ಬಿಜೆಪಿಯಿಂದ ಮುಂದಿನ ತಿಂಗಳು ಕ್ವಿಟ್ ಯೂಸ್‍ಲೆಸ್ ಮಿನಿಸ್ಟರ್ಸ್ ಹೋರಾಟ

ಬೆಂಗಳೂರು

      ರಾಜ್ಯ ಬಿಜೆಪಿಯಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳ ಅಸಮಾಧಾನ ಜ್ವಾಲಾಮುಖಿಯ ರೂಪ ಪಡೆಯುತ್ತಿದ್ದು ಮಾರ್ಚ್ ಅಂತ್ಯದ ವೇಳೆಗೆ ಕ್ವಿಟ್ ಯೂಸ್‍ಲೆಸ್ ಮಿನಿಸ್ಟರ್ಸ್ ಹೋರಾಟಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

      ಬಜೆಟ್ ಅಧಿವೇಶನಕ್ಕೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಮಾರ್ಚ್ ಅಂತ್ಯದವರೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸದಿರಲು ಅತೃಪ್ತರು ತೀರ್ಮಾನಿಸಿದ್ದು ಅಧಿವೇಶನ ಮುಗಿದ ಕೂಡಲೇ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭಿಸಲು ತೀರ್ಮಾನಿಸಿದ್ದಾರೆ.

      ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಶಶಿಕಲಾ ಜೊಲ್ಲೆ,ಬಸವರಾಜ ಬೊಮ್ಮಾಯಿ ಸೇರಿದಂತೆ ಕನಿಷ್ಟ ಅರ್ಧ ಡಜನ್ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಬೇಕು.ದಕ್ಷರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅತೃಪ್ತರು ಕೂಗೆಬ್ಬಿಸಿದ್ದಾರೆ.ವಿಧಾನಮಂಡಲ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಮೊಗಸಾಲೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ಆರಂಭಿಸಿರುವ ಶಾಸಕರು ತಮ್ಮ ತಮ್ಮ ಅಸಮಾಧಾನವನ್ನು ಪರಸ್ಪರ ಹಂಚಿಕೊಳ್ಳತೊಡಗಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಸನ್ನಿವೇಶದ ಕೂಸಾಗಿರಬಹುದು.ಹೊರಗಿನಿಂದ ಬಂದವರಿಗೆ ಮಂತ್ರಿ ಸ್ಥಾನ ನೀಡುವ ಅನಿವಾರ್ಯತೆಗೂ ಒಳಗಾಗಿರಬಹುದು.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದವರಿಗೆ ಮಂತ್ರಿಗಿರಿ ನೀಡಿರುವುದು ಸರಿ.ಮತ್ತು ಅದು ಅನಿವಾರ್ಯ ಕೂಡಾ.ಯಾಕೆಂದರೆ ಅವರಿಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ.

     ಆದರೆ ಪಕ್ಷದ ವತಿಯಿಂದ ಮಂತ್ರಿಗಳಾಗಿರುವವರ ಪೈಕಿ ಕನಿಷ್ಟ ಅರ್ಧ ಡಜನ್ ಮಂದಿಯನ್ನು ಮಂತ್ರಿ ಮಂಡಲದಿಂದ ಕಿತ್ತು ಹಾಕಬೇಕು.ಅದೇ ರೀತಿ ಉತ್ತರ ಕರ್ನಾಟಕ,ಮಧ್ಯ ಕರ್ನಾಟಕ,ಕರಾವಳಿ ಕರ್ನಾಟಕ ಭಾಗಗಳಿಂದ ದಕ್ಷರು,ಸಮರ್ಥರನ್ನು ಮಂತ್ರಿ ಮಂಡಲಕ್ಕೆ ನೇಮಕ ಮಾಡಬೇಕು.

    ಹಾಲಿ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿರುವ ಲಕ್ಷ್ಮಣ ಸವದಿ ಅವರನ್ನು ತೆಗೆಯಬೇಕು.ಅವರ ಜಾಗಕ್ಕೆ ಹಿರಿಯ ನಾಯಕ ಉಮೇಶ್ ಕತ್ತಿಯವರನ್ನು ತರಬೇಕು.ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಪಕ್ಷದ ಶಕ್ತಿ ಕುಗ್ಗಿ ಹೋಗಲಿದೆ.ಇದೇ ರೀತಿ ಶಶಿಕಲಾ ಜೊಲ್ಲೆ,ಬಸವರಾಜ ಬೊಮ್ಮಾಯಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು. ರಾಜೂಗೌಡ, ರೇಣುಕಾಚಾರ್ಯ ,ಜಿ.ಹೆಚ್.ತಿಪ್ಪಾರೆಡ್ಡಿ ಅವರಂತವರಿಗೆ ಅವಕಾಶ ನೀಡಬೇಕು.

        ಹಾಗೆಯೇ ಹೊರಗಿನಿಂದ ಬಂದವರಲ್ಲಿ ಬೆಂಗಳೂರಿನ ಮೂವರು ಮಂತ್ರಿಗಳಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಮಂತ್ರಿಗಳಾಗಿರುವ ಬೆಂಗಳೂರಿನ ಸುರೇಶ್ ಕುಮಾರ್ ಸೇರಿದಂತೆ ಕೆಲವರನ್ನು ತೆಗೆದುಹಾಕಬೇಕು.ಹೀಗೆ ಮಂತ್ರಿ ಮಂಡಲದಲ್ಲಿರುವ ಹಲವರನ್ನು ಹೊರಗೆ ಹಾಕಿ ಬೇರೆಯವರಿಗೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ಶಕ್ತಿ ಕುಗ್ಗಿ ಹೋಗಲಿದೆ ಎಂದು ಅತೃಪ್ತ ನಾಯಕರೊಬ್ಬರು ಪತ್ರಿಕೆಗೆ ತಿಳಿಸಿದರು.

      ಇವತ್ತು ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.ಯೋಜನಾ ಆಯೋಗದ ವತಿಯಿಂದ ನಮಗೆ ನಿಗದಿಯಾದ ಹಣದಲ್ಲಿ ಒಂಭತ್ತು ಸಾವಿರ ಕೋಟಿ ರೂಪಾಯಿ ಕಡಿಮೆಯಾಗಿದೆ.ಅದೇ ರೀತಿ ಕೇಂದ್ರ ಸರ್ಕಾರದ ವತಿಯಿಂದ ಬರಬೇಕಿರುವ ವಿವಿಧ ಬಾಕಿ ಹಣದ ಪ್ರಮಾಣ ಹದಿನಾರು ಸಾವಿರ ಕೋಟಿ ರೂಪಾಯಿಗಳಷ್ಟಿದೆ.

      ಇದೇ ರೀತಿ ಹಲ ಬಾಬ್ತುಗಳು ಸೇರಿ ಒಟ್ಟು ಮೂವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಿದೆ.ವಸ್ತುಸ್ಥಿತಿ ಎಂದರೆ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದು ಕಷ್ಟದ ಪರಿಸ್ಥಿತಿ.
ಯಾಕೆಂದರೆ ಅವರು ಬಜೆಟ್‍ನಲ್ಲಿ ಜನಸಾಮಾನ್ಯರ ಮೇಲೆ ಹೆಚ್ಚು ಹೊರೆ ಹೇರುವಂತಿಲ್ಲ.ಹಾಗೆಂದು ಈ ಪ್ರಮಾಣದ ಆರ್ಥಿಕ ಕೊರತೆಯನ್ನು ಭರಿಸುವ ಮಾರ್ಗಗಳೂ ಇಲ್ಲ.

     ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರದ ಇಮೇಜ್ ಹೆಚ್ಚಿಸುವಂತಹ ನಾಯಕರು ಮಂತ್ರಿಗಳಾಗಬೇಕು.ಆದರೆ ಹಾಲಿ ಸಚಿವ ಸಂಪುಟದಲ್ಲಿರುವ ಬಹುತೇಕರು ಅದಕ್ಷರು.ಅವರು ಏಕಕಾಲಕ್ಕೆ ಮಂತ್ರಿಗಳಾಗಿ ಸಮರ್ಪಕವಾಗಿ ಕೆಲಸ ಮಾಡಲು ಶಕ್ತರಲ್ಲ.ಆದರೆ ಅದೇ ಕಾಲಕ್ಕೆ ಸರ್ಕಾರದ ಇಮೇಜ್ ಹೆಚ್ಚಿಸುವ ಶಕ್ತಿಯೂ ಅವರಿಗಿಲ್ಲ.

     ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಂಪುಟವನ್ನು ಪುನರ್ರಚನೆ ಮಾಡಬೇಕು.ತಿಂಗಳಾಂತ್ಯದ ಒಳಗೆ ಅವರು ಕುರಿತು ಸಿಗ್ನಲ್ ನೀಡಬೇಕು.ಇಲ್ಲದಿದ್ದರೆ ಕ್ವಿಟ್ ಯೂಸ್‍ಲೆಸ್ ಮಿನಿಸ್ಟರ್ಸ್ ಹೋರಾಟವನ್ನು ವಿದ್ಯುಕ್ತವಾಗಿ ಆರಂಭಿಸುತ್ತೇವೆ ಎಂದು ಈ ಶಾಸಕರು ಪತ್ರಿಕೆಗೆ ತಿಳಿಸಿದರು.

     ಈ ಮಧ್ಯೆ ಮಂಗಳವಾರ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಭಿನ್ನಮತೀಯ ಶಾಸಕರ ಮೊದಲ ಹಂತದ ಸಭೆ ನಡೆಯಿತು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅವರು ಇದು ಕೇವಲ ವದಂತಿ.ಹೋರಾಟ ಆರಂಭಿಸುವಾಗ ಬಹಿರಂಗವಾಗಿಯೇ ಹೇಳುತ್ತೇವೆ ಎಂದು ವಿವರಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap