ಐ.ಡಿ.ಹಳ್ಳಿ
ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ದೇವೇಗೌಡರು ಜಾತ್ಯತೀತ ತತ್ವಗಳನ್ನು ಬೆಂಬಲಿಸುವುದರಿಂದ ನಾವೆಲ್ಲರೂ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷದ ಕಾರ್ಯಕರ್ತರು ಮತ್ತು ಕಾಲನಿಯ ಯುವಕ ಮಿತ್ರರು ಈ ಬಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ, ಮಾಜಿ ಪ್ರಧಾನಿಗಳಾದ ದೇವೇಗೌಡರಿಗೆ ಭಾರೀ ಬೆಂಬಲ ನೀಡಬೇಕೆಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಕೀಲ ಬಿ.ನರಸಿಂಹಮೂರ್ತಿ ಕಾಲನಿಗಳಲ್ಲಿ ಮತದಾರರಿಗೆ ತಿಳಿಸಿದರು.
ಐ ಡಿ ಹಳ್ಳಿ ಗ್ರಾಮದ ದಲಿತ ಕಾಲನಿಯ ಬೀದಿಬೀದಿಗಳಿಗೆ ಭೇಟಿ ನೀಡಿ ದಲಿತ ಮತದಾರರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಮೈತ್ರಿ ಪಕ್ಷದ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಬಿಜೆಪಿ ಪಕ್ಷ ಕೋಮುವಾದಿ ಪಕ್ಷ. ಆದ್ದರಿಂದ ಈ ಬಾರಿ ಆ ಕೋಮುವಾದಿ ಪಕ್ಷವನ್ನು ಸೋಲಿಸಲೇಬೇಕೆಂದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಎರಡು ಪಕ್ಷಗಳ ಮುಖಂಡರು ಮೈತ್ರಿ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಸಿಹಿ ಸುದ್ದಿ ಆಗಿದೆ. ಆದ್ದರಿಂದ ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಮತಯಾಚನೆ ಮಾಡಬೇಕು. ಏಕೆಂದರೆ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪ್ರಧಾನಿಗಳಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಎಂದರೆ ದೇವೇಗೌಡರು ಮಾತ್ರ. “ದೇವೇಗೌಡರು ವ್ಯಕ್ತಿಯಲ್ಲ, ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದ ಶಕ್ತಿ” ಎಂದರೂ ತಪ್ಪಾಗಲಾರದು. ಆದ್ದರಿಂದ ಈ ಬಾರಿ ತುಮಕೂರು ಲೋಕಸಭಾ ಚುನಾವಣೆಗೆ ಬಂದಿರುವಂತಹ ಕಾರಣದಿಂದ ಅತಿ ಹೆಚ್ಚಿನ ಮತಗಳನ್ನು ನೀಡಿ ಈಗಿನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಯುವಕರು ಗೆಲ್ಲಿಸಿದರೆ ತುಮಕೂರು ಜಿಲ್ಲೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿಯಾಗುತ್ತದೆ ಎಂದರು.
ಈ ಬಾರಿ ಮಾಜಿ ಸಂಸದರಾದ ಜಿ.ಎಸ್. ಬಸವರಾಜು ಆಕಸ್ಮಿಕವಾಗಿ ಗೆದ್ದರೆ ಬರೀ ಸಂಸದರಾಗಿಯೇ ಉಳಿಯುತ್ತಾರೆ. ಆದರೆ ನಮ್ಮ ತುಮಕೂರು ಜಿಲ್ಲೆಯಲ್ಲಿ ದೇವೇಗೌಡರು ಗೆದ್ದರೆ ಇಡೀ ಭಾರತ ದೇಶದಲ್ಲಿಯೇ ಪ್ರಥಮರಾಗಿ ಲೋಕಸಭೆಯಲ್ಲಿ ಇದ್ದು ತುಮಕೂರಿಗೆ ಬೇಕಾಗಿರುವಂತಹ ಅಭಿವೃದ್ಧಿಯ ಕೆಲಸಗಳನ್ನು ಮಾಡಿಸುತ್ತಾರೆ. ಆ ಮೂಲಕ ಈ ರಾಜ್ಯದಲ್ಲಿರುವ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ರೈತರ ಪರ ಧ್ವನಿ ಎತ್ತಿ ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೂ ಎತ್ತಿನಹೊಳೆ ಮುಖಾಂತರ ನೀರನ್ನು ತುಂಬುತ್ತಾರೆ. ವಿಶ್ವಾಸವನ್ನು ಇಟ್ಟು ಈ ಜಿಲ್ಲೆಯಲ್ಲಿರುವ ಯುವಕ ಮತದಾರರು ದೇವೇಗೌಡರಿಗೆ ಈ ಬಾರಿ ಅತೀ ಹೆಚ್ಚಿನ ಮತಗಳನ್ನು ನೀಡಿ ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ತುಮಕೂರು ಜಿಲ್ಲೆಯ ಸಂಸದರನ್ನಾಗಿ ಮಾಡುವುದರ ಮೂಲಕ ಇಡೀ ನಮ್ಮ ಭಾರತ ದೇಶಕ್ಕೆ ಒಂದು ಸಂದೇಶವನ್ನು ಕಳುಹಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಜೀರ್ ಸಾಬ್, ಜೆಡಿಎಸ್ ಮುಖಂಡ ಲಿಂಗಣ್ಣ, ಯುವಕ ಮುಖಂಡರಾದ ಪ್ರಸಾದ್, ಶಿವಕುಮಾರ್, ನರಸಿಂಹಮೂರ್ತಿ, ಹರೀಶ, ಸಂಜೀವಪ್ಪ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








