ಚಿತ್ರದುರ್ಗ:
ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರುಗಳ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಬಿಜೆಪಿ.ನಾಯಕರುಗಳ ಕುತಂತ್ರವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಬಿಜೆಪಿ.ನಾಯಕರುಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸೂಚನೆಯಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್ತಾಹೀರ್ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನಿವಾಸಕ್ಕೆ ತೆರಳಿದ ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆಗಳ ಕಾಲ ಬಿಜೆಪಿ.ನಾಯಕರುಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಿಗದ ಕಾರಣ ನಿರಾಸೆಗೊಂಡ ಬಿಜೆಪಿ.ಅಧಿಕಾರ ಕೈತಪ್ಪಿ ಹೋಗಿದ್ದರಿಂದ ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಆಡಳಿತ ನಡೆಸಲು ಬಿಡದೆ ಒಂದಲ್ಲ ಒಂದು ಹುಳುಕುಗಳನ್ನು ಹುಡುಕುತ್ತಾ ಆರಂಭದಿಂದಲೇ ಸರ್ಕಾರಕ್ಕೆ ಅಡ್ಡಿಪಡಿಸುತ್ತಲೇ ಬರುತ್ತಿದೆ. ದೇಶದ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಹಾಗೂ ರಾಜ್ಯ ಬಿಜೆಪಿ.ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವರುಗಳು ಕಾಂಗ್ರೆಸ್ ಶಾಸಕರುಗಳನ್ನು ಖರೀಧಿಸಲು ಈಗಾಗಲೆ ರೆಸಾರ್ಟ್ಗಳಲ್ಲಿ ಬೀಡು ಬಿಟ್ಟಿದ್ದಾರೆ. ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿ.ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ತಂತ್ರಗಾರಿಕೆ ಫಲಿಸುವುದಿಲ್ಲ .
ಇನ್ನಾದರೂ ಬಿಜೆಪಿ.ನಾಯಕರುಗಳು ಅಧಿಕಾರದ ಆಸೆ ಬಿಟ್ಟು ರಾಜ್ಯದ ಅಭಿವೃದ್ದಿಗೆ ಕೈಜೋಡಿಸಲಿ ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕುವ ವಿಚಾರ ತಿಳಿದ ಪೊಲೀಸರು ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಶಾಸಕರ ನಿವಾಸದ ಪ್ರವೇಶದ ಗೇಟ್ ಬಂದ್ ಮಾಡಿ ಬ್ಯಾರಿಕೇಡ್ಗಳನ್ನು ಅಡ್ಡ ಇಟ್ಟು ಪ್ರತಿಭಟನಾಕಾರರು ಒಳಹೋಗದಂತೆ ತಡೆದರು.
ಇದರಿಂದ ಮತ್ತಷ್ಟು ಕುಪಿತಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ.ನಾಯಕರುಗಳ ವಿರುದ್ದ ಧಿಕ್ಕಾರಗಳನ್ನು ಕೂಗುತ್ತ ರಸ್ತೆಯಲ್ಲಿಯೇ ಕುಳಿತು ಆಕ್ರೊಶ ವ್ಯಕ್ತಪಡಿಸಿದ್ದರಿಂದ ಕೆಲವು ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ, ವಸೀಂ, ಅಶೋಕ್ನಾಯ್ಡು, ಸಾದತ್ಬಗ್ಗು, ಜಮೀಲ್, ಆಜಾಂ, ಇಮ್ತಿಯಾಜ್, ಫಾರೂಖ್, ಯೂನೂಸ್, ಕರಿಯಪ್ಪ, ರೆಹಮಾನ್, ಶಶಾಂಕ್, ಖುದ್ದೂಸ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ