು ಇವಿಎಂ ಮಷೀನ್ ಇರುವವರೆಗೆ ಮಾತ್ರ ಅಧಿಕಾರದ ಚುಕ್ಕಾಣಿಯಲ್ಲಿ ಇರುತ್ತಾರೆ ಅದೇ ಬ್ಯಾಲೇಟ್ ಪೇಪರ್ ಬಳಸಿ ಚುನಾವಣೆ ಎದುರಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

    ಮುಷ್ತಾಕ್ ಅಹ್ಮದ್ ರಿಜ್ವಿ, ನ್ಯಾಯವಾದಿ ನಾಗರಾಜ ಕುಡಪಲಿ, ಏಕನಾಥ ಭಾನುವಳ್ಳಿ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾರ್ಕಿ, ರವೀಂದ್ರಗೌಡ ಪಾಟೀಲ, ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಪುಟ್ಟಪ್ಪ ಮರಿಯಮ್ಮನವರ ಮಾತನಾಡಿದರು.

    ಶೇರುಖಾನ ಕಾಬೂಲಿ, ಇಕ್ಬಾಲಸಾಬ ರಾಣೇಬೆನ್ನೂರು, ಮಧು ಕೋಳಿವಾಡ, ಬಸವನಗೌಡ ಮರದ, ರತ್ನಾಕರ ಕುಂದಾಪುರ, ನಿತ್ಯಾನಂದ ಕುಂದಾಪುರ, ಜಬ್ಬಾರಖಾನ್ ಹೊನ್ನಾಳಿ, ಶಾಕೀರ ಸನದಿ, ಎಂ.ಎಂ.ಹಿರೇಮಠ, ನೂರುಲ್ಲಾ ಖಾಜಿ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link