ಭಾಜಪ ಕಾರ್ಯಕರ್ತರ ಸಮಾವೇಶ

ಚಿಕ್ಕನಾಯಕನಹಳ್ಳಿ

        ಹೆಚ್.ಎಂ.ಟಿ ಎಂದರೆ ಕಂಪನಿಯೂ ಅಲ್ಲ, ಹೆಗಲ ಮೇಲೆ ಟವಲ್ ಸಹ ಅಲ್ಲ, ಹೆಚ್‍ಎಂ.ಟಿ ಎಂದರೆ ಹಾಸನ, ಮಂಡ್ಯ, ತುಮಕೂರು, ಈ ಮೂರು ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್ ಕುಟುಂಬದ ರಾಜಕಾರಣವಿದೆ, ಎಚ್.ಎಂ.ಟಿ.ಯಂತಹ ಸ್ಥಿತಿಯೇ ದೇವೇಗೌಡರ ರಾಜಕಾರಣಕ್ಕೂ ಬಂದೊದಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆ ವ್ಯಂಗ್ಯವಾಡಿದರು.

       ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಭಾಜಪ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಜೆಡಿಎಸ್‍ಗೆ ರಾಜ್ಯದ ಲೋಕಸಭಾ ಕ್ಷೇತ್ರದಲ್ಲಿ 12ಸ್ಥಾನ ಎಂದು ಹೇಳಲಾಗುತ್ತಿತ್ತು ಆದರೆ ನೀಡಿದ್ದು 8ಸ್ಥಾನ, ಜೆಡಿಎಸ್ ಪಕ್ಷದವರು ಸ್ಪರ್ಧಿಸಿರುವುದು 6ಸ್ಥಾನ ಅದರಲ್ಲಿ ದೇವೇಗೌಡರ ಕುಟುಂಬವೇ 3ಕ್ಷೇತ್ರದಲ್ಲಿ ಸ್ಪರ್ಧಿಸಿದೆ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತಿದೆ ಎಂದ ಅವರು, ಈ ವಯಸ್ಸಿನಲ್ಲಿ ದೇವೇಗೌಡರಿಗೆ ರಾಜಕಾರಣ ಅಗತ್ಯವಿರಲಿಲ್ಲ, ಅವರು ನಿವೃತ್ತಿಯಾಗಬೇಕಾಗಿತ್ತು, ದೇವೇಗೌಡರು ತಮ್ಮ ರಾಜಕಾರಣದಲ್ಲಿ ತುಮಕೂರಿನ ಅಭಿವೃದ್ದಿ ಬಗ್ಗೆ ಎಂದಾದರೂ ಮಾತನಾಡಿದ್ದರೆ ನಾನು ಅವರ ಬಗ್ಗೆ ಟೀಕೆ ಮಾಡುತ್ತಿರಲಿಲ್ಲ ಆದರೆ ಅವರ ಕುಟುಂಬದ ಸಮಸ್ಯೆ ಎದುರಿಸುವುದಕ್ಕಾಗಿ ತುಮಕೂರಿಗೆ ಆಗಮಿಸಿದ್ದಾರೆ ಎಂದು ದೂರಿದರು.

      ರಾಜ್ಯದಲ್ಲಿ ಎಂಟು ಸೀಟ್ ಪಡೆದರೆ ಲೋಕಸಭೆಯಲ್ಲಿ ಗಟ್ಟಿಯಾಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ದೇವೇಗೌಡರು, ರಾಜ್ಯದಲ್ಲಿನ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ತುಮಕೂರು ಸೇರಿದಂತೆ ಹಳೆ ಮೈಸೂರು ಭಾಗದ 3ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ಅಲೆಯಿದೆ, ರಾಜ್ಯದಲ್ಲಿ 20ಕ್ಷೇತ್ರಗಳನ್ನು ನಾವು ಪಡೆಯಲಿದ್ದು ದೇಶದಲ್ಲಿ ಬಿಜೆಪಿ ಮೂರು ನೂರು ಸೀಟ್ ಪಡೆಯಲಿದೆ ಎಂದು ಮಾಧ್ಯಮ ಸಮೀಕ್ಷೆಗಳೇ ಹೇಳುತ್ತಿವೆ ಎಂದ ಅವರು, ದೇಶದಲ್ಲಿ ಮೊದಲನೇ ಸಲ ಮತ ಹಾಕುತ್ತಿರುವ ಯುವ ಮತದಾರರು ಬಿಜೆಪಿ ಪಕ್ಷವನ್ನು ಹಾಗೂ ಪ್ರಧಾನಿ ನರೇಂದ್ರಮೋದಿಯವರ ಆಡಳಿತವನ್ನು ನೋಡುತ್ತಿದ್ದಾರೆ

         ಇವರ್ಯಾರೂ ಜಾತಿ, ಮತ, ಧರ್ಮದ ಮೊರೆ ಹೋಗುವುದಿಲ್ಲ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್‍ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ವಿಧಾನಸಭೆ, ಜಿ.ಪಂ, ತಾ.ಪಂ, ಸಹಕಾರ ಸಂಘಗಳ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಒಂದಾಗಿಯೇ ಮಾಧುಸ್ವಾಮಿರವರ ವಿರುದ್ದವಾಗಿ ಚುನಾವಣೆ ನಡೆಸಿರುವುದು, ಹಾಗಾಗಿ ಅವರ ಈ ಎರಡೂ ಪಕ್ಷಗಳ ರಾಜಕೀಯ ಒಳಸಂಚುಗಳು ತಿಳಿದಿದೆ, ನಾವೇ ಜಯಶೀಲರಾಗುವುದು ಎಂದ ಅವರು, ಮಾಧುಸ್ವಾಮಿರವರು ಹಾಗಲವಾಡಿ ಭಾಗದಲ್ಲಿ ಸಂಚರಿಸಿದಾಗ ಪಡೆದ ಅನುಭವವೆಂದರೆ ಆ ಹೋಬಳಿಯಲ್ಲಿ ಮೊದಲು ಬಿಜೆಪಿ ಪಕ್ಷಕ್ಕೆ ದೊರೆಯುತ್ತಿದ್ದ ಮತಕ್ಕಿಂತ ಈ ಬಾರಿ ಹದಿನೈದು ಸಾವಿರಕ್ಕೂ ಹೆಚ್ಚು ಮತಗಳು ದೊರಕುತ್ತವೆ ಎಂಬ ಸ್ಥಿತಿ ನಿರ್ಮಾಣವಾಗಿದೆ, ಬೇರೆ ಭಾಗಗಳಲ್ಲಿಯೂ ಮತಗಳು ಹೆಚ್ಚಾಗುತ್ತಿವೆ ಎಂದರೆ ತಾಲ್ಲೂಕಿನಲ್ಲಿ ಬಿಜೆಪಿ ಮತಗಳು ಇನ್ನಷ್ಟು ಹೆಚ್ಚಾಗಬೇಕು ಎಂದರು.

          ಬಿ.ಜೆ.ಪಿ.ಮುಖಂಡರಾದ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ದೇವೇಗೌಡರು ಎಂದೂ ನಮ್ಮ ಜಿಲ್ಲೆಯ ಬಗ್ಗೆ ಅಭಿಮಾನ ತೋರಿದವರಲ್ಲ, ಅವರ ಕುಟುಂಬದವರು ನಮ್ಮ ಪಾಲಿನ ನೀರಿನ್ನು ಕೊಡುವ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ ಎಂದರಲ್ಲದೆ, ದೇವೇಗೌಡರು ಗೆದ್ದರೆ ಜನರಿಗೆ ಸಿಗುವವರಲ್ಲ, ಇತ್ತ ತಲೆಯನ್ನೂ ಹಾಕುವುದಿಲ್ಲ. ಆದೇ ಜಿ.ಎಸ್.ಬಸವರಾಜು ಗೆದ್ದರೆ ಸದಾ ಜನರ ನಡುವೆಯೇ ಇರುತ್ತಾರೆ, ಸದಾ ತುಮಕೂರಿನಲ್ಲೇ ಸಿಗುತ್ತಾರೆ ಎಂದರು.

         ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾಚನ್ನಬಸವಯ್ಯ ಮಾತನಾಡಿ, ಮಾಜಿ ಶಾಸಕರು ಹತ್ತು ವರ್ಷ ಆಡಳಿತ ಮಾಡಿದರೂ ತಾಲ್ಲೂಕು ಅಭಿವೃದ್ದಿಯಾಗಲಿಲ್ಲ ಆದರೆ ಶಾಸಕರಾದ ಜೆ.ಸಿ.ಮಾಧುಸ್ವಾಮಿರವರು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಅದೇ ರೀತಿ ದೇವೇಗೌಡರು ಚುನಾವಣೆಯಲ್ಲಿ ಗೆಲುವು ಕಂಡರೆ ಜಿಲ್ಲೆಯ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಹುಡುಕಿಕೊಂಡು ಹೋಗಬೇಕಾಗುತ್ತದೆ, ಹೋದರೂ ಅವರ ಹಿಂದೆ ಇರುವವರು ಮಾತನಾಡಿಸಲು ಬಿಡುವುದಿಲ್ಲ ಇಂತಹ ಸ್ಥಿತಿ ನಿರ್ಮಾಣವಾಗುತ್ತದೆ ಜಿಲ್ಲೆಯ ಜನತೆ ಯೋಚನೆ ಮಾಡಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜುರವರನ್ನು ಗೆಲ್ಲಿಸಿ ಶಾಸಕರೊಂದಿಗೆ ತೆರಳಿ ಅಭಿವೃದ್ದಿ ವಿಷಯ ದಲ್ಲಿ ಪ್ರಶ್ನಿಸಬಹುದು ಎಂದರು.

          ಬಿಜೆಪಿ ಮುಖಂಡ ಮಿಲ್ಟ್ರಿಶಿವಣ್ಣ ಮಾತನಾಡಿ, ನರೇಂದ್ರಮೋದಿಯವರ ಆಡಳಿತದ ನಂತರ ದೇಶದ ಸೈನ್ಯ ಬಲಿಷ್ಠಗೊಳ್ಳುತ್ತಿದೆ, ಶತೃ ರಾಷ್ಟ್ರಗಳು ಭಯಭೀತರಾಗುತ್ತಿದ್ದಾರೆ ಇದು ಈಗೆ ಮುಂದುವರೆಯಬೇಕಾದರೆ ಜಿಲ್ಲೆಯಲ್ಲಿ, ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

          ಕಾರ್ಯಕ್ರಮದಲ್ಲಿ ತಾ.ಬಿಜೆಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್, ಪ್ರಧಾನಕಾರ್ಯರ್ಶಿ ಎ.ನಿರಂಜನಮೂರ್ತಿ, ಜಿ.ಪಂ.ಸದಸ್ಯೆ ಮಂಜುಳಮ್ಮ, ತಾ.ಪಂ.ಸದಸ್ಯ ಕೇಶವಮೂರ್ತಿ, ಪುರಸಭಾ ಸದಸ್ಯ ಸಾಮಿಲ್‍ಬಾಬು, ಮುಖಂಡರಾದ ಕ್ಯಾಪ್ಟನ್‍ಸೋಮಶೇಖರ್, ಮಾಜಿ ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ, ರೂಪ, ಹಳೆಮನೆಶಿವನಂಜಪ್ಪ, ಬರಗೂರುಬಸವರಾಜು, ಶಶಿಕಲಾಜಯದೇವ್, ಜಯದೇವ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link