ಮಧುಗಿರಿ
ಮಧುಗಿರಿ ಪಟ್ಟಣದ ಲಿಂಗೇನಹಳ್ಳಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಇಟ್ಟಿದ್ದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಲು ಮುಂದಾದಾಗ, ಪೆಟ್ಟಿಗೆ ಅಂಗಡಿ ಮಾಲೀಕ ಹಾಗೂ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಮಧುಗಿರಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಾರ್ವಜನಿಕ ರಸ್ತೆಯಲ್ಲಿ ಹಲವಾರು ತಿಂಗಳಿನಿಂದ ಪೆಟ್ಟಿಗೆ ಅಂಗಡಿ ಇಟ್ಟು, ರಸ್ತೆಯನ್ನು ಒತ್ತವರಿ ಮಾಡಿಕೊಂಡಿದ್ದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಓಡಾಡಲು ದಾರಿ ಇಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಒತ್ತುವರಿ ಜಾಗವವನ್ನು ತೆರವುಗೊಳಿಸಲೇಬೇಕೆಂದು ನಿವಾಸಿಗಳು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ಪಿಎಸ್‍ಐ ಎಲ್.ಕಾಂತರಾಜು ಪೆಟ್ಟಿಗೆ ಅಂಗಡಿಯ ಮಾಲೀಕನಿಗೆ ಎಚ್ಚರಿಕೆ ನೀಡಿ ಒತ್ತುವರಿ ರಸ್ತೆಯನ್ನು ತೆರವುಗೊಳಿಸುವಂತೆ ಸೂಚಿಸಿದಾಗ, ಅಂಗಡಿ ಮಾಲೀಕ ಪೆಟ್ಟಿಗೆ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಿದರು. ಒತ್ತುವರಿಯನ್ನು ತೆರವುಗೊಳಿಸದ ಅಧಿಕಾರಿಗಳ ಕ್ರಮಕ್ಕೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ, ಪಿಎಸ್‍ಐ ಎಲ್.ಕಾಂತರಾಜು, ಪುರಸಭೆ ಕಂದಾಯ ಅಧಿಕಾರಿ ಸಂತೋಷ್, ನಿರೀಕ್ಷಕ ಶಿವಣ್ಣ, ಎಂಜಿನಿಯರ್ ಶ್ರೀರಂಗಯ್ಯ, ಹಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ, ಕಿರಿಯ ಆರೋಗ್ಯ ನಿರೀಕ್ಷಕ ಉಮೇಶ್, ಮುಖಂಡರಾದ ಎಸ್‍ಬಿಟಿ ರಾಮು, ಆನಂದ್, ನವಾಬ್ ಜಾನ್, ಬಾಬ ಫಕೃದ್ದೀನ್, ನಿಜಾಮ್, ಇಮ್ರಾನ್, ಷರೀಫ್, ಅಮ್ರಾಜ್, ಶೌಕತ್, ಏಜಾಜ್ ಅಹಮದ್ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ