ಬಳ್ಳಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ 5ರೊಳಗೆ ತನ್ನಿ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ

         ಬಳ್ಳಾರಿ ಜಿಲ್ಲೆಯ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ 5ರೊಳಗೆ ಬರುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ವಿಶೇಷ ತರಗತಿ, ಕ್ರಿಯೆಟಿವ್ ಕ್ಲಾಸ್,ನೈಟ್ ಕ್ಲಾಸ್, ಶಿಕ್ಷಕರು ಒದಗಿಸುವಿಕೆ ಸೇರಿದಂತೆ ಇನ್ನೀತರ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ 12ನೇ ಸ್ಥಾನದಿಂದ ಟಾಪ್ 5ರೊಳಗೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.

        ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬರಲು ಕಾರಣಿಕರ್ತರಾದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಕ್ರಿಯೆಟಿವ್ ಕ್ಲಾಸ್ ವರ್ಕಬುಕ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

        ಟಾಪ್ 5ರೊಳಗೆ ಬಳ್ಳಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬರುತ್ತದೆ ಎಂಬ ಆಶಾಭಾವನೆ ನಮಗೆ ಇದೆ. ಇದಕ್ಕೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಡಲಿದೆ. ಶೇ.100ರಷ್ಟು ಫಲಿತಾಂಶ ತಂದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕಳೆದ ಬಾರಿಯ ದೆಹಲಿ ಪ್ರವಾಸದಂತೆ ಈ ಬಾರಿಯೂ ಪ್ರವಾಸ ಆಯೋಜಿಸಲಾಗುವುದು. ಸ್ಥಳಗಳನ್ನು ನಂತರ ಘೋಷಿಸಲಾಗುವುದು ಎಂದರು.

         ನೈಟ್‍ಕ್ಲಾಸ್,ಕ್ರಿಯೆಟಿವ್ ಕ್ಲಾಸ್ ಹಾಗೂ ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಶಿಕ್ಷಕರಿಗೆ ಪ್ರೋತ್ಸಾಹಧನವನ್ನು ಈ ಬಾರಿಯೂ ವಿತರಿಸಲಾಗುವುದು ಎಂದು ಹೇಳಿದ ಡಿಸಿ ರಾಮ್ ಪ್ರಸಾತ್ ಅವರು, ಕಳೆದ 3 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಥಮ ಶ್ರೇಣಿ,ಡಿಸ್ಟಿಂಕ್ಷನ್‍ಗಳು ಬರುತ್ತಿದ್ದು, ಇದನ್ನು ಈ ಬಾರಿಯೂ ಮುಂದುವರಿಸಬೇಕು ಎಂದರು.

       ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿತಿಸಿ ಅವರ ಏಳಿಗೆಗೆ ಮುಂದಾಗುವವರೆ ನಿಜವಾದ ಶಿಕ್ಷಕರು ಎಂದು ಹೇಳಿದರು.

        ಪ್ರತಿಯೊಂದು ಶಾಲೆಯಲ್ಲೂ ಪ್ರತಿಶತ ನೂರರಷ್ಟು ಫಲಿತಾಂಶ ಬರಲಿ. ನಪಾಸಾದ ಮಗು ದುಶ್ಚಟಗಳಿಗೆ ಬಲಿಯಾಗಿ ಸಮಾಜಕ್ಕೆ ಮಾರಕವಾಗಬಹುದು. ಹೆಣ್ಣಾದರೆ ದೌರ್ಜನ್ಯಕ್ಕೊಳಗಾಗಬಹುದು ಆದರೆ, ಶಿಕ್ಷಕರಿಗೆ ಅವುಗಳೆಲ್ಲವನ್ನೂ ಸರಿ ಮಾಡುವ ಶಕ್ತಿ ಇದೆ. ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಮರ್ಥವಾಗಿರಬೇಕು. ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತರಾಗದೇ, ಪಠ್ಯೇತರ ಚಟುವಟಿಕೆಗಳಲ್ಲಿ ಸಮರ್ಥವಾಗಿ ಪಾಲ್ಗೊಂಡರೆ ಉತ್ತಮ ಫಲಿತಾಂಶ ನಿರೀಕ್ಷಸಲು ಸಾಧ್ಯ ಎಂದರು.

         ಒಬ್ಬ ವಿದ್ಯಾರ್ಥಿಯ ಜೀವನ ಶಿಕ್ಷಕರ ಕೈಯಲ್ಲಿದೆ. ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಿ ಅವರನ್ನು ಸರಿದಾರಿಗೆ ತರಬೇಕು ಬಳ್ಳಾರಿ ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 12 ನೇ ಸ್ಥಾನದಿಂದ 3ರೊಳಗಿನ ಸ್ಥಾನಕ್ಕೆ ಜಿಗಿಯಲು ಪ್ರಯತ್ನಿಸಿ. ಪ್ರತಿದಿನ ಕೇವಲ ಒಂದು ತಾಸು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿ. ನ್ಯೂನ್ಯತೆಗಳು ಮಕ್ಕಳ ಜೀವನಕ್ಕೆ ಮಾರಕವಾಗದಂತೆ ಕ್ರಮ ಕೈಗೊಂಡು ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ತರಲು ಪ್ರಯತ್ನಿಸಿ ಎಂದರು.ಮಕ್ಕಳಲ್ಲಿ ಉತ್ತಮ ವಿಚಾರಗಳನ್ನು ಬಿತ್ತಿ ಫಲಿತಾಂಶ ಪಟ್ಟಿಯಲ್ಲಿ ಮೇಲೆರಲು ಪ್ರಯತ್ನಿಸಿ ಎಂದು ಹೇಳಿದರು.

         ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಳೆದ ಸಾಲಿನಲ್ಲಿ ಶೇ.100ರಷ್ಟು ಫಲಿತಾಂಶ ಗಳಿಸಿದ ಶಾಲೆಗಳ ಮುಖ್ಯ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಾಗಾರದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರೆಹಮತ್‍ವುಲ್ಲಾ, ಜಿಲ್ಲೆಯ ಎಲ್ಲ ಕ್ಷೇತ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸರಕಾರಿ ಹಾಗೂ ಖಾಸಗಿ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link