ಗುಬ್ಬಿ
ರಕ್ತದಾನ ಎಲ್ಲಾ ದಾನಗಳಿಗಿಂತಲೂ ಸರ್ವ ಶ್ರೇಷ್ಠವಾದುದಾಗಿದ್ದು ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಯಾಗುವುದಿಲ್ಲ ಎಂದು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಅಧ್ಯಕ್ಷ ಎಸ್.ನಾಗಣ್ಣ ತಿಳಿಸಿದರು.
ಪಟ್ಟಣದ ಸಮೀಪದ ಶ್ರೀಚನ್ನಬಸವೇಶ್ವರ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಯನ್ಸ್ ಸಂಸ್ಥೆ, ಯೂತ್ ರೆಡ್‍ಕ್ರಾಸ್ ಯೂನಿಟ್, ಸಿ.ಐ.ಟಿ ಎನ್.ಎಸ್.ಎಸ್. ಯೂನಿಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ, ತುರ್ತು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತ ಅತ್ಯಶ್ಯಕವಾಗಿದ್ದು, ಒಬ್ಬರು ದಾನ ಮಾಡುವ ರಕ್ತ ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ಉಳಿಸುತ್ತದೆ. ಆದ್ದರಿಂದ ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರನ್ನು ಉಳಿಸುವಂತಹ ಮಹತ್ವದ ಕಾರ್ಯ ಮಾಡಬೇಕೆಂದು ತಿಳಿಸಿದರು.
ರೆಡ್‍ಕ್ರಾಸ್ ಸಂಸ್ಥೆ ರಾಜ್ಯದಾದ್ಯಂತ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಆರೋಗ್ಯ ತಪಾಸಣಾ ಶಿಬಿರಗಳು ಸೇರಿದಂತೆ ರಕ್ತದಾನ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಶಿಬಿರಗಳ ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗುವಂತೆ ಕರೆನೀಡಿದರು.
ಶ್ರೀಚನ್ನಬಸವೇಶ್ವರ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಸ್.ಸುರೇಶ್ ಮಾತನಾಡಿ, ಕಾಲೇಜಿನ ಯೂತ್ ರೆಡ್‍ಕ್ರಾಸ್ ಯೂನಿಟ್ ಮತ್ತು ಎನ್.ಎಸ್.ಎಸ್.ಯೂನಿಟ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳು ಸೇರಿದಂತೆ ರಕ್ತದಾನ ಶಿಬಿರವನ್ನು ಪ್ರತಿ ವರ್ಷವೂ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಮುಖ್ಯವಾದುದು. ರಕ್ತದಾನ ಶ್ರೇಷ್ಠವಾದುದುದಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು ರಕ್ತದಾನ ಮಾಡುವ ಮೂಲಕ ಆರೋಗ್ಯ ಸಮಸ್ಯೆಯಲ್ಲಿರುವ ವ್ಯಕ್ತಿಗೆ ಸಹಕಾರ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಂಡೆರಾಮಯ್ಯ ಲಯನ್ಸ್ ಸಂಸ್ಥೆ ಪ್ರಪಂಚದಾದ್ಯಂತ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಲಯನ್ಸ್ ಸಂಸ್ಥೆಯು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಂತ್ರಸ್ತರಿಗೆ ನೆರವು ನೀಡುವುದು ಸೇರಿದಂತೆ ಸಾಮಾಜಿಕವಾಗಿ ತೀವ್ರತರ ಸಮಸ್ಯೆಗಳಿಗೆ ತುತ್ತಾದವರಿಗೆ ನೆರವು ನೀಡುವಂತಹ ಮಹತ್ವದ ಸೇವಾ ಕಾರ್ಯಗಳನ್ನು ಮಾಡುತ್ತಿದೆ.
ಪರಿಸರ ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ ಮುಂತಾದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ ಮಾತನಾಡಿ, ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾದ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಿಐಟಿ ಎನ್.ಎಸ್.ಎಸ್ .ಘಟಕದ ಯೋಜನಾಧಿಕಾರಿ ಎನ್.ಎಸ್.ರವಿ, ಸಿಐಟಿ ಯೂತ್ ರೆಡ್‍ಕ್ರಾಸ್ ಯೂನಿಟ್ ಯೋಜನಾಧಿಕಾರಿ ಜಿ.ಎಲ್.ಲಿಂಗನಗೌಡ, ಲಯನ್ಸ್ ಸಂಸ್ಥೆಯ ಖಜಾಂಚಿ ಸಿದ್ದಪ್ಪ ಗುಜ್ಜರಿ, ಪದಾಧಿಕಾರಿಗಳಾದ ಎ.ಎಸ್.ರೇಣುಕಯ್ಯ, ಡಿ.ಆರ್.ಕೀರ್ತಿರಾಜ್, ಕೆ.ಎಲ್.ಗೋಪಾಲಕೃಷ್ಣಶೆಟ್ಟಿ, ಶಿವರಾಜು, ಎಲ್.ವಿ.ಸಾವಂತ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ