ಬೆಂಗಳೂರು-
ಕೋಲ್ಕಾತ್ತಾದ ಹೌರ ಸೇತುವೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕೆಆರ್‍ಪುರ ತೂಗು ಸೇತುವೆಗೆ ಆಪಾಯದ ಭೀತಿ ಎದುರಾಗಿದೆ.
ನಾಲ್ಕೈದು ವರ್ಷಗಳಿಂದ ಸೇತುವೆ ಮೇಲೆ ಹತ್ತಾರು ಬಗೆಯ ಮರ ಗಿಡಗಳು ಬೆಳೆದು ನಿಂತು ಸರಿಯಾದ ನಿರ್ವಹಣೆಯಿಲ್ಲದಿರುವುದು ಸೇತುವೆಗೆ ಕಂಟಕವಾಗಿ ಪರಿಣಮಿಸಿದೆ.
ಐಟಿ/ಬಿಟಿ ಕೆಂದ್ರವಾದ ವೈಟ್ ಫೀಲ್ಡ್, ಮಾರತ್ತಹಳ್ಳಿ ಕಡೆಗೆ ತೆರಳಲು ಇದು ರಾಜ ಮಾರ್ಗವಾಗಿರುವ ಕಾರಣ ಈ ತೂಗು ಸೇತುವೆ ಮೇಲೆ ಪ್ರತಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಆದರೆ ಸೇತುವೆಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಹೊಣೆ ಮರೆತಿರುವುದು ಬೇಜಾವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಸೇತುವೆಯ ಎರಡೂ ಬದಿಗಳಲ್ಲಿ ಅರಳಿ ಮರ, ಆಲದ ಮರ, ಬೇವಿನ ಮರ, ನೇರಳೆ ಸೇರಿದಂತೆ ವಿವಿಧ ಪ್ರಭೇದಕ್ಕೆ ಸೇರಿದ್ದ ಹತ್ತಾರು ಬಗೆಯ ಮರ ಗಿಡಗಳು ಬೆಳೆಯುತ್ತಿವೆ. ಈಗ ಮರ ಗಿಡಗಳ ಗಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿರುಕು ಬಿಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆಯ ಕೆಲ ತಡೆ ಗೋಡೆಗಳು ಬಿರುಕು ಬಿಟ್ಟಿವೆ. ಒಂದು ಕಡೆ ತಡೆ ಗೋಡೆ ಕೆಳಗೆ ಬಿದ್ದಿದ್ದು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತುಕೊಂಡು ಕೂಡಲೇ ತೂಗು ಸೇತುವೆಯಲ್ಲಿ ಬೆಳದಿರುವ ಗಿಡಗಳನ್ನು ತೆರವುಗೊಳಿಸಿ ಸೇತುವೆಯನ್ನು ಉಳಿಸಬೇಕಾಗಿದೆ.
ಸೇತುವೆ ಮಾರ್ಗವಾಗಿ ಹೊಸಕೋಟೆ ಮಾರ್ಗದ ಮೂಲಕ ಚಿಂತಾಮಣಿ, ಕೋಲಾರ, ಮುಳಬಾಗಿಲು, ಕೆಜಿಎಪ್, ಮದನಪಲ್ಲಿ, ತಿರುಪತಿ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಇದೇ ಮಾರ್ಗವಾಗಿ ತೆರಳಬೇಕು.
ಈ ಭಾಗದಲ್ಲಿ ಮೀತಿ ಮೀರಿದ ವಾಹನ ದಟ್ಟಣೆಯನ್ನು ತಗ್ಗಿಸಲೆಂದು ತೂಗು ಸೇತುವೆ ಮಾಡಲಾಗಿದೆ. ಒಂದೂವರೆ ಕಿ.ಮೀ.ಗೂ ಹೆಚ್ಚು ಉದ್ದ ಹಾಗೂ 180 ಮೀಟರ್ ಎತ್ತರವಿರುವ ಕೇಬಲ್ ಸೇತುವೆ ಜನವರಿ 23, 2003ರಲ್ಲಿ ನಿರ್ಮಾಣವಾಗಿದೆ. ಸೇತುವೆಯನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲೋಕರ್ಪಣೆಗೊಳಿಸಿ ಸಾರ್ವಜನಿಕ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದರು. ತೂಗು ಸೇತುವೆ ನಿರ್ವಹಣೆ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಹಿಸಿಕೊಂಡಿದೆ. ಆದರೆ ಸೇತುವೆ ನಿರ್ಮಿಸಿ 14 ವರ್ಷ ಕಳೆದರೂ ನಿರ್ವಹಣೆ ಕೊರತೆ ಕಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








