ಬಿಜೆಪಿ ಕಾರ್ಯಕರ್ತರ ಸಮಾವೇಶ

ಹರಪನಹಳ್ಳಿ:

      ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಪರಸ್ಪರ ಬ್ಲೇಡ್ ಹಿಡಿದುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಬ್ಲೇಡ್ ಯಾರಿಗೆ ಯಾರು ಹಾಕುತ್ತಾರೆ ಎಂಬುದು ಫಲಿತಾಂಶದ ನಂತರವೇ ತಿಳಿಯಲಿದೆ ಎಂದು ವಿಧಾನ ಪರಿಷತ್ತ ಸದಸ್ಯ, ದಾವಣಗೆರೆ ಲೋಕಸಭಾ ಬಿಜೆಪಿ ಉಸ್ತುವಾರಿ ಆಯನೂರು ಮಂಜುನಾಥ ಹೇಳಿದರು.

       ಪಟ್ಟಣದ ನಟರಾಜ ಕಲಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ `ಬಿಜೆಪಿ ಕಾರ್ಯಕರ್ತರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ತುಮಕೂರಿನಲ್ಲಿ ಕಾಂಗ್ರೆಸ್ಸಿನ ಮುದ್ದು ಹನುಮೇಗೌಡರು ದೇವೇಗೌಡರಿಗೆ ಸೆಡ್ಡು ಹೊಡೆದಿದರೆ, ಮಂಡ್ಯದಲ್ಲಿ ಕಾಂಗ್ರೆಸ್ಸಿಗರೆ ಜೆಡಿಎಸ್ ಅಭ್ಯರ್ಥಿಗೆ ಮುಳುವಾಗಿದ್ದಾರೆ. ಇದೇ ಪರಿಸ್ಥಿತಿ ರಾಜ್ಯಾದ್ಯಂತ ಹರಡಿದೆ. ಹೀಗಾಗಿ ಕಾಂಗ್ರೆಸ್ಸಿಗೆ ಜೆಡಿಎಸ್, ಜೆಡಿಎಸ್‍ಗೆ ಕಾಂಗ್ರೆಸ್ ಮುಳ್ಳಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.

       ಎಚ್ಚರವಿದ್ದವರಿಗೆ ಉತ್ತರ ಕೊಟ್ಟು ಅಭ್ಯಾಸವೇ ಹೊರತು ಮಲಗಿಕೊಂಡವರಿಗಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ ಎಸ್.ಎಸ್. ಮಲ್ಲಿಕಾರ್ಜನ ಅವರ ಹೆಸರು ಪ್ರಸ್ತಾಪಿಸದೇ ಟೀಕಿಸಿದ ಅವರು, ಅಪ್ಪ-ಮಕ್ಕಳು ಯಾವಾಗಲೂ ನಿದ್ದೆಯಿಂದ ಎದ್ದು ಬಂದವರಂತೆ ಇರುತ್ತಾರೆ. ಸದ್ಯ ಅವರು ಇನ್ನೂ ಎದ್ದಿರಲಿಕ್ಕಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ತಂದೆ ಬಿಟ್ಟರೆ ಮಗ, ಮಗ ಬಿಟ್ಟರೆ ತಂದೆ ಎಂಬಂತಾಗಿದೆ ಎಂದು ದೂರಿದರು

       ಉಗ್ರಗಾಮಿಗಳನ್ನು ಹುಟ್ಟು ಅಡಗಿಸುವ ಚುನಾವಣೆ ಇದಾಗಿದೆ. ಸಿದ್ದೇಶ್ವರ ಅವರನ್ನು ಗೆಲ್ಲಿಸಿದರೆ ಮೋದಿ ಗೆಲ್ಲಿಸಿದಂತೆ. ಹಿಂದುಳಿದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಚಾಕರಿ ಮಾಡಿ ಗುಲಾಮಗಿರಿ ಸಂಕೇತವಾಗಿದ್ದಾರೆ. ಹಿಂದುಳಿದ ನಾಯಕ ನರೇಂದ್ರ ಮೋದಿ ಭಾರತದ ಸೇವಕರು ಎನಿಸಿಕೊಂಡಿದ್ದಾರೆ ಎಂದರು.

      ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ್ದು ಆಲಿಬಾಬಾ ಹಾಗೂ 10 ಕಳ್ಳರ ಕಥೆಯಾಗಿದೆ. ಪ್ರಜ್ವಲ ಸೋಲಿಸಲು ಅನಿತಾ ಕುಮಾರಸ್ವಾಮಿ, ನಿಕಿಲ್ ಸೋಲಿಸಲು ಭವಾನಿ ರೇವಣ್ಣ ಹೀಗೆ ಆಂತರಿಕ ಕಚ್ಚಾಟದಲ್ಲಿ ಬಿದ್ದಿದ್ದಾರೆ. ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

        ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರಗಳ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಇಷ್ಟ ಬಂದಂತೆ ಬದಲಾವಣೆ ಮಾಡಿದರೆ ಅಭಿವೃದ್ಧಿ ಆದರೂ ಹೇಗಾದಿತು ಎಂದು ಪ್ರಶ್ನಿಸಿದ ಅವರು, ಹಿಂದಿನ ಬಾರಿಗಿಂತಲೂ ಹೆಚ್ಚು ಅಂತರದ ಮತಗಳನ್ನು ಸಿದ್ದೇಶ್ವರ ಅವರಿಗೆ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

        ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್, ಆಯುಷ್ಮಾನ್ ಕಾರ್ಡ್ ವಿತರಣೆ ಹಾಗೂ $10 ಸಾವಿರ ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. $ 650 ಕೋಟಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ನಾನು ನಿಮ್ಮ ಸಣ್ಣ ಚೌಕಿದಾರನಾಗಿ ಕೆಲಸ ಮಾಡಲು ಮತ್ತೊಮ್ಮೆ ಅನುವು ಮಾಡಿ ಕೊಡಿ ಎಂದು ಅವರು ಕೋರಿದರು.

          ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ ಮಾತನಾಡಿ, ಈಚೆಗೆ ಎಸ್.ಎಸ್. ಮಲ್ಲಿಕಾರ್ಜುನ ಅವರು ನನಗೆ, ಸಿದ್ದೇಶ್ವರ ಹಾಗೂ ಆಯನೂರು ಮಂಜುನಾಥ ಅವರಿಗೆ ಏಕವಚನದಲ್ಲಿ ಟೀಕಿಸಿದ್ದಾರೆ. ದಾವಣಗೆರೆ ಉತ್ತರಕ್ಕೂ, ದಕ್ಷಿಣಕ್ಕೂ ಅಪ್ಪ ಮಕ್ಕಳೇ ಶಾಸಕರಾಗಬೇಕು. ನನಗೆ ಸರಾಯಿ ಮಾರುವವನು ಎಂದು ಹೇಳುವ ಇವರು ಬ್ರಾಂಡಿ ತಯಾರು ಮಾಡಿ ಹಂಚುತ್ತಿಲ್ಲವೇ’ ಎಂದು ಪ್ರಶ್ನಿಸಿದ ಅವರು, ಈ ಬಾರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿದರೆ ಮುಂದಿನ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಕಣದಲ್ಲಿ ಇರುವುದಿಲ್ಲ ಎಂದು ಹೇಳಿದರು.

          ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಮುಖಂಡರಾದ ಧನಂಜಯ ಕಡ್ಲೇಬಾಳು, ಎಂ.ಪಿ.ನಾಯ್ಕ, ಕೆ.ಆರ್.ಜಯಶೀಲ, ರಾಘವೇಂದ್ರಶೆಟ್ಟಿ, ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣ ಹಾಲಪ್ಪ, ಎಂ.ಬಿ.ಅಧಿಕಾರ, ಬಿ.ವೈ. ವೆಂಕಟೇಶನಾಯ್ಕ, ಲಿಂಬನಾಯ್ಕ, ಎಲ್.ಮಂಜನಾಯ್ಕ, ಆರ್.ಲೋಕೇಶ್, ಸತ್ಯನಾರಾಯಣ, ಕರೇಗೌಡರ ಇವರೂ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link