ತುಮಕೂರು
ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಾಜಕೀಯ ವ್ಯವಸ್ಥೆ ಬುಡಮೇಲು ಮಾಡುತ್ತಿರುವ ಮೋದಿ ಆಡಳಿತ ಅಂತ್ಯಗೊಳಿಸಬೇಕಾಗಿದೆ. ಸಂವಿಧಾನದ ಆಶಯಗಳನ್ನು ಅಸ್ಥಿರಗೊಳಿಸುತ್ತಾ ಅಪಮಾರ್ಗದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಆಡಳಿತವನ್ನು ಕೊನೆಗಾಣಿಸಬೇಕಾಗಿದೆ ಎಂಉ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದರು.
ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಮೈತ್ರಿ ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಮೋದಿಯ ಸರ್ವಾಧಿಕಾರಿ ವರ್ತನೆಗೆ ಬಿಜೆಪಿ ನಾಯಕರಲ್ಲೇ ಅಸಮಧಾನವಿದೆ, ಅಲ್ಲಿ ಮೋದಿ ಹೊರತು ಇನ್ನಾವ ನಾಯಕನ ಓಲೈಕೆಗೆ ಅವಕಾಶವಿಲ್ಲ, ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದೂ ಇದೆ ಎಂದರು.
ಬಿಜೆಪಿ ಪಕ್ಷ ಸಂಪೂರ್ಣವಾಗಿ ಮೋದಿಯನ್ನು ನಂಬಿಕೊಂಡಿದೆ. ಮೋದಿ ಬಿಟ್ಟರೆ ಬೇರೆಯವರ ಹೆಸರು ಹೇಳುವಂತಿಲ್ಲ ಮೋದಿ ಕೂಡಾ ಪಕ್ಷದ ಹಿರಿಯ ನಾಯಕರ ಹೆಸರು ಹೇಳುವ ಸೌಜನ್ಯ ತೋರುವುದಿಲ್ಲ. ಒಮ್ಮೆ ಮಾತ್ರ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಅವರುಗಳ ಹೆಸರನ್ನು ಹೇಳಿರುವುದು ಬಿಟ್ಟರೆ, ಪಕ್ಷಕ್ಕಾಗಿ ದುಡಿದ ಅಡ್ವಾಣಿ, ಮುರುಳಿಮನೋಹರ ಜೋಷಿ, ಇನ್ನಿತರ ನಾಯಕರು ಜ್ಞಾಪಕಕ್ಕೆ ಬರುತ್ತಿಲ್ಲ. ಒಬ್ಬ ವ್ಯಕ್ತಿಯ ಹೆಸರಿನ ಚುನಾವಣೆಗೆ ದೇಶಕ್ಕೆ ಅಪಾಯಕಾರಿ ಇದಕ್ಕೆ ಕೊನೆ ಹಾಡಬೇಕು ಎಂದರು.
ದಕ್ಷಿಣ ಹೆಬ್ಬಾಗಿಲು ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂಬ ಮೋದಿಯ ಕನಸಿಗೆ ಮೈತ್ರಿ ಪಕ್ಷಗಳು ಕಡಿವಾಣ ಹಾಕಿಯೇ ತೀರುತ್ತೇವೆ ಎಂದ ದೇವೇಗೌಡರು, ಕರ್ನಾಟಕದ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡುತ್ತೇನೆ ಎಂಬ ಮೋದಿ ಭ್ರಮೆಗೆ, ಈ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ದಕ್ಷಿಣದ ಹೆಬ್ಬಾಗಿಲನ್ನು ಬಹುತೇಕ ಮುಚ್ಚಲಿವೆ. ಮೋದಿ ಚಕ್ರಾಧಿಪತ್ಯವನ್ನು ವಿರೋಧಿಸುವುದಕ್ಕಾಗಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಚುನಾವಣೆಯನ್ನು ಎದುರಿಸುತ್ತಿದ್ದು, ದಕ್ಷಿಣ ಭಾರತಕ್ಕೆ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಬಿಜೆಪಿಯನ್ನು ಮೈತ್ರಿ ಪಕ್ಷಗಳು ಕಟ್ಟಿಹಾಕಲಿದ್ದೇವೆ ಎಂದರು.
ದೇಶದಲ್ಲಿ ಜಾತ್ಯಾತೀತ ಸರಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಸರಕಾರವನ್ನು ರಚಿಸಲು ಸಾಧ್ಯವಿಲ್ಲ ಎನ್ನುವುದನ್ನು ಪ್ರಾದೇಶಿಕ ಪಕ್ಷಗಳು ಅರಿತುಕೊಳ್ಳಬೇಕಿದೆ. ಪ್ರಾದೇಶಿಕ ಪಕ್ಷಗಳಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಗೆಹರಿಸಿಕೊಂಡು ಮೋದಿ ಆಡಳಿತಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಹೋರಾಡಬೇಕಿದೆ ಎಂದು ಹೇಳಿದರು.
ಮುಂದಿನ ಐದು ವರ್ಷದೊಳಗೆ ಈ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ನನ್ನ ಆದ್ಯತೆ ಎಂದ ದೇವೇಗೌಡರು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಾನು ಪ್ರಧಾನಿಯಾಗಿದ್ದ 11 ತಿಂಗಳ ಕಾಲ ದೇಶದ ಜಿಡಿಪಿಗೆ ಕೃಷಿ ಮತ್ತು ಕೃಷಿಪೂರಕವಾದ ಹೈನುಗಾರಿಕೆ, ಪಶುಸಂಗೋಪನೆಯಿಂದ 9.9ರಷ್ಟು ಅದಾಯ ಬರುತ್ತಿತ್ತು. ರಸಗೊಬ್ಬರ, ಕಿಮಿನಾಶಕಗಳು,ಕೃಷಿ ಯಂತ್ರೋಪಕರಣಗಳ ಮೇಲೆ ಘೋಷಿಸಿದ ರಿಯಾಯಿತಿಯಿಂದಾಗಿ, ಕೃಷಿ ಆದಾಯ ಬೆಳವಣಿಗೆಯಾಗಿತ್ತು. ಆದರೆ ಇಂದು ಆ ರೀತಿಯ ಪ್ರೋತ್ಸಾಹದಾಯಕ ಅಂಶಗಳು ಕಂಡು ಬರುತ್ತಿಲ್ಲ ಎಂದು ದೇವೇಗೌಡರು ಹೇಳಿದರು.
ಪ್ರತ್ಯೇಕ ಕೃಷಿ ಬಜೆಟ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರು ನೀಡಿರುವ ಭರವಸೆ, ಕೇಂದ್ರದಲ್ಲಿಯೂ ಮೈತ್ರಿ ಸರಕಾರ ರಚನೆಯಾದರೆ, ಆ ಸಂದರ್ಭದಲ್ಲಿ ಪರಿಶೀಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಾಘಟ ಬಂಧನ್ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದರು.ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಹೆಚ್.ವೆಂಕಟೇಶ್, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಜೆಡಿಎಸ್ ಮುಖಂಡ ಗೋವಿಂದರಾಜು, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮತ್ತಿತರರು ಹಾಜರಿದ್ದರು.