ಹೊರಟ್ಟಿ ಸಮಿತಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ:

     ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಎಸ್.ಹೊರಟ್ಟಿರವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.

    ಸರ್ಕಾರಿ ಕೋಟೆ ಪ್ರೌಢಶಾಲೆಯಲ್ಲಿ ಸಭೆ ನಡೆಸಿ ನಂತರ ಮೆರವಣಿಗೆ ಮೂಲಕ ಆಗಮಿಸಿದ ಶಿಕ್ಷಕರು ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಕುಮಾರನಾಯಕ್‍ರವರ ವರದಿಯನ್ವಯ 1-6-2016 ರಿಂದ ಅನ್ವಯವಾಗುವಂತೆ ನೀಡಲಾಗಿದ್ದ ಒಂದು ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿ ಹಿಂಬಾಗಿಲಿನ ಮೂಲಕ ವಾರ್ಷಿಕ ಬಡ್ತಿಯ ಸವಲತ್ತನ್ನು ಕಡಿತಗೊಳಿಸುತ್ತಿರುವ ಕ್ರಮವನ್ನು ಕೂಡಲೆ ಕೈಬಿಟ್ಟು ಮೂಲ ವೇತನದೊಂದಿಗೆ ಮುಂದುವರೆಸಬೇಕು.

      ದಿನಾಂಕ:1-8-2018 ರ ನಂತರ ಪ್ರಾಥಮಿಕ ಶಾಲೆಯಿಂದ ಮುಂಬಡ್ತಿ ಹಾಗೂ ನೇರನೇಮಕಾತಿಯ ಮೂಲಕ ಆಯ್ಕೆಯಾಗಿ ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ 400 ರೂ.ವಿಶೇಷ ಭತ್ಯೆಯನ್ನು ಮಂಜೂರು ಮಾಡಿ 6 ನೇ ವೇತನ ಆಯೋಗದ ಶಿಫಾರಸ್ಸಿನನ್ವಯ 1-4-2018 ರಿಂದ ಒಂದು ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡಬೇಕು.

      ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತವನ್ನು ಈಗಿನ 70:1 ರ ಬದಲಾಗಿ 50:1 ರಂತೆ ನಿಗಧಿಪಡಿಸುವ ಮೂಲಕ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನುಕೂಲ ಕಲ್ಪಿಸಬೇಕು.

     ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಹಾಗೂ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಮುಂಬಡ್ತಿ ಹೊಂದಿದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಹಿಂದಿನ ವೃಂದದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 10, 15, 25 ವರ್ಷಗಳ ಸ್ವಯಂಚಾಲಿತ, ಕಾಲಮಿತಿ ಬಡ್ತಿಗಳನ್ನು ಆರನೆ ವೇತನ ಆಯೋಗದ ಶಿಫಾರಸ್ಸಿನಂತೆ ಮಂಜೂರು ಮಾಡಬೇಕು ಎಂದು ಶಿಕ್ಷಕರುಗಳು ಒತ್ತಾಯಿಸಿದರು.

      ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೆ ಆರಂಭಿಸಬೇಕು. ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರಿಗೆ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಹಿಂದಿನ ನಿಯಮದನ್ವಯ ಶೇ.50:50 ರ ಅನುಪಾತದಲ್ಲಿ ಯಾವುದೇ ನಿಬಂಧನೆಗಳಿಗೆ ಒಳಪಡಿಸದೆ ಮುಂಬಡ್ತಿ ನೀಡುವುದು.

       ರಜಾ ಅವಧಿಯಲ್ಲಿ ತರಗತಿಗಳು, ಗಣತಿಕಾರ್ಯಗಳು, ಭೋದಕೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದನ್ನು ರದ್ದುಗೊಳಿಸುವುದು. ಪ್ರೌಢಶಾಲಾ ಸಹಶಿಕ್ಷಕರನ್ನು ರಜಾರಹಿತ ನೌಕರರೆಂದು ಪರಿಗಣಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾನಿರತ ಶಿಕ್ಷಕರುಗಳು ಆಗ್ರಹಿಸಿದರು.

      ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟೇಶ್‍ರೆಡ್ಡಿ, ಉಪಾಧ್ಯಕ್ಷ ಎಸ್.ರಾಜಪ್ಪ, ಖಜಾಂಚಿ ಎಸ್.ಜಯಣ್ಣ, ಸಹ ಕಾರ್ಯದರ್ಶಿ ಜಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಹನುಮಂತಪ್ಪ, ರಾಜ್ಯ ಪದಾಧಿಕಾರಿ ದೊಡ್ಡಯ್ಯ, ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link