ನವ ದೆಹಲಿ :
ಕೇಂದ್ರ ಸರ್ಕಾರ ಹೊಸದಾಗಿ ನಿರ್ಮಿಸಲು ಮುಂದಾಗಿರುವ ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ಡಿಸೆಂಬರ್ 10 ದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನೇತೃತ್ವದಲ್ಲಿ 25,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. 2024ರ ವೇಳೆಗೆ ಈ ಯೋಜನೆ ಮುಕ್ತಾಯವಾಗಲಿದ್ದು, ಆ ವೇಳೆಗೆ ವೆಚ್ಚ ಎರಡರಷ್ಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಸಂಸತ್ ಭವನದ ಕಾರ್ಯಕ್ಕಾಗಿ ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಮತ್ತು ಭೀಮ್ ರಾವ್ ಅಂಬೇಡ್ಕರ್ ಸೇರಿದಂತೆ ಸುಮಾರು ಐದು ಪ್ರತಿಮೆಗಳನ್ನು ನಿರ್ಮಾಣ ಕಾರ್ಯದಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಸಾಧ್ಯತೆಯಿದೆ.
ಯೋಜನೆ ಪೂರ್ಣಗೊಂಡ ನಂತರ ಹೊಸ ಸಂಸತ್ ಭವನ ಆವರಣದ ಪ್ರಮುಖ ತಾಣಗಳಲ್ಲಿ ಈ ಪುತ್ಥಳಿಗಳನ್ನು ಮರು ಸ್ಥಾಪಿಸಲಾಗುತ್ತದೆ ಎಂದು ಹೇಳಲಾಗಿದೆ.
ನೂತನ ಭವನವು ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಕಚೇರಿಗಳನ್ನು ಹೊಂದಿರುತ್ತದೆ. ಅಲ್ಲದೆ ಕಾಗದ ರಹಿತ ಕಚೇರಿ ರಚಿಸುವುದರ ಭಾಗವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿರುತ್ತದೆ.
ಭಾರತ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಲುವಾಗಿ ಹೊಸ ಸಂಸತ್ತಿನಲ್ಲಿ ಭವ್ಯವಾದ ಸಂವಿಧಾನ ಸಭಾಂಗಣವನ್ನು ರಚಿಸಲಾಗುವುದು. ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಅನೇಕ ಸಮಿತಿ ಕೊಠಡಿಗಳು, ಡೈನಿಂಗ್ ಮತ್ತು ಪಾರ್ಕಿಂಗ್ ಪ್ರದೇಶವನ್ನು ಹೊಂದಿರುತ್ತದೆ.
ಹೊಸ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ಹಾಗೂ ರಾಜ್ಯಸಭೆಯ ಮೇಲ್ಮನೆ ಸದಸ್ಯರಿಗೆ 384 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಉಭಯ ಸದನಗಳ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಆಸನ ಸಾಮರ್ಥ್ಯವನ್ನು ಒದಗಿಸಲಾಗಿದೆ.
ಹೊಸ ಸಂಸತ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ದಿನಾಂಕ ಡಿಸೆಂಬರ್ 10ರ ಆಸುಪಾಸಿನಲ್ಲಿ ನಿಗದಿಯಾಗುವ ಸೂಚನೆಗಳಿದ್ದರೂ, ಪ್ರಧಾನಿ ಮೋದಿಯವರ ಲಭ್ಯತೆ ಆಧರಿಸಿ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
