ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ : ಸೇಡಿನ ಕ್ರಮದ ವಿರುದ್ಧ ರಾಜ್ಯಪಾಲರಿಗೆ ದೂರು

ತುಮಕೂರು

        ರಾಜ್ಯದ ಸಮ್ಮಿಶ್ರ ಸರ್ಕಾರ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಕ್ರಮಗಳನ್ನು ವಿರೋಧಿಸಿ ಬಿಜೆಪಿಯು ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿತು ಹಾಗೂ ರಾಜ್ಯ ಸರ್ಕಾರದ ಸೇಡಿನ ಕ್ರಮದ ವಿರುದ್ಧ ರಾಜ್ಯಪಾಲರಿಗೆ ದೂರನ್ನೂ ಸಲ್ಲಿಸುತ್ತ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡಿದೆ.

      ಮಾಜಿ ಸಂಸದ ಜಿ.ಎಸ್.ಬಸವರಾಜು, ತುಮಕೂರು ನಗರದ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ನಗರ ಬಿಜೆಪಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಹಿಂದುಳಿದ ವರ್ಗಗಳ ವಿಭಾಗದ ನಗರಾಧ್ಯಕ್ಷ ವೇದಮೂರ್ತಿ, ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ, ಮುಖಂಡರುಗಳಾದ ಅಣೆತೋಟ ಶ್ರೀನಿವಾಸ್, ರಾಮಚಂದ್ರಪ್ಪ, ಗಣೇಶ್ ಬಾವಿಕಟ್ಟೆ, ಶ್ರೀನಿವಾಸ್, ಬಿ.ಎನ್.ಶಂಭು ಮೊದಲಾದವರು ಪಾಲ್ಗೊಂಡಿದ್ದರು.

       ಈ ಸಂದರ್ಭದಲ್ಲಿ ಜಿ.ಎಸ್.ಬಸವರಾಜು, ಜ್ಯೋತಿಗಣೇಶ್ ಮತ್ತು ಶಿವಪ್ರಸಾದ್ ಮಾತನಾಡಿ ರಾಜ್ಯ ಸರ್ಕಾರದ ಕ್ರಮವನ್ನು ಮತ್ತು ಎಂ.ಬಿ.ಪಾಟೀಲರನ್ನು ಕಟುವಾಗಿ ಟೀಕಿಸಿದರು.

ರಾಜ್ಯಪಾಲರಿಗೆ ಮನವಿ

      ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ರಾಜ್ಯಪಾಲರಿಗೆ ಹೆಸರಿಸಲಾದ ಮನವಿ ಪತ್ರವನ್ನು ನೀಡಿ, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಲಾಯಿತು.

       ಕಳೆದ ಕೆಲವು ತಿಂಗಳುಗಳಿಂದ ಸಮ್ಮಿಶ್ರ ಸರ್ಕಾರವು ಮಾಧ್ಯಮವೂ ಸೇರಿದಂತೆ ರಾಜ್ಯದ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಈವರೆಗೆ ಕ್ರಮ ಜರುಗಿಸಿಲ್ಲ. ಬದಲಿಗೆ ರಾಜಕೀಯ ಎದುರಾಳಿಗಳ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಸರ್ಕಾರ ಮುಂದಾಗಿದೆ” ಎಂದು ಸದರಿ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

       ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಜೆಡಿಎಸ್ ಶಾಸಕ ನಾರಾಯಣಗೌಡ ವಿರುದ್ಧ ದೂರು ಸಲ್ಲಿಸಿದ್ದರೂ, ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಆದರೆ ಸರ್ಕಾರವನ್ನು ಟೀಕಿಸಿದ ವಿರೋಧಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸಿ ಭಯದ ವಾತಾವರಣ ಉಂಟುಮಾಡಲಾಗುತ್ತಿದೆ. ರಾಜ್ಯದಲ್ಲಿ ತುರ್ತುಪರಿಸ್ಥಿತಿಯ ಕರಾಳ ನೆನಪು ಮರುಕಳಿಸುವಂತಾಗುತ್ತಿದೆ ಎಂದು ಸದರಿ ಮನವಿಯಲ್ಲಿ ದೂರಲಾಗಿದೆ.

       ಸ್ವತಃ ಮುಖ್ಯಮಂತ್ರಿಗಳು ಮಾಧ್ಯಮ ಪ್ರತಿನಿಧಿಗಳನ್ನು ದೂಷಿಸುವುದು, ಮಾಧ್ಯಮಗಳನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡುವುದು ಪ್ರಜಾತಂತ್ರದ ನಾಲ್ಕನೇ ಸ್ಥಂಭವಾದ ಮಾಧ್ಯಮಗಳನ್ನು ನಿಯಂತ್ರಿಸುವ ಸರ್ವಾಧಿಕಾರಿ ಮನೋಭಾವದ ಪ್ರತೀಕವಾಗಿದೆ. ರಾಜ್ಯ ಸರ್ಕಾರದ ಧೋರಣೆಯೇ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಬಿಜೆಪಿ ಹೇಳಿದೆ.

      ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಯ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳಿಸಲು ಸ್ವತಃ ಗೃಹಸಚಿವ ಎಂ.ಬಿ.ಪಾಟೀಲರು ವಿಶೇಷ ಆಸಕ್ತಿ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಹೇಶ್ ವಿಕ್ರಂ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್, ಹೇಮಂತ್ ಕುಮಾರ್ ಮತ್ತು ಅಜಿತ್ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರವಾದ ಕೇಸುಗಳನ್ನು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗಿದೆ.

       ಇವರೆಲ್ಲರೂ ಬಿಜೆಪಿ ಬಗ್ಗೆ ಅಭಿಮಾನ ಹೊಂದಿದ್ದಾರೆಂಬ ಕಾರಣಕ್ಕೆ ಇವರ ವಿರುದ್ಧ ಸೇಡಿನ ಕ್ರಮ ಜರುಗಿಸಲಾಗಿದೆ ಎಂದು ಬಿಜೆಪಿಯು ಮನವಿ ಪತ್ರದಲ್ಲಿ ದೂರಿದೆ. ಗೃಹ ಸಚಿವ ಎಂ.ಬಿ.ಪಾಟೀಲರು ಬರೆದಿದ್ದಾರೆನ್ನಲಾದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಕಳಿಸಿದ ಕಾರಣಕ್ಕಾಗಿ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ಕ್ರಮ ಜರುಗಿಸಲಾಗುತ್ತಿದೆ ಎಂದು ಸದರಿ ಪತ್ರದಲ್ಲಿ ಉದಾಹರಿಸಲಾಗಿದೆ.

        ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ, ಎಲ್ಲರ ಹಕ್ಕು ಮತ್ತು ಸ್ವಾತಂತ್ರೃವನ್ನು ರಕ್ಷಿಸುವ ಕೆಲಸ ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಬೇಕು ಹಾಗೂ ರಾಜಕೀಯ ದ್ವೇಷವನ್ನು ತೊರೆದು ಆಡಳಿತ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ರಾಜ್ಯಪಾಲರನ್ನು ಜಿಲ್ಲಾ ಬಿಜೆಪಿ ಈ ಮನವಿ ಪತ್ರದಲ್ಲಿ ಕೋರಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap